ಕರೋನಾ ವೈರಸ್ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್| ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ| ಈವರೆಗೆ ಒಂದೂ ಸೋಂಕಿನ ಪ್ರಕರಣ ಇಲ್ಲ
ಬೆಂಗಳೂರು[ಫೆ.01]: ಚೀನಾದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಕಟ್ಟೆಚ್ಚರ ಮುಂದುವರೆಸಿದೆ. ಸೋಂಕು ಲಕ್ಷಣಗಳು ಕಂಡುಬಂದಿದ್ದವರ ಪೈಕಿ ಶುಕ್ರವಾರ 8 ಮಂದಿಯ ಪ್ರಯೋಗಾಲಯ ವರದಿ ಬಂದಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜ.30 ರಿಂದ 31ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 394 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಇದರಲ್ಲಿ ಹತ್ತು ಮಂದಿಗೆ ನೆಗಡಿ, ಶೀತದ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ರಾಜೀವ್‌ಗಾಂಧಿ ಎದೆರೋಗದ ಆಸ್ಪತ್ರೆಗೆ ದಾಖಲಿಸಿದ್ದು, ರಕ್ತದ ಮಾದರಿಗಳನ್ನು ಶುಕ್ರವಾರ ಪುಣೆಯ ವೈರಾಣು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಈವರೆಗೆ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಗುರುವಾರದವರೆಗೆ ಒಟ್ಟು 13 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಂಕಿತರ ರಕ್ತದ ಮಾದರಿಯನ್ನು ಪುಣೆಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ಮೊದಲ ಹಂತದಲ್ಲಿ ನಾಲ್ಕು ಮಂದಿಯ ವರದಿ ಬಂದಿದ್ದು, ನಾಲ್ಕೂ ಮಂದಿಗೆ ಸೋಂಕು ಇಲ್ಲ ಎಂಬುದು ದೃಢಪಟ್ಟಿತ್ತು. ಶುಕ್ರವಾರ ಎಂಟು ಮಂದಿಯ ವರದಿ ಬಂದಿದ್ದು, ಇನ್ನೊಬ್ಬರ ವರದಿ ಮಾತ್ರ ಬರಬೇಕಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
4,367 ಮಂದಿಯ ತಪಾಸಣೆ:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಿಂದ ಕರೋನಾ ವೈರಾಣು ಸೋಂಕಿತರ ತಪಾಸಣಾ ಡೆಸ್ಕ್ ಸ್ಥಾಪಿಸಲಾಗಿದೆ. ಚೀನಾದಿಂದ ಆಗಮಿಸಿರುವ ಪ್ರತಿಯೊಬ್ಬರೂ ಇಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿ ತಪಾಸಣೆ ನಡೆಸಲಾಗುತ್ತಿದೆ. ಈವರೆಗೆ ಒಟ್ಟು 4,367 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಮೂರು ಮಂದಿ ಕರೋನಾ ವೈರಸ್ ಹರಡಿರುವ ವುಹಾನ್ ನಗರದಿಂದಲೇ ಬಂದವರು. ಹೀಗಾಗಿ ಇವರ ಬಗ್ಗೆ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕು ಲಕ್ಷಣಗಳಿಲ್ಲದವರು ಮನೆಗೆ:
ಕೇಂದ್ರ ಆರೋಗ್ಯ ಇಲಾಖೆ ಮಾನದಂಡಗಳ ಪ್ರಕಾರ ಪ್ರಾಥಮಿಕ ಪರೀಕ್ಷೆ ವೇಳೆ ಸೋಂಕಿನ ಲಕ್ಷಣಗಳು ಗೋಚರಿಸದಿದ್ದರೆ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವುದು ಅಥವಾ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಅವರನ್ನು ಮನೆಗೆ ಕಳುಹಿಸಿ ಪ್ರತ್ಯೇಕವಾಗಿಟ್ಟು 21 ದಿನಗಳ ಕಾಲ ನಿಗಾ ವಹಿಸಲಾಗುತ್ತದೆ. ಹೀಗಾಗಿ ಬಹುತೇಕ ಮಂದಿಯನ್ನು ಮನೆಗೆ ವಾಪಸು ಕಳುಹಿಸಲಾಗಿದೆ. ಇನ್ನು ಶಂಕಿತ ಲಕ್ಷಣಗಳಿರುವವರಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
* ಸಾಮಾನ್ಯ ಶೀತಕ್ಕೂ ತಪಾಸಣೆಗೆ ಒತ್ತಾಯ
ಚೀನಾದಲ್ಲಿ ಕರೋನಾ ವೈರಸ್‌ನಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿನ ಜನ ಸಾಮಾನ್ಯರಲ್ಲೂ ಕರೋನಾ ಭೀತಿ ಆವರಿಸಿದೆ. ಸಾಮಾನ್ಯ ನೆಗಡಿ, ಶೀತದ ಲಕ್ಷಣ ಕಂಡುಬರುವವರೂ ರಾಜೀವ್‌ಗಾಂಧಿ ಎದೆರೋಗದ ಆಸ್ಪತ್ರೆಗೆ ತೆರಳಿ ಕರೋನಾ ತಪಾಸಣೆಗೆ ಪಟ್ಟು ಹಿಡಿಯುತ್ತಿರುವುದು ಸಾಮಾನ್ಯವಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ ಈವರೆಗೂ ಕರೋನಾ ಪ್ರಕರಣ ದೃಢಪಟ್ಟಿಲ್ಲ. ಕೇರಳದಲ್ಲಿ ಮಾತ್ರ ಒಂದು ಪ್ರಕರಣ ವರದಿಯಾಗಿದೆ. ಶೀತ, ನೆಗಡಿ, ಜ್ವರದ ಲಕ್ಷಣಗಳಿರುವ ಪ್ರತಿಯೊಬ್ಬರೂ ಕರೋನಾ ಎಂದು ಭೀತಿ ಪಡುವ ಅಗತ್ಯವಿಲ್ಲ. ಚೀನಾದ ಪ್ರವಾಸ ಮಾಡಿರುವ ಹಿನ್ನೆಲೆ ಹೊಂದಿರುವವರು ಅಥವಾ ವೈರಾಣು ಹಾವಳಿ ಇರುವ ವುಹಾನ್ ನಗರಕ್ಕೆ 14 ದಿನಗಳ ಹಿಂದೆ ಯಾವತ್ತಾದರೂ ಭೇಟಿ ನೀಡಿದ್ದರೆ, ಭೇಟಿ ನೀಡಿದ್ದವರನ್ನು ಸಂಪರ್ಕಿಸಿದ್ದರೆ ಮಾತ್ರ ತಪಾಸಣೆ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಹೀಗಿದ್ದರೂ ಶುಕ್ರವಾರವೂ ನೂರಾರು ಜನ ಆಸ್ಪತ್ರೆಗೆ ತೆರಳಿ ಕರೋನಾ ತಪಾಸಣೆಗೆ ಒತ್ತಾಯಿಸುತ್ತಿರುವುದು ಸಾಮಾನ್ಯವಾಗಿತ್ತು. ಈ ವೇಳೆ ವೈದ್ಯರು ಎಷ್ಟೇ ಅರಿವು ಮೂಡಿಸಿದರೂ ಭೀತಿಗೆ ಒಳಗಾಗಿದ್ದ ಸಾರ್ವಜನಿಕರು ತಪಾಸಣೆಗೆ ಮನವಿ ಮಾಡುತ್ತಿದ್ದರು.
* ರೋಗ ಲಕ್ಷಣ
ತೀವ್ರ ಜ್ವರ, ಎದೆ ನೋವಿನಿಂದ ಕೂಡಿದ ಉಸಿರಾಟದ ತೊಂದರೆ, ಶೀತ, ಕೆಮ್ಮು, ಗಂಟಲು ಕೆರೆತ, ನ್ಯುಮೋನಿಯಾ ಕೊರೊನಾ ವೈರಸ್‌ನ ರೋಗ ಲಕ್ಷಣಗಳು.
ರೋಗ ಹರಡುವ ರೀತಿ
*ಸೋಂಕಿತ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ ಹೊರಹೊಮ್ಮುವ ವೈರಾಣುವಿನಿಂದ
*ಸೋಂಕಿತರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ
*ಹಸ್ತ ಲಾಘವ ಮತ್ತು ಅವರನ್ನು ಮುಟ್ಟಿದಾಗ
*ಸೋಂಕಿತರ ವಸ್ತುಗಳನ್ನು ಬಳಸಿದಾಗ
ಎಚ್ಚರಿಕೆ ಕ್ರಮಗಳೇನು?
*ಸೋಂಕಿತರ ಸಂಪರ್ಕದಿಂದ ದೂರವಿರುವುದು
*ಶಂಕಿತರಿಂದ ಪ್ರತ್ಯೇಕವಾಗಿದ್ದು, ಮೂರು ಪದರವುಳ್ಳ ಮಾಸ್ಕ್ ಬಳಸುವುದು
*ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್ ಬಳಸುವುದು
*ಉಸಿರಾಟದ ತೊಂದರೆ ಕಂಡು ಬಂದ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು
*ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು
*ಆಹಾರ ಸೇವನೆಗೂ ಮುನ್ನ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳುವುದು
* ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.