ನನಗಿರೋ ಮಾಹಿತಿ ಪ್ರಕಾರ ಎಸ್‌ಐ ಹಗ​ರ​ಣ​ದಲ್ಲಿ ಮಂತ್ರಿ​ಗಳ ಕೈವಾ​ಡವಿದೆ: ಡಿಕೆ​ಶಿ ಆರೋಪ

Published : May 09, 2022, 05:46 AM IST
ನನಗಿರೋ ಮಾಹಿತಿ ಪ್ರಕಾರ ಎಸ್‌ಐ ಹಗ​ರ​ಣ​ದಲ್ಲಿ ಮಂತ್ರಿ​ಗಳ ಕೈವಾ​ಡವಿದೆ: ಡಿಕೆ​ಶಿ ಆರೋಪ

ಸಾರಾಂಶ

* ಕುಮಾ​ರ​ಸ್ವಾಮಿ ಹೇಳಿ​ರೋದು ಸತ್ಯ. ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಬೇರೆಯೇ ಇದ್ದಾರೆ * ಎಸ್‌ಐ ಹಗ​ರ​ಣ​ದಲ್ಲಿ ಮಂತ್ರಿ​ಗಳ ಕೈವಾ​ಡ: ಡಿಕೆ​ಶಿ *  ಮಂತ್ರಿ​ಗಳ ರಕ್ಷಣೆ ಇಲ್ಲದೆ ಈ ಹಗ​ರಣ ನಡೆ​ಯಲು ಸಾಧ್ಯ​ವಿ​ಲ್ಲ: ಕೆಪಿ​ಸಿಸಿ ಅಧ್ಯ​ಕ್ಷ ಆರೋಪ

ಅರ​ಕ​ಲ​ಗೂ​ಡು(ಮೇ.09): ಪಿಎ​ಸ್‌ಐ ಪರೀಕ್ಷೆ ಅಕ್ರ​ಮ​ದಲ್ಲಿ ಮಂತ್ರಿ​ಗಳ ರಕ್ಷಣೆ, ಮಾರ್ಗ​ದ​ರ್ಶನ ಇಲ್ಲದೆ ಈ ಹಗ​ರಣ ಮಾಡಲು ಸಾಧ್ಯವೇ ಇಲ್ಲ. ನನಗಿರೋ ಮಾಹಿತಿ ಪ್ರಕಾರ ಈ ಹಗ​ರ​ಣ​ದಲ್ಲಿ ಕೆಲವು ಮಂತ್ರಿ​ಗಳ ಕೈವಾ​ಡ​ವಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮತ್ತೊಮ್ಮೆ ಆರೋ​ಪಿ​ಸಿ​ದ್ದಾ​ರೆ.

ಭಾನು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಕುಮಾ​ರ​ಸ್ವಾಮಿ ಹೇಳಿ​ರೋದು ಸತ್ಯ. ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಬೇರೆಯೇ ಇದ್ದಾರೆ. ಆ ಕಿಂಗ್‌ಪಿನ್‌ಗಳೇ ಕೆಲವರನ್ನೆಲ್ಲ ಬಿಡಿಸುತ್ತಿದ್ದಾರೆ. ಬರೀ ಆಫೀಸರ್‌, ಪೊಲೀಸ್‌ ಕಾನ್ಸ್‌ಟೆಬಲ್‌ಗಳನ್ನಷ್ಟೇ ಇದೀಗ ವಿಚಾರಣೆ ಮಾಡುತ್ತಿದ್ದಾರೆ. ಅಂಗಡಿ ಓಪನ್‌ ಮಾಡಿದವರು, ಆ ಅಂಗಡಿಯಲ್ಲಿ ಸಾಮಾನು ಖರೀದಿಸಲು ಹೋದ ಹುಡುಗರನ್ನು ಬಂ​ಧಿಸಿ ವಿಚಾರಿಸುತ್ತಿದ್ದಾರೆ. ಈ ಕುರಿತು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದ​ರು.

ಮಂತ್ರಿಗಳ ರಕ್ಷಣೆ, ಮಾರ್ಗದರ್ಶನ ಇಲ್ಲದೆ ಈ ಹಗರಣ ನಡೆ​ಯಲು ಸಾಧ್ಯವಿಲ್ಲ. ಗೃಹ ಸಚಿವರು, ಅಶ್ವತ್ಥ ನಾರಾಯಣ್‌ ಕರೆ ಮಾಡಿ ಕೆಲ​ವ​ರನ್ನು ಬಿಡಿ​ಸಿ​ದ್ದಾರೆ. ಇನ್ನೂ ಕೆಲವರು ಇದ್ದಾರೆ, ಆ ಹೆಸರುಗಳೆಲ್ಲ ಈಚೆ ಬರುತ್ತವೆ. ಆರೋಪಿಗಳನ್ನು ಬಿಡಿಸಿದ ತಕ್ಷಣ ಕೆಲ ಪೊಲೀಸ್‌ ಅ​ಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ತನಿಖೆ ಬಗ್ಗೆ ಬೊಮ್ಮಾಯಿ ಸತ್ಯಾಂಶ ಹೇಳಬೇಕು, ಮುಚ್ಚಿಡಬಾರದು. ಹೈಕೋರ್ಚ್‌ ನ್ಯಾಯಾಧೀಶರ ನೇ​ತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರಮು​ಖರ ಹೆಸರು ಬಹಿ​ರಂಗ​ಪ​ಡಿ​ಸಿ: ಡಿಕೆ​ಶಿ

ಪಿಎ​ಸ್‌​ಐ ಪರೀಕ್ಷೆ ಅಕ್ರ​ಮ​ದಲ್ಲಿ ಸರ್ಕಾರ ಕೇವಲ ಫಲಾ​ನು​ಭ​ವಿ​ಗ​ಳನ್ನು ಮಾತ್ರ ಬಂಧಿ​ಸು​ತ್ತಿ​ದೆ. ಆದರೆ, ಅವರ ಹಿಂದಿ​ರುವ ಪ್ರಭಾ​ವಿ​ಗ​ಳನ್ನು ಬಂಧಿ​ಸು​ತ್ತಿಲ್ಲ, ಅವರ ಹೆಸ​ರನ್ನೂ ಬಹಿ​ರಂಗ​ಗೊ​ಳಿ​ಸು​ತ್ತಿಲ್ಲ. ಸರ್ಕಾರ ಇಡೀ ಪ್ರಕ​ರ​ಣ​ವನ್ನು ಮುಚ್ಚಿ​ಹಾ​ಕುವ ಪ್ರಯತ್ನ ನಡೆ​ಸು​ತ್ತಿ​ದೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಆರೋ​ಪಿ​ಸಿ​ದ್ದಾ​ರೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರ ಹೆಸರು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬ ಕುರಿತ ದೊಡ್ಡಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ. ಮುಖ್ಯ​ಮಂತ್ರಿಗಳು ಅಕ್ರ​ಮ​ದಲ್ಲಿ ಶಾಮೀ​ಲಾ​ಗಿಲ್ಲ ಅಂತಾದರೆ, ಯಾರೆಲ್ಲ ಭಾಗಿ​ಯಾ​ಗಿ​ದ್ದಾರೆ ಅವರ ಹೆಸರು ಬಹಿರಂಗಪಡಿಸಲಿ ಎಂದ​ರು.

ನೇಮಕಾತಿ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತದೆ. ಇವರೆಲ್ಲ ಅಕ್ರಮದ ಅಂಗಡಿ ತೆರೆದ ಕಾರಣಕ್ಕೆ ಹಗ​ರ​ಣ​ದಲ್ಲಿ ಶಾಮೀ​ಲಾ​ಗಿ​ದ್ದಾ​ರೆ. ಆದರೆ ಈ ಅಕ್ರಮದಲ್ಲಿ ಯಾರೆಲ್ಲಾ ಪ್ರಭಾವಿ ಸಚಿ​ವರು ಭಾಗಿಯಾಗಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ ಎಂಬುದು ಗೊತ್ತಾಗಬೇಕು. ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರು ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಡಾ.ಅಶ್ವತ್ಥ ನಾರಾಯಣರ ಹೆಸರು ಹೊರ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರು ವಿಚಾರಣೆ ವೇಳೆ ಬಂಧಿತರಿಂದ ಹೊರ ಬಂದಿವೆ. ಗೃಹ ಸಚಿವ ಮತ್ತು ಅಶ್ವತ್ಥ ನಾರಾಯಣ ಮೂಗಿನ ಕೆಳಗೆಯೇ ತನಿಖೆ ನಡೆಯುತ್ತಿದೆ ಎಂದು ಕಿಡಿ​ಕಾ​ರಿ​ದ​ರು.

ಎಲ್ಲರನ್ನೂ ಕರೆಸಿ ವಿಚಾರಣೆ ಮಾಡುವಾಗ, ಸಚಿವ ಅಶ್ವತ್ಥ ನಾರಾ​ಯಣ​ರಿಗೆ ಬೇಕಾದ ಅಭ್ಯರ್ಥಿಯನ್ನು ಮಾತ್ರ ಬಿಟ್ಟು ಕಳುಹಿಸಿದ್ದಾರೆ. ಅನೇಕ ಹಿರಿಯ ಅಧಿಕಾರಿಗಳೂ ಈ ಅಕ್ರ​ಮ​ದ​ಲ್ಲಿ ಶಾಮೀಲಾಗಿದ್ದಾರೆ. ಪ್ರಕ​ರ​ಣ​ದ​ಲ್ಲಿ ಗೃಹ ಸಚಿವರೇ ಅಪರಾಧಿಯಾಗಿದ್ದು, ಎಲ್ಲ ಕಳ್ಳರ ರಕ್ಷಣೆಯನ್ನು ಅವರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್‌​ಡಿಕೆ ವಿರು​ದ್ಧ ಕೇಸ್‌ ದಾಖ​ಲಿ​ಸಿ: ಅಶ್ವತ್ಥ ನಾರಾಯಣ್‌ ಮೊದಲಿನಿಂದಲೂ ನರ್ಸಿಂಗ್‌ ಮಾರ್ಕ್ಸ್ ಕಾರ್ಡ್‌, ಸರ್ಟಿಫಿಕೆಟ್‌ಗಳನ್ನು ಕೊಟ್ಟು ದಂಧೆ ನಡೆಸುತ್ತಿದ್ದರು ಎಂದು ಮಾಜಿ ಸಿಎಂ ಎಚ್‌.​ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಆಧಾರವಿಲ್ಲದೆ ಆರೋಪ ಮಾಡುತ್ತಾರಾ? ಅವರ ಆರೋಪ ಸುಳ್ಳಾಗಿದ್ದರೆ ಸುಳ್ಳು ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!