ನೆರೆ ಸಂತ್ರಸ್ತರಿಗೆ ಪರಿಹಾರ ತಡ ಮಾಡಬೇಡಿ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

Published : Aug 03, 2022, 02:30 AM IST
ನೆರೆ ಸಂತ್ರಸ್ತರಿಗೆ ಪರಿಹಾರ ತಡ ಮಾಡಬೇಡಿ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಸಾರಾಂಶ

ಮಳೆ ಹಾನಿ ಹಿನ್ನೆಲೆ: 11 ಜಿಲ್ಲಾಧಿಕಾರಿಗಳ ಜೊತೆ ಬೊಮ್ಮಾಯಿ ಸಭೆ

ಬೆಂಗಳೂರು(ಆ.03):  ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ತರಿಗೆ ತುರ್ತು ಸಂದರ್ಭದಲ್ಲಿ ಪರಿಹಾರ ವಿತರಣೆಗೆ ವಿಳಂಬ ಧೋರಣೆ ಅನುಸರಿಸದೆ ತಕ್ಷಣ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಹಾನಿಗೊಳಗಾಗಿರುವ ಮೀನುಗಾರರ ದೋಣಿಗಳ ದುರಸ್ತಿಗೆ ತಗಲುವ ವೆಚ್ಚವನ್ನು ಅಂದಾಜು ಮಾಡುವಂತೆಯೂ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಳೆಯಿಂದ ಹಾನಿಗೊಳಗಾದ 11 ಜಿಲ್ಲೆಗಳ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ, ತುಮಕೂರು, ಶಿವಮೊಗ್ಗ, ದಾವಣಗೆರೆ ಹಾಗೂ ಬೆಳಗಾವಿ) ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಜೂ.1ರಿಂದ ಈವರೆಗೆ ಆಗಿರುವ ಭಾರಿ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಉಂಟಾಗಿರುವ ಹಾನಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮೈಸೂರು, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳಿಗೆ ಅಗತ್ಯ ಇರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ಭಟ್ಕಳ ಮತ್ತು ಸುಳ್ಯ ಸೇರಿದಂತೆ ಇತರ ಕಡೆಗಳ ವಾಣಿಜ್ಯ ಸಂಕೀರ್ಣಗಳಲ್ಲಿ ನೀರು ನುಗ್ಗಿ ಹಾಳಾಗಿರುವ ಬಗ್ಗೆ ವರದಿ ಸಲ್ಲಿಸಬೇಕು. ರೆಡ್‌ ಅಲರ್ಚ್‌ ಇರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತವಾಗುವ ಬಗ್ಗೆ ಎಚ್ಚರ ವಹಿಸಬೇಕು. ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಅದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ವರುಣನ ಆರ್ಭಟಕ್ಕೆ ರಾಮನಗರ ತತ್ತರ: ಸಂಕಷ್ಟಕ್ಕೆ ಸಿಲುಕಿದ ರೈತರು

ಸತತ ಮಳೆಯಿಂದ ಎಲ್ಲ ಕೆರೆಗಳು ತುಂಬಿವೆ. ಕೆರೆಗಳ ಕಟ್ಟೆಗಳು ಮತ್ತು ಕೋಡಿಗಳು ದುರ್ಬಲಗೊಂಡಿರುತ್ತವೆ. ಸಂಗ್ರಹ ಸಾಮರ್ಥ್ಯ ಹೆಚ್ಚಿರುವ ಕೆರೆಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಕೆರೆಗಳ ವಡ್ಡು ಬಿರುಕು ಬಿಡದಂತೆ ಎಚ್ಚರ ವಹಿಸಬೇಕು. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್‌ ಈ ಬಗ್ಗೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಿದುಹೋದ ರಸ್ತೆ ಸಂಪರ್ಕವನ್ನು ಪುನಃ ಸ್ಥಾಪಿಸಲು ಅಗತ್ಯ ಕ್ರಮ ಜರುಗಿಸಬೇಕಾಗಿದೆ. ಬಿದ್ದುಹೋದ ಮನೆಗಳ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಕೈಗೊಳ್ಳುವುದು, ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವ ಕಡೆಗಳಲ್ಲಿ ಜನರನ್ನು ಮುಂಚಿತವಾಗಿಯೇ ಸ್ಥಳಾಂತರಗೊಳಿಸಬೇಕು ಎಂದು ತಿಳಿಸಿದರು.

ಪ್ರವಾಹದಂತಹ ತುರ್ತು ವೇಳೆಯಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂಬ ಸಂದೇಶ ರವಾನೆ ಮಾಡಬೇಕಿದೆ. ಹಾನಿಯಾಗಿರುವ ಮನೆಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳಿಂದ ಪಡೆಯಬೇಕು ಮತ್ತು ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ತಹಶೀಲ್ದಾರ್‌ಗಳು ಖಾತರಿಪಡಿಸಿಕೊಂಡು ಅದನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಬೊಮ್ಮಾಯಿ ಸೂಚಿಸಿದರು.

ಕೊಪ್ಪಳದಲ್ಲಿ ಧಾರಾಕಾರ ಮಳೆ: ಶಾಲೆ-ಕಾಲೇಜು, ಅಂಗನವಾಡಿಗಳಿಗೆ ರಜೆ!

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಇತರರು ಉಪಸ್ಥಿತರಿದ್ದರು.

ಇದುವರೆಗೆ ಆದ ಮಳೆ ಹಾನಿ

* 3499 ಹೆಕ್ಟೇರ್‌ ಕೃಷಿ ಬೆಳೆ ಮತ್ತು 2057 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶ
* 2430 ಮನೆಗಳು ಸಂಪೂರ್ಣ ಹಾನಿ, 4378 ಮನೆಗಳು ಭಾಗಶಃ ಹಾನಿ
* 39 ಜೀವ ಹಾನಿ, 99 ಪ್ರಾಣಿ ಹಾನಿ
* 1730 ಕಿ.ಮೀ.ರಸ್ತೆ ಹಾನಿ, 5419 ಕಿ.ಮೀ. ಗ್ರಾಮೀಣ ರಸ್ತೆ ಹಾನಿ
* 629 ಸೇತುಗಳು, 3264 ಶಾಲಾ ಕಟ್ಟಡಗಳು ಮತ್ತು 29 ಪ್ರಾಥಮಿಕ ಆರೋಗ್ಯ ಕಟ್ಟಡಗಳು ಹಾನಿ
* 11796 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ ಮತ್ತು 759 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ