ಬೆಂಗಳೂರು (ಅ.28): ವಿಶ್ವದ ವಿವಿಧ ದೇಶಗಳಲ್ಲಿ ಕೊರೋನಾ (coronavirus) ಮೂರನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಂಕು ಅಪಾಯ ಹೊಂದಿರುವ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ (International Travellers) ಹಲವು ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ (Karnataka Govt) ಆದೇಶ ಹೊರಡಿಸಿದೆ.
ಅಪಾಯ ಸಾಧ್ಯತೆ ಇರುವ ಬ್ರಿಟನ್ (Britain), ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ಬಾಂಗ್ಲಾದೇಶ, ಚೀನಾ (China), ಮ್ಯಾರಿಷಸ್, ನ್ಯೂಜಿಲೆಂಡ್, ಜಿಂಬಾಂಬ್ವೆ ಹಾಗೂ ಬೊಸ್ಟಾವನಾ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಗಳಿಗೆ ಆಗಮಿಸುವವರು ಎರಡೂ ಡೋಸ್ ಲಸಿಕೆ ಪಡೆದಿದ್ದರೂ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
undefined
ಪರೀಕ್ಷೆಗೆ(test) ಒಳಪಟ್ಟಬಳಿಕ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು. ಎಂಟನೇ ದಿನ ಮತ್ತೆ ಸೋಂಕು ಪರೀಕ್ಷೆಗೆ (test) ಒಳಪಡಬೇಕು. ಬಳಿಕ ಏಳು ದಿನಗಳ ಕಾಲ ಸ್ವಯಂ ನಿಗಾ ವಹಿಸಿ ಬಳಿಕವಷ್ಟೇ ಮುಕ್ತವಾಗಿ ಓಡಾಡಬಹುದು ಎಂದು ಷರತ್ತು ವಿಧಿಸಿದೆ.
ಕೆಲವು ದೇಶಗಳಿಗೆ ವಿನಾಯ್ತಿ:
ಇನ್ನು ಭಾರತದ ಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರಸ್ ಸೇರಿ 11 ದೇಶಗಳಿಂದ ಆಗಮಿಸುವವರು ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಕಡ್ಡಾಯ ಹೋಂ ಕ್ವಾರಂಟೈನ್ ಅಗತ್ಯವಿಲ್ಲ. ಇವರು 72 ಗಂಟೆಗೂ ಹಳೆಯದಲ್ಲದ ನೆಗೆಟಿವ್ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.
ಉಳಿದ ಪ್ರಯಾಣಿಕರಿಗೆ ನಿಯಮವೇನು?:
ಇನ್ನು ಈ ಪಟ್ಟಿಗಳಲ್ಲಿ ಹೆಸರು ಇಲ್ಲದ ದೇಶಗಳಲ್ಲಿ ಈ ಹಿಂದಿನ ನಿಯಮಾವಳಿಗಳೇ ಅನ್ವಯವಾಗಲಿವೆ. ಆನ್‌ಲೈನ್ (Online ) ಏರ್ ಸುವಿಧಾ ಪೋರ್ಟಲ್‌ನಲ್ಲಿ (Portal) ಸ್ವಯಂಘೋಷಿತ ಪ್ರಮಾಣ ಪತ್ರ ನೀಡಬೇಕು. 72 ಗಂಟೆ ಹಳೆಯದಲ್ಲದ ನೆಗೆಟಿವ್ ಆರ್‌ಟಿಪಿಸಿಆರ್ ವರದಿ ಅಪ್‌ಲೋಡ್ ಮಾಡಬೇಕು. ದೇಶದಲ್ಲಿನ ಕಾನೂನಿಗೆ ಗೌರವ ನೀಡಿ ಹೋಂ ಕ್ವಾರಂಟೈನ್ ಅಥವಾ ಸ್ವ ನಿಗಾದಲ್ಲಿ ಇರಲು ಬದ್ಧನಾಗಿರುತ್ತೇನೆ ಎಂದು ಒಪ್ಪಿಗೆ ನೀಡಬೇಕು.
ರಾಜ್ಯಕ್ಕೆ ಆಗಮಿಸುವ ವೇಳೆ ರೋಗ ಲಕ್ಷಣಗಳು ಪತ್ತೆಯಾದರೆ ಪರೀಕ್ಷೆ ಮಾಡಿ ಕ್ವಾರಂಟೈನ್ ವಿಧಿಸಲಾಗುವುದು. ರೋಗ ಲಕ್ಷಣ ಇಲ್ಲದಿದ್ದರೆ ಸ್ವಯಂ ನಿಗಾದಲ್ಲಿರಲು ಸೂಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏಕಾಏಕಿ ನಿರ್ಬಂಧ: ಪ್ರಯಾಣಿಕರಲ್ಲಿ ಗೊಂದಲ
ರಾಜ್ಯ ಸರ್ಕಾರವು ಏಕಾಏಕಿ ರಾಜ್ಯಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ಸ್ಥಿತಿ ಉಂಟಾಗಿದೆ. ಅ.25 ರಂದು ಸರ್ಕಾರ ಆದೇಶ ಹೊರಡಿಸಿದ್ದು ಬಹುತೇಕರಿಗೆ ನೂತನ ಮಾರ್ಗಸೂಚಿ ತಲುಪಿಲ್ಲ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು ಹಾಗೂ ನೆಗೆಟಿವ್ ಬಂದರೂ ಮನೆಯಲ್ಲಿ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬುದನ್ನು ತಿಳಿದು ಪ್ರಯಾಣಿಕರು ಆರೋಗ್ಯ ಇಲಾಖೆ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದರು. ಇದರಿಂದ ತೀವ್ರ ಗೊಂದಲ ಸೃಷ್ಟಿಯಾಗಿದೆ.
ರೂಪಾಂತರಿ ನಿರ್ಲಕ್ಷ್ಯ
ವಿಶ್ವದ ವಿವಿಧ ದೇಶಗಳಲ್ಲಿ ರೂಪಾಂತರಿ ವೈರಾಣುಗಳ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ(Karnataka) ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ(Genomic Sequence Test)ಪ್ರಮಾಣ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ (TAC) ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಎವೈ 4.2(AY 4.2) ವೈರಾಣು ಪತ್ತೆಯಾಗಿದೆ. ಆದರೆ, ಸದ್ಯಕ್ಕೆ ಈ ವೈರಾಣು(Virus) ನಮಲ್ಲಿ ವ್ಯಾಪಕವಾಗಿ ಹರಡಿಲ್ಲ. ಆ ರೀತಿಯ ಲಕ್ಷಣಗಳೂ ಸಹ ಗೋಚರಿಸಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಹೆಚ್ಚಳಕ್ಕೆ ಟಿಎಸಿ ಸಲಹೆ ನೀಡಿದರೆ ಮಾಡಲಾಗುವುದು. ಪ್ರಸ್ತುತ ವರದಿಯಾಗುತ್ತಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಶೇ.10 ರಷ್ಟು ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಈ ಪ್ರಮಾಣ ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ’ ಎಂದು ಹೇಳಿದರು.