ಭ್ರಷ್ಟಾಚಾರ ಕಾಯ್ದೆ ಸಹಕಾರಿ ನೌಕರಗೂ ಅನ್ವಯ: ಹೈಕೋರ್ಟ್

Kannadaprabha News, Ravi Janekal |   | Kannada Prabha
Published : Oct 11, 2025, 08:05 AM IST
 karnataka high court ruling

ಸಾರಾಂಶ

ಕೇಂದ್ರ, ರಾಜ್ಯ ಸರ್ಕಾರಗಳಿಂದ ಹಣಕಾಸು ನೆರವು ಪಡೆಯುವ ಸಹಕಾರ ಸಂಘ ಸಿಬ್ಬಂದಿ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಾಸನ ಸಹಕಾರ ಸಂಘದ ಕಾರ್ಯದರ್ಶಿ ವಿರುದ್ಧದ ಪ್ರಕರಣದ ತನಿಖೆಗೆ ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ

ಬೆಂಗಳೂರು (ಅ.11): ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣಕಾಸು ನೆರವು ಪಡೆದುಕೊಳ್ಳುವ ಸಹಕಾರ ಸಂಘದ ಸಿಬ್ಬಂದಿ ಸಹ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ, ಹಾಸನ ಜಿಲ್ಲೆಯ ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿ ಆಸ್ತಿ ಪ್ರಕರಣ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವಂತೆ ಸಂಘಕ್ಕೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ.

ಭ್ರಷ್ಟಾಚಾರದ ಆರೋಪದಲ್ಲಿ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿ ನಿರ್ಣಯ ಕೈಗೊಂಡಿದ್ದ ಸಂಘದ ಕ್ರಮ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರು, ತಾನು ಸರ್ಕಾರಿ ಸಂಸ್ಥೆಯಲ್ಲ ಎಂದು ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ವ್ಯಾಪಾರದಲ್ಲಿ ತೊಡಗಿರುವ ಸಹಕಾರಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಅಥಾವ ಪದಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅವಕಾಶವಿದೆ. ಈ ಸಂಘ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣಕಾಸು ಅನುದಾನ ಪಡೆದಿದೆ. ಹಾಗಾಗಿ ಸಂಘದ ಕಾರ್ಯದರ್ಶಿಯನ್ನು ಸಾರ್ವಜನಿಕ ಸೇವಕ ಅಲ್ಲ ಎಂಬುದಾಗಿ ಹೇಳಲಾಗದು ಎಂದು ಸ್ಪಷ್ಟಪಡಿಸಿದೆ.

ಹಾಗೆಯೇ, ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಸಂಘದ ಕಾರ್ಯದರ್ಶಿ ಕೀರ್ತಿಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದರ ತನಿಖೆಗೆ ಅನುಮತಿ ನಿರಾಕರಿಸಿ ಸಂಘ ಕೈಗೊಂಡಿರುವ ನಿರ್ಣಯ ವಿವೇಚನಾ ರಹಿತವಾಗಿದೆ. ಆ ನಿರ್ಣಯವನ್ನು ರದ್ದುಗೊಳಿಸಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಪ್ರಕರಣದ ತನಿಖೆಗೆ ಅನುಮತಿ ನೀಡುವ ಸಂಬಂಧ ನಿರ್ಣಯ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಾಕೀತು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!