ಡಾ. ಚೆನ್ನವೀರ ಕಣವಿ ಪತ್ನಿ ಶಾಂತಾದೇವಿ ಕಣವಿ ಇನ್ನಿಲ್ಲ

By Suvarna NewsFirst Published May 22, 2020, 9:50 PM IST
Highlights

ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ನಿಧನರಾಗಿದ್ದಾರೆ.

ಧಾರವಾಡ, (ಮೇ.22): ಪ್ರಖ್ಯಾತ ಕವಿ ಚೆನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ (87) ಅವರು ಇಂದು (ಶುಕ್ರವಾರ)  ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು,(ಶನಿವಾರ) ಧಾರವಾಡದಲ್ಲಿ ಅಂತ್ಯ ಕ್ರಿಯೆ ನಾಳೆ ನಡೆಯಲಿದೆ. 

 1933ರಲ್ಲಿ ವಿಜಯಪುರದಲ್ಲಿ ಜನಿಸಿದ್ದ ಶಾಂತಾದೇವಿ ಅವರು ಅನೇಕ ಕಥೆ, ಲೇಖನಗಳನ್ನು ಬರೆದಿದ್ದು, ಮುಖ್ಯವಾಗಿ ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ಅವರ ವೈಶಿಷ್ಟ್ಯವಾಗಿತ್ತು

ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ ಮುಂತಾದವು ಅವರ ಕಥಾಸಂಕಲನಗಳು. ಅಜಗಜಾಂತರ ಎಂಬ ಹರಟೆಗಳ ಸಂಗ್ರಹ, ನಿಜಗುಣ ಶಿವಯೋಗಿ ಎಂಬ ಮಕ್ಕಳ ಪುಸ್ತಕ ಪ್ರಕಟವಾಗಿದ್ದವು.

ಬಯಲು-ಆಲಯ ಕಥಾಸಂಕಲನಕ್ಕೆ 1974ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿತ್ತು. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರವೂ ಅವರಿಗೆ ಲಭಿಸಿತ್ತು. 

ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರ ನಿಧನರಾದ ಸುದ್ದಿ ನನಗೆ ಅತೀವ ದುಃಖವಾಯಿತು.
ಪತ್ನಿಯನ್ನು ಕಳೆದುಕೊಂಡಿರುವ ಹಿರಿಯ ಜೀವಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ.

— H D Kumaraswamy (@hd_kumaraswamy)
click me!