
ಶಬರಿಮಲೆ ದೇವಸ್ಥಾನದಲ್ಲಿ ನಡೆದ ಬಹು ಕೋಟಿ ಮೌಲ್ಯದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ ಪೊಟ್ಟಿ ಅವರ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಮನೆ ಹಾಗೂ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು 10 ಮಂದಿ ಇಡಿ ಅಧಿಕಾರಿಗಳ ತಂಡ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಸಾಧ್ಯತೆ ಇದೆ. ಈ ದಾಳಿ ಬೆಂಗಳೂರು, ಬಳ್ಳಾರಿ ಮತ್ತು ಕೇರಳದ ತಿರುವನಂತಪುರಂ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.
ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣವು 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಹಾಗೂ ಮುಂಭಾಗದ ದ್ವಾರಪಾಲಕ ಶಿಲ್ಪಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4 ಕಿಲೋಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ಉನ್ನಿಕೃಷ್ಣನ್ ಮೊದಲ ಆರೋಪಿ ಆಗಿದ್ದರೆ, ಶಬರಿಮಲೆ ದೇವಸ್ವಂ ಮಂಡಳಿಯ ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು ಎರಡನೇ ಆರೋಪಿ ಆಗಿದ್ದಾರೆ.
ದ್ವಾರಪಾಲಕ ಮೂರ್ತಿಗಳ ಮೇಲೆ ಚಿನ್ನದ ಎಲೆಕ್ಟ್ರೋಪ್ಲೇಟಿಂಗ್ ಮಾಡಲು ಎಂಬ ನೆಪದಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಪೊಟ್ಟಿ ಉನ್ನಿಕೃಷ್ಣನ್ ಪಡೆದಿದ್ದ ಎನ್ನಲಾಗಿದೆ. ಆದರೆ ಈ ಚಿನ್ನವನ್ನು ಅನುಮತಿ ಇಲ್ಲದೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ದೇವಾಲಯಗಳು ಹಾಗೂ ಖಾಸಗಿ ಮನೆಗಳಿಗೆ ಸಾಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಈ ಪೈಕಿ 475 ಗ್ರಾಂ ಚಿನ್ನವನ್ನು ಬಳ್ಳಾರಿಯ ಜುವೆಲರ್ ಗೋವರ್ಧನ್ ಅನ್ನೋರಿಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪವೂ ಇದೆ. ಈ ಚಿನ್ನ ಕಳವು ಮತ್ತು ಮಾರಾಟಕ್ಕೆ ಮುರಾರಿ ಬಾಬು ಸಹಾಯ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
2019ರ ತನಕ ಪೊಟ್ಟಿ ಉನ್ನಿಕೃಷ್ಣನ್ ಶಬರಿಮಲೆಯಲ್ಲಿ ವಿಐಪಿ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡುವ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ಮೂಲಕ ಹಲವು ಪ್ರಭಾವಿಗಳೊಂದಿಗೆ ಸಂಪರ್ಕ ಸಾಧಿಸಿ, ತನ್ನ ಪ್ರಭಾವ ಬಳಸಿ ಅಕ್ರಮ ಚಟುವಟಿಕೆಗಳನ್ನು ನಡೆಸಿದ್ದಾನೆ ಎಂಬ ಆರೋಪವೂ ತನಿಖೆಯ ಭಾಗವಾಗಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಹಣ ಶುದ್ಧೀಕರಣ ತಡೆ ಕಾಯ್ದೆ (PMLA) ಅಡಿಯಲ್ಲಿ ಕೊಚ್ಚಿ ಘಟಕದಲ್ಲಿ ECIR ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಹಿಂದೆ ಈ ಪ್ರಕರಣದ ತನಿಖೆಯನ್ನು ಕೇರಳ ವಿಶೇಷ ತನಿಖಾ ತಂಡ (SIT) ನಡೆಸಿದ್ದು, ನಂತರ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡಿದೆ.
ಈ ಪ್ರಕರಣದ ಭಾಗವಾಗಿ, ಬಳ್ಳಾರಿಯಲ್ಲಿ ರೊದ್ದಂ ಜ್ಯುವೆಲರ್ ಮಾಲೀಕ ಗೋವರ್ಧನ್ ಅವರ ಅಂಗಡಿಗೆ ಇಡಿ ತಂಡ ದಾಳಿ ನಡೆಸಿದೆ. ನಾಲ್ಕೂವರೆ ಕಿಲೋಗ್ರಾಂ ಚಿನ್ನ ನಾಪತ್ತೆ ಸಂಬಂಧಿಸಿದಂತೆ ಈ ಶೋಧ ನಡೆಯುತ್ತಿದೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್ ಜೊತೆ ಸೇರಿ ಚಿನ್ನದ ದ್ವಾರ ಬಾಗಿಲು ನಿರ್ಮಾಣದಲ್ಲಿ ಗೋವರ್ಧನ್ ಪಾತ್ರವಿದೆ ಎನ್ನಲಾಗಿದೆ.
ಈಗಾಗಲೇ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ಇತ್ತೀಚೆಗೆ ಅವರ ಅಂಗಡಿ ಮತ್ತು ಮನೆ ಮೇಲೆ ಸಿಆರ್ಪಿಎಫ್ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ಇಂಚಿಂಚಾಗಿ ತಪಾಸಣೆ ನಡೆಸಿದ್ದಾರೆ. ಜ್ಯುವೆಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಕರೆಸಲಾಗಿದೆ.
ಈ ಹಿಂದೆ ಕೇರಳ ಎಸ್‌ಐಟಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದರೆ, ಇದೀಗ ಇಡಿ ಅಧಿಕಾರಿಗಳು ಪ್ರಕರಣವನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡು ಹಣಕಾಸು ಮತ್ತು ಅಕ್ರಮ ಆಸ್ತಿ ಜಾಲದ ಮೇಲೆ ಗಮನ ಹರಿಸಿದ್ದಾರೆ. ಸದ್ಯ ಬೆಂಗಳೂರು, ಬಳ್ಳಾರಿ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಇಡಿ ದಾಳಿ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ