ರಾಜ್ಯದ ಗುತ್ತಿಗೆ ವೈದ್ಯರು ತಮ್ಮ ಕಷ್ಟಗಳನ್ನ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಗಮನಕ್ಕೆ ತಂದರು. ಇದೇ ವೇಳೆ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಬೆಂಗಳೂರು, (ಜೂನ್.17): ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ತಮ್ಮ ಸೇವೆಯನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಡಿಸಿಎಂ ಅವರನ್ನು ಭೇಟಿಯಾದ ಗುತ್ತಿಗೆ ವೈದ್ಯರು, ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಸೇವೆಯನ್ನು ಕೂಡಲೇ ಕಾಯಂ ಮಾಡಬೇಕು ಎಂದು ಮನವಿ ಮಾಡಿದರು.
507 ಗುತ್ತಿಗೆ ವೈದ್ಯರ ಸಾಮೂಹಿಕ ರಾಜೀನಾಮೆ?
ಅಹವಾಲು ಆಲಿಸಿ ಕೂಡಲೇ ಕಾರ್ಯಪ್ರವೃತ್ತರಾದ ಡಿಸಿಎಂ ಅವರು, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ ಅಖ್ತರ್ ಜತೆ ಸ್ಥಳದಲ್ಲಿಯೇ ಮಾತುಕತೆ ನಡೆಸಿ ಸಿಎಂ ಜತೆ ಮಾತುಕತೆಗೆ ವೇದಿಕೆ ಕಲ್ಪಿಸಿದರು. ಜತೆಗೆ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ವೈದ್ಯರಿಗೆ ಭರವಸೆ ನೀಡಿದರು.
ಗುತ್ತಿಗೆ ವೈದ್ಯರು ಹೇಳುವುದೇನು?
ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಮಾಡಿರುವ 506 ವೈದ್ಯರು ರಾಜ್ಯಾದ್ಯಂತ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಪೈಕಿ 264 ಮಂದಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆಯನ್ನು ಪೂರ್ಣಗೊಳಿಸಿದ್ದೇವೆ. ಅನೇಕ ವೈದ್ಯರು ಹಳ್ಳಿಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬಾರದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದಲೇ ಬಂದಿರುವ ನಾವು ಆ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಉಪ ಮುಖ್ಯಮಂತ್ರಿಗಳ ಗಮನ ಸೆಳೆದರು.
ಹಿಂದಿನಿಂದಲೂ ಮೂರು ವರ್ಷ ಸೇವೆ ಮಾಡಿರುವ ಗುತ್ತಿಗೆ ವೈದ್ಯರನ್ನು ಕಾಯಂ ಮಾಡಲಾಗಿದೆ. ಪ್ರವಾಹ, ಬರಗಾಲ, ಕೋವಿಡ್ 19 ಸಮಯದಲ್ಲೂ ನಾವು ಹಿಂಜರಿಯದೇ ಜನರ ಸೇವೆ ಮಾಡಿದ್ದೇವೆ. ಕಾಯಂ ವೈದ್ಯರಷ್ಟೇ ಜವಾಬ್ದಾರಿಯುತವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಿದ್ದರೂ ಗುತ್ತಿಗೆ ಆಧಾರಿತ ವೈದ್ಯರ ಸೇವೆಯನ್ನು ಕಾಯಂಗೊಳಿಸುವ ಪ್ರಕ್ರಿಯೆಯನ್ನು ಸರಕಾರ ರದ್ದು ಮಾಡಿದ ಕಾರಣ ನಾವೆಲ್ಲರೂ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದೇವೆ. ಈ ಹಿಂದೆ ಮಾತುಕತೆಗೆ ಕರೆಯುವಂತೆ ಮಾಡಿದ ಮನವಿಗಳಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಜತೆಗೆ ವೇತನ, ಭತ್ಯೆಗಳನ್ನು ನೀಡುವುದರಲ್ಲಿಯೂ ತೀವ್ರ ತಾರತಮ್ಯ ಎಸಗಲಾಗುತ್ತಿದೆ ಎಂದು ವೈದ್ಯರು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ವೈದ್ಯರು ಹೀಗೆ ರಾಜೀನಾಮೆ ನೀಡುವ ಪ್ರಕ್ರಿಯೆ ಸರಿ ಅಲ್ಲ. ಇಡೀ ರಾಜ್ಯ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ. ಇಂತಹ ಕ್ಲಿಷ್ಟಸ್ಥಿತಿಯಲ್ಲಿ ವ್ಯದ್ಯರು ರಾಜೀನಾಮೆಗೆ ಮುಂದಾಗುವುದು ಉತ್ತಮವಲ್ಲ. ಮುಖ್ಯಂಮತ್ರಿ ಆದಿಯಾಗಿ ಪ್ರತಿಯೊಬ್ಬರೂ ಈ ಮಹಾಮಾರಿ ವಿರುದ್ಧ ಸೆಣಸಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ನಿಮ್ಮೆಲ್ಲರ ಸಮಸ್ಯೆಗಳನ್ನು ಮನವರಿಕೆ ಮಾಡಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.