ಬಿಟ್ ಕಾಯಿನ್: ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್

Published : May 10, 2026, 02:22 PM IST
sriki bitcoin case

ಸಾರಾಂಶ

ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ. ಸರ್ಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ, ಹಣವನ್ನು ಬಿಟ್‌ಕಾಯಿನ್ ಮೂಲಕ ವರ್ಗಾಯಿಸುತ್ತಿದ್ದ ಈ ಜಾಲವನ್ನು ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಆರೋಪದಡಿ ಬಹುಕೋಟಿ ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ, ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಕಿ ಜೊತೆಗೆ ಆತನ ಸಹಚರರಾದ ರಾಬಿನ್ ಖಂಡೇವಾಲಾ ಮತ್ತು ಸುನೀಶ್ ಹೆಗ್ಡೆ ಅವರನ್ನು ಕೂಡ ಬಂಧಿಸಲಾಗಿದೆ.

ಶುಕ್ರವಾರ ತಡರಾತ್ರಿ ಬಂಧಿಸಲ್ಪಟ್ಟ ಮೂವರು ಆರೋಪಿಗಳನ್ನು ಶನಿವಾರ ಬೆಳಗ್ಗೆ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಇಡಿ ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಹ್ಯಾಕಿಂಗ್, ಬಿಟ್‌ಕಾಯಿನ್ ವಹಿವಾಟು ಮತ್ತು ಮನಿ ಲಾಂಡರಿಂಗ್ ಜಾಲ

ತನಿಖೆ ವೇಳೆ ಆರೋಪಿಗಳ ಅಪರಾಧ ಜಾಲದ ಕಾರ್ಯವೈಖರಿ ಬಹಿರಂಗವಾಗಿದೆ. ಪ್ರಮುಖ ಆರೋಪಿ ಶ್ರೀಕಿ ಹ್ಯಾಕಿಂಗ್‌ನಲ್ಲಿ ಪರಿಣತಿಯಾಗಿದ್ದು, ವಿವಿಧ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ, ಆನ್‌ಲೈನ್ ಮೂಲಕ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದನೆಂಬ ಆರೋಪವಿದೆ. ಈ ಮೂಲಕ ಪಡೆದ ಹಣವನ್ನು ಬಿಟ್‌ಕಾಯಿನ್ ಹಾಗೂ ಇಥೇರಿಯಮ್ ರೂಪದಲ್ಲಿ ಸಂಗ್ರಹಿಸುತ್ತಿದ್ದನು.

ರಾಬಿನ್ ಖಂಡೇವಾಲಾ ಬಿಟ್‌ಕಾಯಿನ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀಕಿ ಸಂಗ್ರಹಿಸಿದ್ದ ಡಿಜಿಟಲ್ ಕರೆನ್ಸಿಯನ್ನು ವ್ಯಾಪಾರ ಮಾಡಿ, ಹಂತ ಹಂತವಾಗಿ ಭಾರತೀಯ ರೂಪಾಯಿಗೆ ಪರಿವರ್ತಿಸಿ ವಿವಿಧ ಖಾತೆಗಳ ಮೂಲಕ ಹಿಂತಿರುಗಿಸುವ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಈ ಪ್ರಕ್ರಿಯೆಯಲ್ಲಿ ರಾಬಿನ್ ಪ್ರಮುಖ ಮನಿ ಲಾಂಡರಿಂಗ್ ಕೊಂಡಿಯಾಗಿ ಗುರುತಿಸಲಾಗಿದೆ.

ಸುನೀಶ್ ಹೆಗ್ಡೆ ಉದ್ಯಮಿಯಾಗಿದ್ದು, ಕಾಂಟ್ರಾಕ್ಟ್ ಕೆಲಸಗಳನ್ನು ಮಾಡಿಸುತ್ತಿದ್ದನು. ಶ್ರೀಕಿಯನ್ನು ಬಳಸಿ ಹ್ಯಾಕಿಂಗ್ ಕಾರ್ಯಗಳನ್ನು ನಡೆಸಿಸುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.

ಸರ್ಕಾರದ ವೆಬ್‌ಸೈಟ್ ಹ್ಯಾಕ್ ಆರೋಪ

ಈ ತಂಡವು ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ ತನಿಖೆಗೆ ವಹಿಸಿತ್ತು. ತನಿಖೆ ವೇಳೆ ಹಲವು ಡಿಜಿಟಲ್ ವಾಲೆಟ್‌ಗಳ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಸಿಸಿಬಿ ತನಿಖೆ ಮತ್ತು ಡ್ರಗ್ಸ್ ಸಂಪರ್ಕ

ಈ ಪ್ರಕರಣವನ್ನು ಮೊದಲಿಗೆ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸಿ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ತನಿಖೆ ವೇಳೆ ಅಂತಾರಾಷ್ಟ್ರೀಯ ಪೋಸ್ಟ್ ಆಫೀಸ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ದ ಆರೋಪವೂ ಬೆಳಕಿಗೆ ಬಂದಿತ್ತು. ಡ್ರಗ್ಸ್ ಪ್ರಕರಣ ದಾಖಲಾದ ನಂತರವೇ ಹ್ಯಾಕಿಂಗ್, ಬಿಟ್‌ಕಾಯಿನ್ ವಹಿವಾಟು ಹಾಗೂ ಆನ್‌ಲೈನ್ ಸುಲಿಗೆ ಜಾಲ ಬಹಿರಂಗಗೊಂಡಿತ್ತು.

ಇಡಿ ದಾಳಿ ಮತ್ತು ನಿಗಾ 

ಪ್ರಕರಣ ಸಂಬಂಧ ಏಪ್ರಿಲ್ 20ರಂದು ಇಡಿ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್, ಅವರ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಒಮರ್ ನಲಪಾಡ್ ಸೇರಿದಂತೆ ಹಲವು ಮಂದಿಯ ನಿವಾಸಗಳಲ್ಲಿ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳು, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಇದಾದ ಬಳಿಕ ಶ್ರೀಕಿಯ ಚಲನವಲನಗಳ ಮೇಲೆ ಇಡಿ ಅಧಿಕಾರಿಗಳು ನಿಗಾವಹಿಸಿದ್ದರು. ಹಲವು ಪ್ರಕರಣಗಳ ಬಳಿಕವೂ ಶ್ರೀಕಿ ಹ್ಯಾಕಿಂಗ್ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬಂಧನಕ್ಕೂ ಮುನ್ನವೂ ಹ್ಯಾಕಿಂಗ್ ಯತ್ನ

ಬಂಧನಕ್ಕೆ ಮುನ್ನದ ದಿನವೇ ಶ್ರೀಕಿ ಅಮೆರಿಕದ ಒಂದು ಕಂಪನಿಯ ಸರ್ವರ್‌ನ್ನು ಹ್ಯಾಕ್ ಮಾಡಲು ಯತ್ನಿಸಿ, ಹಣಕ್ಕೆ ಬೇಡಿಕೆ ಇಡಲು ಮುಂದಾಗಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶ್ರೀಕಿಯನ್ನು ಬಂಧಿಸಿದ್ದಾರೆ.

ರಾಜಕೀಯ ಸಂಪರ್ಕಗಳ ಕುರಿತು ತನಿಖೆ

ಶ್ರೀಕಿ ಬಂಧನದಿಂದಾಗಿ ಆತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕೆಲವು ರಾಜಕೀಯ ವ್ಯಕ್ತಿಗಳಿಗೂ ಆತಂಕ ಶುರುವಾಗಿದೆ ಎನ್ನಲಾಗಿದೆ. ವಿಶೇಷವಾಗಿ ಹಣಕಾಸು ವ್ಯವಹಾರಗಳ ಕುರಿತಾಗಿ ಕೆಲವು ಹೆಸರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಇಡಿ ತನಿಖೆ ಮುಂದುವರಿದಿದೆ.

ಮುಂದಿನ ತನಿಖೆಗೆ ಕುತೂಹಲ

ಪ್ರಸ್ತುತ ಇಡಿ ಅಧಿಕಾರಿಗಳು ಮೂವರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಇವರ ಹೇಳಿಕೆಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ದುರುಪಯೋಗದಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ಬಹಿರಂಗವಾಗಬೇಕಿದೆ.

ಇದುವರೆಗೆ ಈ ಬಂಧನ ಕುರಿತು ಇಡಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲದಿದ್ದರೂ, ಪ್ರಕರಣ ರಾಜ್ಯದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Art of Living: ಬಂಜರು ಭೂಮಿಯಲ್ಲಿ ಅರಳಿದ ಆರ್ಟ್ ಆಫ್ ಲಿವಿಂಗ್!
ಬೆಂಗಳೂರಿನ ನೆಲದಲ್ಲಿಂದು ಕೇಸರಿ ಸೂರ್ಯ ಉದಯ, ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ!