ಬಸ್ ಮುಂಭಾಗ ರ‍್ಯಾಕ್ ಅಳವಡಿಕೆ| ಹೊರ ವರ್ತುತ ರಸ್ತೆಯಲ್ಲಿ ಸೇವೆ ಲಭ್ಯ| ರ‍್ಯಾಕ್‌ನಲ್ಲಿ 2 ಸೈಕಲ್ ನಿಲ್ಲಿಸಲು ಅವಕಾಶ| 100 ಬಸ್‌ಗಳಿಗೆ ತಿಂಗಳಲ್ಲಿ ರ‍್ಯಾಕ್ ಅಳವಡಿಕೆ|
ಬೆಂಗಳೂರು(ಆ.09): ಸೈಕಲ್ ಸವಾರರು ತಮ್ಮೊಂದಿಗೆ ಸೈಕಲ್ ತೆಗೆದುಕೊಂಡು ಪ್ರಯಾಣಿಸಲು ಅನುವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನ ಮುಂಭಾಗ ಸೈಕಲ್ ರ‍್ಯಾಕ್ ಅಳವಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಇಂತಹ ವ್ಯವಸ್ಥೆ ಕಲ್ಪಿಸುತ್ತಿದ್ದು, ಪ್ರಯಾಣಿಕರಿಂದ ಪೂರಕ ಪ್ರತಿಕ್ರಿಯೆ ಬಂದರೆ ಎಲ್ಲ ಬಸ್‌ಗಳಲ್ಲಿ ಅಳವಡಿಸಲು ಚಿಂತನೆ ನಡೆಸಿದೆ.
ಕೊರೋನಾ ಸೋಂಕು ಆರಂಭವಾದ ಬಳಿಕ ಸಮೂಹ ಸಾರಿಗೆಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ಐಟಿ-ಬಿಟಿ ಕಂಪನಿಗಳ ಹಲವು ಉದ್ಯೋಗಿಗಳು ಮನೆಗಳಿಂದ ಕಚೇರಿಗೆ ತೆರಳಲು ಸೈಕಲ್ ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಎಂಟಿಸಿ, ಸೈಕಲ್ ಸವಾರಿ ಪ್ರೋತ್ಸಾಹಿಸಲು ಮುಂದಾಗಿದೆ. ಪ್ರಯಾಣಿಕರು, ಬಸ್‌ನಲ್ಲಿ ತಮ್ಮೊಂದಿಗೆ ಸೈಕಲ್ ಕೊಂಡೊಯ್ಯಲು ಅನುವಾಗುವಂತೆ ರಾರಯಕ್ ಅಳವಡಿಸಲು ತೀರ್ಮಾನಿಸಿದೆ. ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಈ ಸೈಕಲ್ ರ‍್ಯಾಕ್ ಅಳವಡಿಸಲಿದ್ದು, ಇನ್ನೊಂದು ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಸೈಕಲ್ ಸಾಗಾಟದ ಸಂಬಂಧ ದರ ನಿಗದಿ ಮಾಡುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ಯೂಟಿಗಾಗಿ ಬಿಎಂಟಿಸಿ ಡ್ರೈವರ್, ಕಂಡಕ್ಟರ್ 'ಚಪ್ಪಲಿ ಕ್ಯೂ'..!
ಬಿಬಿಎಂಪಿ ಈಗಾಗಲೇ ಕೆ.ಆರ್.ಪುರಂ ಟಿನ್ ಫ್ಯಾಕ್ಟರಿ- ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಿಸಲಾಗಿರುವ ಪ್ರತ್ಯೇಕ ಬಸ್ ಪಥದಲ್ಲಿ ಬೈಸಿಕಲ್ ಪಥ ನಿರ್ಮಿಸಲು ನಗರದ ಭೂಸಾರಿಗೆ ನಿರ್ದೇಶನಾಲಯವು ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಮೊದಲಿಗೆ ಈ ಪ್ರತ್ಯೇಕ ಬಸ್ ಪಥದಲ್ಲಿ ಸಂಚರಿಸುವ ಬಸ್‌ಗಳಿಗೆ ಬೈಸಿಕಲ್ ರಾರಯಕ್ ಅಳವಡಿಸಲು ಯೋಜಿಸಿದೆ.
ರ‍್ಯಾಕ್ ತಯಾರಿ:
ಬಿಎಂಟಿಸಿ ಕೇಂದ್ರ ಕಾರ್ಯಾಗಾರದಲ್ಲಿ ಅಲ್ಲಿನ ಸಿಬ್ಬಂದಿ ಈ ಬೈಸಿಕಲ್ ರ‍್ಯಾಕ್ ತಯಾರಿಸುತ್ತಿದ್ದಾರೆ. ಬಸ್‌ನ ಮುಂಭಾಗ ಈ ರ‍್ಯಾಕ್ ಅಳವಡಿಸುತ್ತಿದ್ದು, ಏಕಕಾಲಕ್ಕೆ ಎರಡು ಸೈಕಲ್‌ಗಳನ್ನು ಈ ರ‍್ಯಾಕ್‌ನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ. ದೂರದ ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರು ಬಸ್‌ನಲ್ಲಿ ಸೈಕಲ್ ತೆಗೆದುಕೊಂಡು ಹೋಗಬಹುದು. ನಿಗದಿತ ಸ್ಥಳಗಳಲ್ಲಿ ಇಳಿದುಕೊಂಡು ಸೈಕಲ್ ಬಳಸಲು ಅನುಕೂಲವಾಗಲಿದೆ.