
ಕೊಪ್ಪಳ: ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ.ಸೋಮಣ್ಣ ಅವರತ್ತ ಕುರ್ಚಿ ಎಸೆದು, ಅವರ ಕಾರಿನ ಎದುರು ಕುಳಿತು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಮಧ್ಯೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಇದೇ ವಿಷಯವಾಗಿ ವಿ.ಸೋಮಣ್ಣ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಸುಮಾರು ₹27 ಕೋಟಿ ವೆಚ್ಚದ ಎಲ್‌ಸಿ ಗೇಟ್ ನಂ.77 ಬದಲಿಗೆ ನಿರ್ಮಾಣವಾಗಲಿರುವ ಮೇಲ್ಸೇತುವೆ ಕಾಮಗಾರಿಗೆ ಸೋಮವಾರ ರೈಲ್ವೆ ಸಚಿವವ ವಿ.ಸೋಮಣ್ಣ ಚಾಲನೆ ನೀಡಬೇಕಿತ್ತು. ಆ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ನಮೂದಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಶಿವರಾಜ್ ತಂಗಡಗಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ‘ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತದೆ. ರಾಜ್ಯಕ್ಕೆ ಅವಮಾನ ಮಾಡಬೇಡಿ’ ಎಂದಿದ್ದಾರೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಅವರು ಕೂಡ ಎಂಟ್ರಿಯಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸೋಮಣ್ಣ ಅವರತ್ತ ಕುರ್ಚಿ ಎಸೆದರು. ಆದರೆ ಅದು ಅವರಿಗೆ ತಾಗಲಿಲ್ಲ. ಅಷ್ಟೇ ಅಲ್ಲ ಸಭಾಂಗಣದಲ್ಲಿದ್ದ ಎಲ್ಲ ಕುರ್ಚಿ ತೂರಾಡಿದರು. ಅಂಗರಕ್ಷಕರು ತಕ್ಷಣ ಮಧ್ಯ ಪ್ರವೇಶಿಸಿ ಸಚಿವರನ್ನು ರಕ್ಷಿಸಿದರು. ಬಳಿಕ ಕಾರ್ಯಕರ್ತರು ಸಚಿವರ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಕಾರ್ಯಕ್ರಮ ಮುಂದುವರಿಯಲು ಅಡ್ಡಿಪಡಿಸಿದರು. ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ್ ಮಧ್ಯಪ್ರವೇಶಿಸಿ ವಾಗ್ವಾದ ಮಾಡದಂತೆ ಬಸವರಾಜ ಕ್ಯಾವಟರ್ ಅವರಲ್ಲಿ ಕೈ ಮುಗಿದು ಹೇಳಿಕೊಂಡರು.
ಕೇವಲ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸಿದ ಸಚಿವ ಸೋಮಣ್ಣ ಅವರು ‘ಶಿಷ್ಟಾಚಾರದಲ್ಲಿ ಯಾವುದೇ ಉದ್ದೇಶಪೂರ್ವಕ ತಪ್ಪು ನಡೆದಿಲ್ಲ’ ಎಂದು ಹೇಳಿ ಅಲ್ಲಿಂದ ವಾಪಸ್ ತೆರಳಿದರು.
ಇದನ್ನೂ ಓದಿ: ಕೋಗಿಲು ಅಕ್ರಮ ವಲಸಿಗರಿಗೆ ಮನೆ ನೀಡಲು ಬಿಡಲ್ಲ: ಅಶೋಕ್
ಹಿಟ್ನಾಳ ಗ್ರಾಮವು ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಸ್ವಗ್ರಾಮವಾಗಿದ್ದು, ಈ ಗ್ರಾಮದಲ್ಲೇ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಅವರ ಹೆಸರನ್ನು ಬ್ಯಾನರ್ ಹಾಗೂ ವೇದಿಕೆಯಲ್ಲಿ ಉಲ್ಲೇಖಿಸದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು.
ಇದನ್ನೂ ಓದಿ: ಓಂಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಜೆ.ಜೆ.ನಗರದಲ್ಲಿ ಬೂದಿ ಮುಚ್ಚಿದ ಕೆಂಡ ಸ್ಥಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ