ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ

Published : Jul 31, 2025, 07:10 PM IST
dharmasthala bone fragments

ಸಾರಾಂಶ

ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿರುವ ಸಮಾಧಿ ಅಗೆಯುವ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಗಳು. ೧೨ ಮೂಳೆಗಳು ಮತ್ತು ತಲೆಬುರುಡೆಯ ಭಾಗಗಳು ಪತ್ತೆಯಾಗಿದ್ದು, ಎಸ್ಐಟಿ ತಂಡ ಮುಂದಿನ ತನಿಖೆಗಾಗಿ ಸಂಗ್ರಹಿಸಿದೆ. ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಳ್ಳಲಾಗಿದೆ.

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನೇತ್ರಾವತಿ ನದಿಯ ತಟದಲ್ಲಿ ನಡೆದಿದ್ದ ಸಮಾಧಿ ಅಗೆಯುವ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಂತ್ಯಗೊಳ್ಳುತ್ತಿದೆ. ಇಂದಿನ ಕಾರ್ಯಾಚರಣೆ ಮುಗಿದು, ಮಣ್ಣು ತೆರವುಗೊಳಿಸಿದ್ದ ಕೂಲಿಯಾಳುಗಳು ಹಾಗೂ ಮಿನಿ ಹಿಟಾಚಿ ಯಂತ್ರ ಸ್ಥಳದಿಂದ ವಾಪಸಾಗುತ್ತಿದೆ. ಎಸ್ಐಟಿ ತಂಡ ನಾಳೆ (ಗುರುವಾರ) ಬೆಳಿಗ್ಗೆಯಿಂದ ಪಾಯಿಂಟ್ ನಂ. 7ರಲ್ಲಿ ಸಮಾಧಿ ಅಗೆಯುವ ಮುಂದಿನ ಹಂತದ ಕಾರ್ಯಚರಣೆಯನ್ನು ಆರಂಭಿಸಲಿದೆ. ಈ ಸ್ಥಳ ಹೆದ್ದಾರಿ ಪಕ್ಕದಲ್ಲಿರುವ ಕಾರಣದಿಂದಾಗಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಸ್ಥಳದಲ್ಲಿ ಭದ್ರತೆಯೆಂಬ ದೃಷ್ಟಿಯಿಂದ, ನಾಳೆ ನೇತ್ರಾವತಿ ಸೇತುವೆ ಹಾಗೂ ಸುತ್ತಮುತ್ತಿನ ಪ್ರದೇಶಕ್ಕೆ ಸಾರ್ವಜನಿಕರು ಗುಂಪಾಗಿ ಸೇರುವಂತಿಲ್ಲ. ಎಸ್ಐಟಿ ಹಾಗೂ ಸ್ಥಳೀಯ ಪೊಲೀಸರ ನಿಯಂತ್ರಣದಲ್ಲಿ ಮಾತ್ರ ಕಾರ್ಯಚರಣೆ ನಡೆಯಲಿದೆ.

ಮಹಜರು ಪ್ರಕ್ರಿಯೆಯಲ್ಲಿ ಏನೇನಾಯ್ತು?

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಆರನೇ ಪಾಯಿಂಟ್‌ನಲ್ಲಿ ಎಸ್ಐಟಿ ತಂಡ ಕಾನೂನು ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಮುಂದುವರಿಸುತ್ತಿದೆ. ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ಜಾರಿಯಲ್ಲಿದೆ. ಮಹಜರಿನ ಸಂದರ್ಭದಲ್ಲಿಯೇ ಸಹಾಯ ಆಯುಕ್ತರ ಸೂಚನೆಯಂತೆ ‘ಮಹಜರು ಯಾಕೆ ಮಾಡಲಾಗುತ್ತಿದೆ’ ಎಂಬುದನ್ನು ಲಿಖಿತವಾಗಿ ದಾಖಲಿಸಲಾಗಿದೆ. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಹಾಗೂ ಸಾಕ್ಷಿಗಳ ಸಮ್ಮುಖದಲ್ಲಿ ಮಹಜರು ಕಾರ್ಯಾಚರಣೆ ನಡೆಸಲಾಗಿದೆ.

ಪ್ರತೀ ಹಂತವನ್ನು ಎಸ್ಐಟಿ ತಂಡ ದೃಶ್ಯ ಹಾಗೂ ಛಾಯಾಚಿತ್ರದ ಮೂಲಕ ದಾಖಲಿಸಿದ್ದು, ಸ್ಥಳದ ವಿವರ, ಎಷ್ಟು ಎಲುಬುಗಳು ಪತ್ತೆಯಾದವು, ಅವು ಹೇಗೆ ಲಭಿಸಿವೆ ಎಂಬ ಮಾಹಿತಿ ದಾಖಲಾತಿಯಲ್ಲಿ ಸೇರಿಸಲಾಗಿದೆ. ಈ ದಾಖಲಾತಿಗೆ ಅನುಗುಣವಾಗಿ ವಶಪಡಿಸಿಕೊಳ್ಳುವ ಮೆಮೊ (Seizure Memo) ತಯಾರಿಸಲಾಗುತ್ತಿದೆ. ಅಸ್ಥಿಪಂಜರದ ಪ್ರತಿಯೊಂದು ಮೂಳೆಯನ್ನೂ bio-safe evidence bags‌ಗಳಲ್ಲಿ ಸಂಗ್ರಹಿಸಿ, ಸಂಬಂಧಿತ ಸ್ಥಳ, ದಿನಾಂಕ ಹಾಗೂ ಪ್ರಾಥಮಿಕ ಗುರುತು (initial marking) ನೀಡಲಾಗಿದೆ.

12 ಮೂಳೆಗಳು ಪತ್ತೆ

ಎಸ್ಐಟಿ ತಂಡ ಆರನೇ ಪಾಯಿಂಟ್‌ನಲ್ಲಿ ಪ್ರತ್ಯಕ್ಷ ತನಿಖೆ ನಡೆಸಿದ ವೇಳೆ, ಒಟ್ಟು 12 ಮೂಳೆಗಳು ಪತ್ತೆಯಾಗಿವೆ. ಇದರಲ್ಲಿ ಕಾಲಿನ ಎರಡು ದೊಡ್ಡ ಮೂಳೆಗಳು ಹಾಗೂ ಇತರ ಸಣ್ಣ ಮೂಳೆಗಳು ಸೇರಿವೆ. ಜೊತೆಗೆ, ಪುರುಷನ ತಲೆಬುರುಡೆಯ ಎರಡು ಭಾಗಗಳು ಕೂಡ ಪತ್ತೆಯಾಗಿವೆ. ಪತ್ತೆಯಾದ ಎಲ್ಲ ಅವಶೇಷಗಳನ್ನು ಮುಂದಿನ ವಿಧಾನ ವಿಜ್ಞಾನ (FSL) ಪರಿಶೀಲನೆಗಾಗಿ ಎಫ್ಎಸ್ಎಲ್ ತಂಡ ಸಂಗ್ರಹಿಸಿ ಕೊಂಡೊಯ್ಯುತ್ತಿದೆ. ಇದೀಗ ಅಂತಿಮ ದೃಢೀಕರಣಕ್ಕಾಗಿ ವೈದ್ಯಕೀಯ ಮತ್ತು ಡಿಎನ್‌ಎ ಪರೀಕ್ಷೆಗಳಿಗೂ ನಿರೀಕ್ಷೆ ಇದೆ.

ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ

ಸಮಾಧಿಯಿಂದ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್ಐಟಿ ಅಧಿಕಾರಿಗಳು ಯಾವುದೇ ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಂಡಿದ್ದಾರೆ. ಸಮಾಧಿಯೊಳಗೆ ನೀರು ತುಂಬುವ ಸಾಧ್ಯತೆ ಇರುವ ಕಾರಣದಿಂದ ಸಾಕ್ಷ್ಯಗಳು ಹಾನಿಯಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ, ಸಮಾಧಿಯ ಮೇಲ್ಭಾಗ ಹಾಗೂ ನಾಲ್ಕು ದಿಕ್ಕುಗಳಲ್ಲಿ ಶೀಟ್‌ಗಳನ್ನು ಅಳವಡಿಸಿ ಪ್ರಾಥಮಿಕ ಸಂರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿರುವ ಗುಂಡಿಯ ಸುತ್ತಲೂ ನಾಲ್ಕು ತಡೆಗೋಡೆಗಳಂತೆ ಶೀಟ್ ಹಾಕಿ ಸುರಕ್ಷತೆ ಒದಗಿಸಲಾಗಿದೆ.

ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ

ಎಸ್ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ ಮಂಗಳೂರಿನಿಂದ ಹೊರಟು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಸ್ಪಾಟ್ ನಂಬರ್ 6ಗೆ ಸ್ಥಳ ಪರಿಶೀಲನೆಗೆ ತೆರಳುವ ಸಾಧ್ಯತೆ ಇದೆ. ಸ್ಥಳದ ಭದ್ರತಾ ನಿರ್ವಹಣೆಯ ಜೊತೆಗೆ, ಮುಂದಿನ ತನಿಖಾ ಪ್ರಕ್ರಿಯೆ ಮತ್ತು ನ್ಯಾಯ ವೈದ್ಯಕೀಯ ವರದಿಗಳಿಗಾಗಿ ಬಿಗಿಯಾದ ಕ್ರಮಗಳನ್ನು ಎಸ್ಐಟಿ ಕೈಗೊಂಡಿದ್ದು, ಪರಿಶೀಲನೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌