Latest Videos

ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು: ಇದು ವ್ಯಾಕ್ಸಿನ್ ಭಯವಲ್ಲ, ಉದಾಸೀನ!

By Suvarna NewsFirst Published Mar 28, 2022, 5:04 AM IST
Highlights

* ಮಕ್ಕಳ ಲಸಿಕಾಕರಣದಲ್ಲಿ ಕೇವಲ ಶೇ.5ರಷ್ಟುಸಾಧನೆ

* ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು

* ಪರೀಕ್ಷಾ ಸಮಯ, ಹೊಸ ಅಲೆ ಆತಂಕ ಇಲ್ಲದ ಕಾರಣ ದಾಸೀನ

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಮಾ.28): ರಾಜ್ಯದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್‌-19ರಿಂದ ರಕ್ಷಣೆ ನೀಡಲು ಆರಂಭಿಸಿರುವ ಲಸಿಕಾ ಅಭಿಯಾನಕ್ಕೆ ಇನ್ನೂ ನಿರೀಕ್ಷಿತ ವೇಗ ದೊರೆತಿಲ್ಲ. ಮಾ.16ರಿಂದ ಅಭಿಯಾನ ಆರಂಭಗೊಂಡಿದ್ದರೂ ರಾಜ್ಯದಲ್ಲಿನ 20 ಲಕ್ಷ ಮಕ್ಕಳ ಪೈಕಿ ಈವರೆಗೆ 1.14 ಲಕ್ಷ ಮಕ್ಕಳು ಮಾತ್ರ ಲಸಿಕೆ ಪಡೆದಿದ್ದಾರೆ. ಸದ್ಯ ಶೇ.5 ರಷ್ಟುಮಾತ್ರ ಸಾಧನೆಯಾಗಿದೆ.

ಸದ್ಯ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡುತ್ತಿರುವುದು, ಪರೀಕ್ಷೆ ನಡೆಯುತ್ತಿರುವುದು, ಚಿಕ್ಕಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಹಿಂಜರಿಯುತ್ತಿರುವ ಪರಿಣಾಮ ಲಸಿಕೆ ನೀಡಿಕೆ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಸದ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಹ ಲಸಿಕೆ ಕೊಡಿಸಲು ಉದಾಸೀನ ಮಾಡುತ್ತಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಲಸಿಕೆ ಪಡೆದ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಾವೇರಿಯಲ್ಲಿ ಕೇವಲ 23, ಬೀದರ್‌ನಲ್ಲಿ 24, ಶಿವಮೊಗ್ಗ 40, ಬಾಗಲಕೋಟೆ 58, ಮಂಡ್ಯ 63 ಮತ್ತು ದಾವಣಗೆರೆಯಲ್ಲಿ 88 ಮಂದಿ ಮಕ್ಕಳು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2.81 ಲಕ್ಷ ಮಕ್ಕಳಿದ್ದರೂ ಲಸಿಕೆ ಪಡೆದಿರುವುದು 7,741 ಮಂದಿ ಮಾತ್ರ.

ಚಿತ್ರದುರ್ಗದಲ್ಲಿ 16,578 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಕೋಲಾರದಲ್ಲಿ 13,499, ಬಳ್ಳಾರಿ 10,629, ಚಾಮರಾಜ ನಗರ 10,072, ತುಮಕೂರು 9,442 ಮಕ್ಕಳು ಲಸಿಕೆ ಪಡೆದಿದ್ದಾರೆ. ಈವರೆಗೆ ಲಸಿಕೆ ಪಡೆದ ರಾಜ್ಯದ ಮಕ್ಕಳಲ್ಲಿ ಈ ಐದು ಜಿಲ್ಲೆಗಳ ಪಾಲು ಹೆಚ್ಚು ಕಡಿಮೆ ಅರ್ಧದಷ್ಟಿದೆ.

ಹೊಸ ಅಲೆಯ ಆತಂಕ ಇಲ್ಲ:

15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಗೊಂಡಾಗ ಓಮಿಕ್ರೋನ್‌ ತಳಿ ಸೃಷ್ಟಿಯಾಗಿ ಕೋವಿಡ್‌-19ರ ಮೂರನೇ ಅಲೆಯ ಭಯ ಹೆಚ್ಚಿತ್ತು. ಇದರೊಂದಿಗೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಕಂಟಕವಿದೆ ಎಂದು ಸಾಂಕ್ರಾಮಿಕ ತಜ್ಞರು ಬಹಿರಂಗವಾಗಿ ಅಭಿಪ್ರಾಯ ಹರಿಬಿಟ್ಟಿದ್ದರು. ಇದರಿಂದ ಮಕ್ಕಳು ಲಸಿಕೆ ಪಡೆಯಲು ಮುಂದಾಗಿದ್ದರು. ಆದರೆ ಈಗ ನಾಲ್ಕನೇ ಅಲೆಯ ಆತಂಕವಾಗಲಿ, ಹೊಸ ತಳಿಯ ರೂಪುಗೊಂಡ ಸುದ್ದಿಯಾಗಲಿ ಇಲ್ಲ. ಆದ್ದರಿಂದ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬರುತ್ತಿಲ್ಲ ಎಂದು ಲಸಿಕಾ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಮಕ್ಕಳಿಗೆ ಲಸಿಕೆ ಕೊಡಿಸುವ ಅನೇಕ ಪೋಷಕರಲ್ಲಿ ಭಯ ಇದೆ. ಪರೀಕ್ಷಾ ವೇಳೆಯಲ್ಲಿ ಲಸಿಕೆ ಕೊಡಿಸಿದರೆ ಜ್ವರ ಇತ್ಯಾದಿ ತೊಂದರೆ ಕಂಡು ಬಂದರೆ ಪರೀಕ್ಷೆಗೆ ಹಾಜರಾಗಲು ತೊಂದರೆ ಉಂಟಾಗಬಹುದು ಎಂಬ ಆತಂಕದಿಂದ ಲಸಿಕೆ ಕೊಡಿಸಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಲಸಿಕಾ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ವಾರದ ಆರಂಭದಲ್ಲಿ ನಾವು ಶಾಲೆಗಳಲ್ಲಿಯೂ ಲಸಿಕೆ ನೀಡಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯವಾದ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಶಾಲೆಯಲ್ಲಿ ಲಸಿಕೆ ನೀಡಿಕೆ ಆರಂಭಿಸಿದ ನಂತರ ಲಸಿಕಾ ಅಭಿಯಾನ ಚುರುಕು ಪಡೆಯಲಿದೆ. ಲಸಿಕೆ ಪಡೆಯುವುದರಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ.

15ರಿಂದ 18 ವರ್ಷದವರ ಲಸಿಕೆಯೂ ನಿಧಾನ

15ರಿಂದ 18 ವರ್ಷದ ಮಕ್ಕಳ ಲಸಿಕಾ ಅಭಿಯಾನದಲ್ಲಿ ಆರಂಭದಲ್ಲಿ ಕಂಡು ಬಂದ ಉತ್ಸಾಹ ಆ ಬಳಿಕ ಕಳೆಗುಂದಿದೆ. ಈ ಪ್ರಾಯದ ಆರರಲ್ಲಿ ಒಂದು ಮಗು ಇನ್ನೂ ಲಸಿಕೆ ಪಡೆದಿಲ್ಲ. 31 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದ್ದರೂ 24.60 ಲಕ್ಷ ಮಕ್ಕಳು ಮಾತ್ರ ಲಸಿಕೆ ಪಡೆದಿದ್ದಾರೆ. ಜನವರಿ 20ರ ಬಳಿಕ ಈವರೆಗೆ ಕೇವಲ ನಾಲ್ಕು ಲಕ್ಷ ಮಕ್ಕಳು ಮಾತ್ರ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಮೂರನೇ ಅಲೆಯಲ್ಲಿ ಹೆಚ್ಚು ಮಕ್ಕಳಲ್ಲಿ ಕೋವಿಡ್‌ ಇದ್ದ ಕಾರಣ ಲಸಿಕೀಕರಣ ಪ್ರಕ್ರಿಯೆ ನಿಧಾನವಾಗಿದೆ ಎಂದು ಅರುಂಧತಿ ಚಂದ್ರಶೇಖರ್‌ ಹೇಳುತ್ತಾರೆ.

click me!