
ಸಂಪತ್ ತರೀಕೆರೆ
ಬೆಂಗಳೂರು (ಮೇ.18) : ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಳೆದ ಎರಡ್ಮೂರು ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ರಾಜ್ಯ ಆಹಾರ ಇಲಾಖೆ ಮಾಹಿತಿಯಂತೆ 2.87 ಲಕ್ಷ ಬಿಪಿಎಲ್ ಮತ್ತು 46,576 ಎಪಿಎಲ್ ಸೇರಿದಂತೆ ಒಟ್ಟು 3.34 ಲಕ್ಷ ಪಡಿತರ ಚೀಟಿಗಳು ವಿಲೇವಾರಿಗೆ ಬಾಕಿ ಇವೆ.
ಸದ್ಯ 2,87,790 ಬಿಪಿಎಲ್(BPL Ration card) ಹಾಗೂ 46,576 ಎಪಿಎಲ್ ಕಾರ್ಡು(APL Card)ಗಳಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿ ಮಾಡಿಲ್ಲ. ಹೀಗಾಗಿ ಅರ್ಜಿದಾರರು ಆಹಾರ ಇಲಾಖೆ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Ration Card ನಲ್ಲಿ ಮಕ್ಕಳ ಹೆಸರು ಸೇರಿಸೋದು ಸುಲಭ
2019ರಿಂದ ಈವರೆಗೆ ಬಿಪಿಎಲ್ ಪಡಿತರ ಚೀಟಿಗಾಗಿ ಬರೋಬ್ಬರಿ 8,88,259 ಅರ್ಜಿಗಳು ಸಲ್ಲಿಕೆಯಾಗಿವೆ. ಎಪಿಎಲ್ ಪಡಿತರ ಚೀಟಿಗಾಗಿ 1,80,559 ಆನ್‌ಲೈನ್ ಅರ್ಜಿಗಳು ಬಂದಿವೆ. ಬಿಪಿಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 43,654 ಅರ್ಜಿಗಳನ್ನು ಹಿಂಪಡೆಯಲಾಗಿದೆ. 7,17,563 ಅರ್ಜಿದಾರರ ಮನೆ ಪರಿಶೀಲಿಸಿದ್ದು, 3,76,928 ಅರ್ಜಿ ಮಾನ್ಯ ಮಾಡಲಾಗಿದೆ. ಒಟ್ಟು ಸಲ್ಲಿಸಿರುವ ಅರ್ಜಿಗಳಲ್ಲಿ 1,79,885 ಅರ್ಜಿಗಳನ್ನು ಇಲಾಖೆ ತಿರಸ್ಕರಿಸಿದೆ. 5,56,813 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 2023 ಏಪ್ರಿಲ್ 22ರ ಮಾಹಿತಿಯಂತೆ 2,87,790 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಉಳಿದಿವೆ.
ಅದೇ ರೀತಿ ಎಪಿಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳಲ್ಲಿ 1,36,272 ಅರ್ಜಿದಾರರ ಮನೆ ಪರಿಶೀಲಿಸಿದ್ದು, 1,19,517 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 9811 ಅರ್ಜಿಗಳು ತಿರಸ್ಕೃತಗೊಂಡಿದ್ದು, 46,576 ಅರ್ಜಿಗಳು ವಿಲೇವಾರಿಯಾಗಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ.
ಕಾರ್ಡಿಲ್ಲದೆ ಅಕ್ಕಿ ಸಿಗುತ್ತಿಲ್ಲ:
‘ಕೋವಿಡ್ ನಂತರ ಅನೇಕ ಕುಟುಂಬಗಳು ಕೆಲಸ ಕಳೆದುಕೊಂಡು ಸರ್ಕಾರ ಕೊಡುವ ಅನ್ನಭಾಗ್ಯ ಯೋಜನೆಯನ್ನೇ ನೆಚ್ಚಿಕೊಂಡಿವೆ. ಈ ಹಿಂದೆ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ಸಿಗುತ್ತಿತ್ತು. ಈಗ ಕೇವಲ 5 ಕೆಜಿ ಆಗಿದೆ. ಅರ್ಜಿ ಸಲ್ಲಿಸಿ ಮೂರು ವರ್ಷವಾಗಿದ್ದರೂ ಬಿಪಿಎಲ್ ಕಾರ್ಡು ಕೊಟ್ಟಿಲ್ಲ. ಹಾಗಾಗಿ ಸಿಗುತ್ತಿರುವ ಅಕ್ಕಿಗೂ ಕಲ್ಲುಬಿದ್ದಿದೆ. ಕೊರೋನಾ ಇರಬೇಕಾದ್ರೆ ಎಲ್ಲರಿಗೂ ಅಕ್ಕಿ ಕೊಡುತ್ತಿದ್ದರು. ಈಗ ಕಾರ್ಡು ಇಲ್ಲವೆಂದು ಅಕ್ಕಿ ಕೊಡುತ್ತಿಲ್ಲ’ ಎಂದು ಬೆಂಗಳೂರಿನ ಲಗ್ಗೆರೆ ನಿವಾಸಿ ಸರಸ್ವತಮ್ಮ ಅಳಲು ತೋಡಿಕೊಂಡಿದ್ದಾರೆ.
‘ಬಿಪಿಎಲ್ ಅಥವಾ ಎಪಿಎಲ್ ಯಾವುದಾದರೊಂದು ಕಾರ್ಡು ಇದ್ದರೆ ಸಾಕೆಂದು ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಆಗಿದೆ. ಇದುವರೆಗೂ ಅರ್ಜಿ ಅಂಗೀಕಾರ ಆಗಿದೆಯೋ ಇಲ್ಲವೇ ರಿಜೆಕ್ಟ್ ಆಗಿದೆಯೋ ಒಂದೂ ಗೊತ್ತಾಗಿಲ್ಲ. ವಿವಿಧ ಸರ್ಕಾರ ಸೌಲಭ್ಯಗಳನ್ನು ಪಡೆಯಲು ಪಡಿತರಚೀಟಿ ಅವಶ್ಯಕತೆ ಇದೆ. ಕುಟುಂಬದಲ್ಲಿ ನಾಲ್ವರಿದ್ದು, ಸ್ಥಳ ಪರಿಶೀಲನೆಗೆ ಯಾರಾದರೂ ಅಧಿಕಾರಿ ಬರಬಹುದು ಎಂದು ಕಾದು ಸಾಕಾಗಿದೆ. ಈವರೆಗೂ ಆಹಾರ ಇಲಾಖೆಯಿಂದ ಯಾವ ಸಂದೇಶವೂ ಬಂದಿಲ್ಲ’ ಎಂದು ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ನೇತ್ರಾವತಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಬಳಿಕ ಅರ್ಜಿ ವಿಲೇವಾರಿ: ಇಲಾಖೆ
ಅನರ್ಹರು ಪಡಿತರ ಚೀಟಿ ಪಡೆದಿದ್ದನ್ನು ಪತ್ತೆ ಮಾಡಿ ರದ್ದುಗೊಳಿಸುವ ಕಾರ್ಯಕ್ಕೆ ಈ ಹಿಂದೆ ಇಲಾಖೆ ಹೆಚ್ಚು ಆದ್ಯತೆ ನೀಡಿತ್ತು. ಇದರಿಂದಾಗಿ ಹೊಸ ಪಡಿತರ ಚೀಟಿ ನೀಡುವುದಕ್ಕೆ ತಾತ್ಕಾಲಿಕವಾಗಿ ವಿಳಂಬವಾಗಿದೆ. ಪ್ರಸ್ತುತ ಚುನಾವಣೆ ಕೆಲಸಕ್ಕೆ ಅಧಿಕಾರಿಗಳು ನೇಮಕಗೊಂಡಿದ್ದರಿಂದ ಕಾರ್ಡು ವಿತರಣೆ ವಿಳಂಬವಾಗಿದೆ. ಚುನಾವಣೆ ಮುಗಿದಿರುವುದರಿಂದ ಕೂಡಲೇ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳುವುದಾಗಿ ಆಹಾರ ಇಲಾಖೆ (Department of Food) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Dharwad: ಪ್ಲಾಸ್ಟಿಕ್ ರೇಷನ್ ಅಕ್ಕಿಯೆಂದು ಭಯಗೊಂಡ ಗ್ರಾಮಸ್ಥರು: ಅಡುಗೆ ಮಾಡಲು ಭಯ ಪಡುತ್ತಿರುವ ಮಹಿಳೆಯರು
3.34 ಲಕ್ಷ ಅರ್ಜಿ ವಿಲೇವಾರಿಗೆ ಬಾಕಿ
ಬಾಗಲಕೋಟೆ 11,418, ಬೆಂಗಳೂರು 12,765, ಬೆಳಗಾವಿ 27,411, ವಿಜಯಪುರ 17,228, ಬೀದರ್ 12,661, ಧಾರವಾಡ 13,953, ಹಾವೇರಿ 10,146, ರಾಯಚೂರು 12,498, ಉತ್ತರ ಕನ್ನಡ 7,189, ಯಾದಗಿರಿ 6,356, ವಿಜಯನಗರ 7,264 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 2.87 ಲಕ್ಷ ಬಿಪಿಎಲ್ ಕಾರ್ಡು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ಬಾಕಿ ಉಳಿದಿವೆ. 46,576 ಎಪಿಎಲ್ ಸೇರಿದಂತೆ ಒಟ್ಟು 3.34 ಲಕ್ಷ ಪಡಿತರ ಚೀಟಿಗಳು ವಿಲೇವಾರಿಗೆ ಬಾಕಿ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ