
ನವದೆಹಲಿ (ನ.30): ರಾಷ್ಟ್ರ ರಾಜಧಾನಿ ದೆಹಲಿಯ ಜಂಡೇವಾಲನ್‌ನಲ್ಲಿರುವ 1500 ವರ್ಷಗಳಷ್ಟು ಪುರಾತನವಾದ ಗೋರಖನಾಥ್ ದೇವಾಲಯವನ್ನು ದೆಹಲಿ ಸರ್ಕಾರವು ನೆಲಸಮಗೊಳಿಸುತ್ತಿರುವ ವರದಿಯು ದೇಶಾದ್ಯಂತ ಭಾರಿ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) 'ಹಿಂದುತ್ವ'ದ ಲೇಬಲ್ ಹಾಕಿಕೊಳ್ಳುತ್ತಿದ್ದರೂ, ಹಿಂದೂ ದೇವಾಲಯಗಳನ್ನೇ ಕೆಡವಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಆರ್‌ಎಸ್‌ಎಸ್ ಕಚೇರಿ ಬಳಿ ಇರುವ ಈ ದೇವಾಲಯ ತೆರವು ಮಾಡುತ್ತಿರುವ ಕಾರಣ, ಸಚಿವ ಪ್ರಿಯಾಂಕ್ ಖರ್ಗೆ ಅವರು, ಇಲ್ಲಿನ ಆರ್‌ಎಸ್‌ಎಸ್ ಕಟ್ಟಡದ ಮೌಲ್ಯ 300 ಕೋಟಿ ರೂ. ಆಗಿದೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಪುನಃ ಆರ್‌ಎಸ್‌ಎಸ್ ಕೆಣಕುವುದಕ್ಕೆ ಮುಂದಾಗಿದ್ದಾರೆ.
ರಿತು ರಥೌರ್ ಅವರು ತಮ್ಮ ಟ್ವಿಟ್ಟರ್ (ಈಗ X) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. 'ದೆಹಲಿ ಸರ್ಕಾರವು ಜಂಡೇವಾಲನ್‌ನಲ್ಲಿನ ಆರ್‌ಎಸ್‌ಎಸ್ ಕಚೇರಿ ಬಳಿಯಿರುವ 1500 ವರ್ಷಗಳಷ್ಟು ಹಳೆಯದಾದ ಗೋರಖನಾಥ್ ದೇವಸ್ಥಾನವನ್ನು ನೆಲಸಮಗೊಳಿಸುತ್ತಿದೆ. 24x7 ರಾಮ ಕಥೆ ನಡೆಯುವ ಪ್ರಾಚೀನ ದೇವಾಲಯವನ್ನು ಕೆಡವಲಾಗುತ್ತಿದೆ!' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಈ ದೇವಸ್ಥಾನವನ್ನು ಧ್ವಂಸಗೊಳಿಸಲು ಪ್ರಮುಖ ಕಾರಣ, ಕೇವಲ ಸರ್ಕಾರಿ ಅಧಿಕಾರಿಗಳಿಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಎಂಬ ಆರೋಪ ಕೇಳಿ ಬಂದಿದೆ. 'ಯಾವಾಗಲೂ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರೂ, ಬಿಜೆಪಿ ಆಡಳಿತವಿರುವಲ್ಲೆಲ್ಲಾ ಹಿಂದೂ ದೇವಾಲಯಗಳನ್ನು ಗುರಿಯಾಗಿಸಲಾಗುತ್ತಿದೆ. ಹಿಂದೂಗಳು ತಮ್ಮ ದೇವಾಲಯಗಳು ರಕ್ಷಿಸಲ್ಪಡುತ್ತವೆ ಎಂದು ನಂಬಿದರೆ, ಬದಲಾಗಿ ಅವುಗಳನ್ನು ಸದ್ದಿಲ್ಲದೆ ಅಳಿಸಲಾಗುತ್ತಿದೆ' ಎಂದು ರಿತು ರಥೌರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿವಾದಕ್ಕೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಧ್ವನಿಗೂಡಿಸಿದ್ದಾರೆ. ಆದರೆ ಅವರು ವಿವಾದವನ್ನು ಆರ್‌ಎಸ್‌ಎಸ್‌ನತ್ತ ತಿರುಗಿಸಿದ್ದಾರೆ. "ಆರ್‌ಎಸ್‌ಎಸ್ ಎಂಬುದು ನೋಂದಣಿಯಾಗದ, ನಿಯಂತ್ರಣವಿಲ್ಲದ 'ವ್ಯಕ್ತಿಗಳ ಸಮೂಹ'ವಾಗಿದ್ದು, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ಅನುಮಾನಾಸ್ಪದ ದೇಣಿಗೆಗಳು ಮತ್ತು ಅಕ್ರಮ ಹಣ ವರ್ಗಾವಣೆ (Money-laundering) ಮೂಲಕ ತನ್ನ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ" ಎಂದು ಖರ್ಗೆ ಆರೋಪಿಸಿದ್ದಾರೆ.
ಜಂಡೇವಾಲನ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿಯು 300 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಟ್ಟಡವಾಗಿದೆ. 'ಇವರಿಗೆ ಅಷ್ಟು ಹಣ ಎಲ್ಲಿಂದ ಬಂತು? ಗುರು ದಕ್ಷಿಣೆಯೇ? ಖಂಡಿತ!' ಎಂದು ಪ್ರಶ್ನಿಸಿದ್ದಾರೆ. ಸದ್ಯ ದೆಹಲಿಯಲ್ಲಿ ಪುರಾತನ ದೇವಸ್ಥಾನದ ನೆಲಸಮದ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ರಾಜಕೀಯ ಆರೋಪ-ಪ್ರತ್ಯಾರೋಪಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಿಂದೂಪರ ಸಂಘಟನೆಗಳು ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ