District Human Development Report 2025: ಜಾತಿಗಣತಿ, ಪರಿಶಿಷ್ಟ ಜಾತಿ ಸಮೀಕ್ಷೆ ಬಳಿಕ ಇದೀಗ ಮತ್ತೊಂದು ಸಮೀಕ್ಷೆಗೆ ಮುಂದಾದ ಸರ್ಕಾರ!

Kannadaprabha News   | Kannada Prabha
Published : Jun 30, 2025, 10:50 AM ISTUpdated : Jun 30, 2025, 10:58 AM IST
Karnataka government

ಸಾರಾಂಶ

ರಾಜ್ಯ ಸರ್ಕಾರವು ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025-26 ಸಿದ್ಧಪಡಿಸಲು ಮುಂದಾಗಿದ್ದು, ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮುಂತಾದ ಅಂಶಗಳನ್ನು ಪರಿಶೀಲಿಸಲಿದೆ. ಈ ವರದಿಯು ಜಿಲ್ಲೆಗಳ ಅಭಿವೃದ್ಧಿಗೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ದಿಕ್ಸೂಚಿಯಾಗಲಿದೆ.

ಗಿರೀಶ್‌ ಗರಗ

ಬೆಂಗಳೂರು (ಜೂ.30) : ಜಾತಿ ಆಧಾರಿತ ಜನಗಣತಿ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಜತೆಗೆ ಇದೀಗ ಮತ್ತೊಂದು ವರದಿ ಸಿದ್ಧಪಡಿಸಲು ಮುಂದಾಗಿರುವ ಸರ್ಕಾರ, ರಾಜ್ಯದ ಜನರ ಜೀವನ ಮಟ್ಟವನ್ನು ಗುರುತಿಸುವ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದೆ.ಜನರ ಸಾಮಾಜಿಕ, ಶೈಕ್ಷಣಿಕ ಮಾನದಂಡ ಅರಿಯುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಜಾತಿ ಆಧಾರಿತ ಜನಗಣತಿಯ ಮರುಸಮೀಕ್ಷೆಗೆ ಮುಂದಾಗಿದೆ.

ಅದರ ಜತೆಗೆ ಒಳಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನೂ ಮಾಡಲಾಗುತ್ತಿದೆ. ಅದರ ಜತೆಜತೆಗೆ ಜಿಲ್ಲಾ ಮಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ಅದರ ನಿವಾರಣಾ ಕ್ರಮಗಳು ಸೇರಿದಂತೆ ಮತ್ತಿತರ ಅಂಶಗಳನ್ನೊಳಗೊಂಡ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025-26 ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, 2026ರ ಜನವರಿ ವೇಳೆಗೆ ವರದಿ ಸಿದ್ಧಪಡಿಸುವ ಗುರಿ ಹೊಂದಲಾಗಿದೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಜಿಲ್ಲಾ ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸಲು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ವರದಿ ಸಿದ್ಧಪಡಿಸಲು ಪ್ರತಿ ಜಿಲ್ಲೆಗೆ ತಲಾ 20 ಲಕ್ಷ ರು.ಗಳಂತೆ 6.20 ಕೋಟಿ ರು. ಅನುದಾನ ಒದಗಿಸಲಾಗುತ್ತಿದೆ. ಅದರಲ್ಲಿ ಈಗಾಗಲೇ ಎಲ್ಲ 31 ಜಿಲ್ಲೆಗಳಿಗೂ ತಲಾ 10 ಲಕ್ಷ ರು.ಗಳಂತೆ 3.10 ಕೋಟಿ ರು.ಗಳನ್ನೂ ನೀಡಲಾಗಿದೆ. ಜತೆಗೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆಯನ್ನೂ ನೀಡಲಾಗಿದೆ.

ಯಾವೆಲ್ಲ ಅಂಶಗಳ ಪತ್ತೆ? : ಜಿಲ್ಲಾ ಮಾನವ ಅಭಿವೃದ್ಧಿ ವರದಿಯಲ್ಲಿ ಆಯಾ ಜಿಲ್ಲೆಯ ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯದ ಸರಾಸರಿ, ಜಿಲ್ಲೆಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ನಿವಾರಣಾ ಕ್ರಮ ಹಾಗೂ ಯಶೋಗಾಥೆಯಂತಹ ಅಂಶಗಳಿರಲಿವೆ. ಅದರಲ್ಲೂ ಜಿಲ್ಲೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಪ್ರಮಾಣ, ವಿದ್ಯಾವಂತ ಜನರ ಸಂಖ್ಯೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಆರೋಗ್ಯದಲ್ಲಿ ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಮತ್ತಿತರ ಅಂಶಗಳನ್ನು ಗಮನಿಸಲಾಗುತ್ತದೆ.

ಜನರ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಅಳತೆ ಮಾಡಲಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಮಾಣ, ಬಡತನಕ್ಕೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಲಾಗುತ್ತದೆ. ಜತೆಗೆ ಜಿಲ್ಲೆಯ ಜನರ ಸರಾಸರಿ ಆದಾಯ ಮತ್ತು ಆದಾಯ ಹಂಚಿಕೆಯ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜಿಲ್ಲೆಗಳ ರ್‍ಯಾಂಕಿಂಗ್‌ ನಿರ್ಧರಿಸಲಾಗುತ್ತದೆ.

ವರದಿಯಿಂದೇನು ಲಾಭ? ಜಿಲ್ಲಾ ಮಾನವ ಅಭಿವೃದ್ಧಿ ವರದಿಯಿಂದ ಜಿಲ್ಲೆಗಳ ಅಭಿವೃದ್ಧಿಯ ಪ್ರಮಾಣ, ಅಲ್ಲಿರುವ ಸಮಸ್ಯೆಗಳನ್ನು ಅರಿಯಲು ಸಹಕಾರಿಯಾಗಲಿದೆ. ಜತೆಗೆ ಶೈಕ್ಷಣಿಕ ಮಟ್ಟ, ಆರೋಗ್ಯ ಮಟ್ಟವನ್ನು ವೃದ್ಧಿಸಲು ಯಾವೆಲ್ಲ ಅಂಶಗಳ ಮೇಲೆ ಕೆಲಸ ಮಾಡಬೇಕು ಎಂಬ ನಿಖರ ಮಾಹಿತಿ ದೊರೆಯಲಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಬಡತನ, ಅಸಮಾನತೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಜುಲೈನಿಂದ ದತ್ತಾಂಶ ಸಂಗ್ರಹ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ನಿಗದಿ ಮಾಡಿರುವ ಕಾಲಮಿತಿಯಂತೆ ಜುಲೈನಿಂದ ಸೆಪ್ಟೆಂಬರ್‌ ತಿಂಗಳವರೆಗೆ ಇಲಾಖಾವಾರು ದತ್ತಾಂಶಗಳನ್ನು ಕಲೆಹಾಕುವ, ಕ್ರೋಢೀಕರಿಸುವ ಹಾಗೂ ವಿಶ್ಲೇಷಿಸಿ, ಸೂಚ್ಯಂಕವನ್ನು ಅಂತಿಮಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ಕ್ಕೆ ಸಂಬಂಧಿಸಿದಂತೆ ಅಧ್ಯಾಯಗಳನ್ನು ಸಿದ್ಧಪಡಿಸಲಾಗುತ್ತದೆ.

ಡಿಸೆಂಬರ್‌ನಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ರ ಕರಡು ವರದಿಯನ್ನು ಅಂತಿಮಗೊಳಿಸಿ, ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಅದಾದ ಒಂದು ತಿಂಗಳಲ್ಲಿ ಅಂದರೆ 2026ರ ಜನವರಿಯಲ್ಲಿ ಅಂತಿಮಗೊಳಿಸಿದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ನ್ನು ಜಿಲ್ಲಾ ಯೋಜನಾ ಸಮಿತಿಯಲ್ಲಿ ಅನುಮೋದನೆ ಪಡೆದು ಬಿಡುಗಡೆ ಮಾಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್