
ದಕ್ಷಿಣ ಕನ್ನಡ (ಸೆ.17): ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡೆ ಕಾಡಿನಲ್ಲಿ ನಡೆಯುತ್ತಿರುವ ಸಂಶಯಾಸ್ಪದ ಶವ ಪತ್ತೆಯ ತನಿಖೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ವಿಶೇಷ ತನಿಖಾ ತಂಡ (ಎಸ್ಐಟಿ) ಇಂದು ಕಾಡಿನೊಳಗೆ ಪಿವಿಸಿ ಪೈಪ್‌ಗಳ ಸಹಾಯದಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಶೋಧ ಕಾರ್ಯ ನಡೆಸಿತು.
ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದ ತಂಡ ಕಳೆದ ಎರಡು ಗಂಟೆಗಳಿನಿಂದ ಸ್ಥಳದಲ್ಲೇ ಶೋಧ ಕಾರ್ಯ ಮುಂದುವರೆಸಿದ್ದು, ಈ ವೇಳೆ ಭೂಮಿಯ ಮೇಲ್ಭಾಗದಲ್ಲೇ ಕೆಲವು ಸಣ್ಣಪುಟ್ಟ ಮೂಳೆ ತುಂಡುಗಳು ಮತ್ತು ಬಟ್ಟೆಯ ತುಂಡುಗಳು ಪತ್ತೆಯಾಗಿವೆ. ಈ ಭಾಗವೇ ವಿಠಲ ಗೌಡ ಬುರುಡೆ ತೋರಿಸಿದ್ದ ಅನುಮಾನಿತ ಸ್ಥಳವಾಗಿದ್ದು, ಅದರ ಸುತ್ತಮುತ್ತ ಶೋಧ ಕಾರ್ಯ ಕೇಂದ್ರೀಕೃತವಾಗಿದೆ.
ಶೋಧದ ವೇಳೆ ಎಸ್ಐಟಿ ಪಿವಿಸಿ ಪೈಪ್ ಬಳಸಿ ಕಾಡಿನ ವಿವಿಧ ಬಿಂದುಗಳಿಂದ ಮಣ್ಣಿನ ಕೋರ್ ಸ್ಯಾಂಪಲ್‌ಗಳನ್ನು (core sample) ತೆಗೆದುಕೊಂಡಿದೆ. ಲೋಹದ ಪೈಪ್‌ಗಿಂತ ಪಿವಿಸಿ ಪೈಪ್ ಮಣ್ಣಿನಲ್ಲಿನ ರಾಸಾಯನಿಕ ಅಥವಾ ಜೈವಿಕ ಅಂಶಗಳಿಗೆ ಪ್ರತಿಕ್ರಿಯೆ ತೋರದೆ DNA ಅಥವಾ ರಕ್ತದ ಅಂಶಗಳನ್ನು ಬದಲಾಯಿಸುವ ಸಾಧ್ಯತೆ ಕಡಿಮೆ.
ಈ ಮಾದರಿಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿ ಮಣ್ಣಿನ pH ಮಟ್ಟ, ರಾಸಾಯನಿಕ ಬದಲಾವಣೆಗಳು ಹಾಗೂ ಜೈವಿಕ ಅಂಶಗಳ ಹಾಜರಿ ಪರಿಶೀಲಿಸಲಾಗಲಿದೆ. ಶವ ಕೊಳೆತು ಮಣ್ಣಿನಲ್ಲಿ ಸೇರ್ಪಡೆ (decomposition) ಆಗಿದೆಯೇ ಎಂಬುದನ್ನು ಮಣ್ಣಿನಲ್ಲಿನ ರಾಸಾಯನಿಕ ಬದಲಾವಣೆಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ದೃಢಪಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಡಿನ ಒಂದು ಭಾಗದಲ್ಲಿ ಮೂಳೆಗಳು ಸಿಕ್ಕಿರುವುದರಿಂದ ಸಮೀಪದ ಇತರ ಜಾಗಗಳಲ್ಲೂ ಅವಶೇಷಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಣ್ಣಿನಲ್ಲಿ ರಕ್ತದ ಕಲೆಗಳು, ಶವದ ದ್ರವ (body fluids), ಕೂದಲು, ಹಲ್ಲು ಅಥವಾ ಬಟ್ಟೆಯ ತುಂಡುಗಳು ಇರುವುದು ಸಾಧ್ಯವೆಂದು ತಜ್ಞರು ಅಂದಾಜಿಸಿದ್ದಾರೆ. ಮೀಸಲು ಅರಣ್ಯ ಪ್ರದೇಶವಾದ್ದರಿಂದ ಅಗೆದು ತಪಾಸಣೆ ನಡೆಸುವುದು ಸಾಧ್ಯವಿಲ್ಲ. ಆದ್ದರಿಂದ ಪೈಪ್ ಮೂಲಕ ಭೂಮಿಯೊಳಗಿನ ಮಣ್ಣು ಸಡಿಲವಾಗಿದೆಯೇ ಮತ್ತು ಇನ್ನೇನಾದರೂ ಅಡಗಿದಿದೆಯೇ ಎಂಬುದನ್ನು ಪತ್ತೆಹಚ್ಚಲು ಈ ವಿಧಾನ ಅನುಸರಿಸಲಾಗಿದೆ.
ಪ್ರಸ್ತುತ ಮೂಳೆಗಳು ಪತ್ತೆಯಾದ ಸ್ಥಳದಲ್ಲಿ ಮಹಜರು ಪ್ರಕ್ರಿಯೆ ನಡೆಯುತ್ತಿದ್ದು, ಮಣ್ಣಿನ ಮಾದರಿ ಸಂಗ್ರಹ ಹಾಗೂ ಶೋಧ ಕಾರ್ಯ ಇನ್ನೂ ಕೆಲದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಈ ಪತ್ತೆಗಳು ಬಂಗ್ಲೆಗುಡ್ಡೆ ಕಾಡಿನಲ್ಲಿ ನಿಜವಾಗಿಯೂ ಶವವನ್ನು ಹೂಣಿಸಲಾಗಿದೆ ಎಂಬ ಸಂಶಯಕ್ಕೆ ಮತ್ತಷ್ಟು ತೂಕ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಶೀಘ್ರವೇ ಬಹಿರಂಗವಾಗಲಿದೆ ಎಂದು ಎಸ್ಐಟಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಶೋಧ ಕಾರ್ಯಾಚರಣೆಯ ಪ್ರಗತಿ:
ಕಳೆದ ಎರಡು ಗಂಟೆಗಳಿಂದ ನಡೆಯುತ್ತಿರುವ ಶೋಧ ಕಾರ್ಯದ ವೇಳೆ, SIT ತಂಡಕ್ಕೆ ಕೆಲವು ಸಣ್ಣಪುಟ್ಟ ಮೂಳೆಗಳ ತುಂಡುಗಳು ಮತ್ತು ಬಟ್ಟೆಯ ಅವಶೇಷಗಳು ಲಭ್ಯವಾಗಿವೆ. ಈ ಅವಶೇಷಗಳು ಭೂಮಿಯ ಮೇಲ್ಭಾಗದಲ್ಲಿ ಪತ್ತೆಯಾಗಿದ್ದು, ವಿಠಲ ಗೌಡ ಬುರುಡೆ ಸೂಚಿಸಿದ ಜಾಗದ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ಮುಂದುವರೆದಿದೆ. ಮೂಳೆಗಳು ಪತ್ತೆಯಾದ ಸ್ಥಳದಲ್ಲಿ ವಿಧಿವಿಜ್ಞಾನ ತಂಡ (SOCO) ಮಹಜರು ಪ್ರಕ್ರಿಯೆ ನಡೆಸಿದ್ದು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದೆ. ಇದು ಪ್ರಕರಣದ ಭೇದನೆಗೆ ಮತ್ತಷ್ಟು ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ