
ಬೆಂಗಳೂರು (ಏ.21): ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿ ಕೆಲ ಐಪಿಎಸ್ ಅಧಿಕಾರಿಗಳ ದೌರ್ಜನ್ಯವನ್ನು ಎಳೆಎಳೆಯಾಗಿ ಬಹಿರಂಗಪಡಿಸಲು ಅನುಮತಿ ನೀಡುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ(ಡಿಸಿಆರ್‌ಇ) ಬೆಂಗಳೂರು ನಗರ ವಲಯದ ಎಸ್ಪಿ ಎಸ್.ಎಸ್.ಕಾಶಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇರ್ಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ಬಲದಿಂದ ಕೆಳಹಂತದ ಅಧಿಕಾರಿಗಳು/ಸಿಬ್ಬಂದಿ ಮೇಲೆ ದರ್ಪ, ತಾರತಮ್ಯ, ಸ್ವಜನ ಪಕ್ಷಪಾತದಂತಹ ಪ್ರವೃತ್ತಿಗಳನ್ನು ತೋರುತ್ತಿರುತ್ತಾರೆ. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು ಮೂಲತಃ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ಅಧಿಕಾರಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ವಿಪರೀತ ದರ್ಪ ತೋರಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ.
ನೀವು ಒಬ್ಬ ಅಪ್ಪಟ ಕನ್ನಡ ನಾಡಿನ ಅಧಿಕಾರಿಯಾಗಿದ್ದು, ನಿಮ್ಮಿಂದ ನ್ಯಾಯ ಸಿಗುತ್ತದೆ ಎಂಬ ಮಹೋನ್ನತ ಉದ್ದೇಶದಿಂದ ಈ ಬಗ್ಗೆ ನನ್ನ ಅಹವಾಲನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ಹಲವು ಬಾರಿ ನಿಮಗೆ ತಿಳಿಸಿರುತ್ತೇನೆ. ನಾನು ಸದರಿ ವಿಚಾರವನ್ನು ಪ್ರಸ್ತಾಪಿಸಿದಾಗ ತಾವು ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶೇ.20ರಷ್ಟು ಮಾತ್ರ ಯಶಸ್ವಿಯಾಗಿದ್ದು, ಇನ್ನೂ ಶೇ.80ರಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಹೊರ ರಾಜ್ಯದಿಂದ ಕನ್ನಡಿಗರ ಸೇವೆಗೆಂದು ಬಂದು ಕನ್ನಡಿಗರಿಂದ ಕೂಲಿ ಪಡೆಯುತ್ತಿರುವ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಕರ್ಮಕಾಂಡಗಳು, ಅಧೀನ ಅಧಿಕಾರಿ/ಸಿಬ್ಬಂದಿಗೆ ನೀಡಿರುವ ಕಿರುಕುಳಗಳು, ಮಾಡಿರುವ ದೌರ್ಜನ್ಯಗಳು ಹಾಗೂ ಇತರೆ ಕೆಲ ಐಪಿಎಸ್ ಅಧಿಕಾರಿಗಳ ಕರ್ಮಕಾಂಡವನ್ನು ಮತ್ತು ಕರ್ನಾಟಕದಲ್ಲಿ ಕನ್ನಡಿಗ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗಳು ಮತ್ತು ತಮ್ಮ ಸಮಕ್ಷಮದಲ್ಲಿ ಎಳೆಎಳೆಯಾಗಿ ತೆರೆದಿಡುತ್ತೇನೆ.
ಹೀಗಾಗಿ ನನಗೆ ಏ.18ರಿಂದ ಏ.29ರೊಳಗೆ ಒಂದು ದಿನಾಂಕ ನಿಗದಿ ಮಾಡಿ 30 ನಿಮಿಷ ಕಾಲಾವಕಾಶ ಕೊಡಿಸುವಂತೆ ಎಸ್.ಎಸ್.ಕಾಶಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ