Congress Govt vs RSS: ಬೇರೆ ಸಂಘಟನೆಗಿಲ್ಲದ ನಿರ್ಬಂಧ ಆರೆಸ್ಸೆಸ್‌ಗಷ್ಟೇ ಏಕೆ? ನಿಜವಾದ ಫ್ಯಾಸಿಸ್ಟ್‌ ಯಾರು?

Kannadaprabha News, Ravi Janekal |   | Kannada Prabha
Published : Oct 21, 2025, 05:35 AM IST
Congress government vs RSS

ಸಾರಾಂಶ

Congress government vs RSS: ಈಶ್ವರನಲ್ಲದೆ ಬೇರಾವ ದೇವರನ್ನೂ ಪೂಜಿಸಬಾರದು, ವೇದ ವಿರೋಧಿಸುವವರ ಕುತ್ತಿಗೆಯನ್ನು ಕಡಿಯಿರಿ, ಮತಾಂತರಕ್ಕೆ ಒಪ್ಪದಿದ್ದರೆ ಕೊಲೆ ಮಾಡಿ, ಮುಸ್ಲಿಮರೆಲ್ಲ ಕೀಳು ಸಂತತಿ ಎಂದು ಆರ್‌ಎಸ್‌ಎಸ್‌ ಎಂದಾದರೂ ಬೋಧಿಸಿದೆಯೇ?

  • ಆನಂದ ರಂಗನಾಥನ್‌, ಪತ್ರಕರ್ತ, ಸಾಹಿತಿ

ಪೂರ್ವಾನುಮತಿಯಿಲ್ಲದೆ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ನಂತರ ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಬೇಕು ಎಂದು ಮತ್ತೊಂದು ಪತ್ರ ಬರೆದರು. ಆರ್‌ಎಸ್‌ಎಸ್‌ ಕುರಿತು ನಿರಂತರವಾಗಿ ಅವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪ್ರಿಯಾಂಕ ಖರ್ಗೆ ಏನೆಲ್ಲ ಹೇಳಿಕೆಗಳನ್ನು ಕೊಟ್ಟಿದ್ದಾರೋ, ಅವೆಲ್ಲ ತರ್ಕಹೀನ, ಅಸಂಬದ್ಧ, ಬೂಟಾಟಿಕೆ, ಧರ್ಮಾಂಧತೆಯ ನುಡಿಗಳು.

ನೆಹರು, ಇಂದಿರಾ ಕೃತ್ಯದ ಪುನರಾವರ್ತನೆ

ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್‌ ಕಾರಣ, 26/11ರ ಮುಂಬೈ ದಾಳಿ ಆರ್‌ಎಸ್‌ಎಸ್‌ನ ಷಡ್ಯಂತ್ರ.. ಹೀಗೆ ಸಂಘವನ್ನು ನಿಂದಿಸುವ ಯಾವ ಅವಕಾಶವನ್ನೂ ಕಾಂಗ್ರೆಸ್ ನಾಯಕರು ತಪ್ಪಿಸಿಕೊಂಡಿಲ್ಲ. 1947ರಲ್ಲಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲಾಯಿತು. ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಪಾತ್ರವಿಲ್ಲ ಎಂದು ನೆಹರು ಅವರಿಗೆ ಪತ್ರ ಬರೆದು, ಸ್ವತಃ ಸರ್ದಾರ್‌ ಪಟೇಲರೇ ನಿಷೇಧವನ್ನು ತೆರವುಗೊಳಿಸಿದರು. ನಂತರ ಜವಾಹರಲಾಲ್‌ ನೆಹರು ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರ್‌ಎಸ್‌ಎಸ್‌ನ ‘ಆರ್ಗನೈಸರ್‌’ ಪತ್ರಿಕೆಗೆ ನಿಷೇಧ ಹೇರಿ, ಅದರ ಸಂಪಾದಕರನ್ನು ಜೈಲುಶಿಕ್ಷೆಗೆ ಗುರಿಯಾಗಿಸಿತು. ಅನಂತರ ಇಂದಿರಾ ಗಾಂಧಿಯವರು, ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದರು. ಇದನ್ನೇ ಈಗ ಪ್ರಿಯಾಂಕ ಖರ್ಗೆ ಹಾಗೂ ಇತರರು ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ.

ಎಸ್‌ಡಿಪಿಐ, ಲೀಗ್‌ಗಿಲ್ಲದ ನಿರ್ಬಂಧ ಆರ್‌ಎಸ್ಎಸ್‌ಗೆ

ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬುದು ಖರ್ಗೆಯವರ ವಾದ. ನೌಕರರು ಕೆಲವು ಧರ್ಮಗಳ ರಾಜಕೀಯ ಶ್ರೇಷ್ಠತೆ, ಪ್ರತ್ಯೇಕತಾವಾದ, ಭಾರತದ ಗಡಿಯನ್ನೂ ದಾಟಿಹೋದ ‘ರಿಲಿಜಿಯಸ್‌ ಬ್ರದರ್‌ಹುಡ್‌’ನಂತಹ ಅಂಶಗಳನ್ನು ತೀವ್ರವಾಗಿ ನಂಬಬಹುದು. ಆದರೆ ವಂದೇ ಮಾತರಂ ಹಾಡಬಾರದು! ಎಸ್‌ಡಿಪಿಐ, ಮುಸ್ಲಿಂ ಲೀಗ್‌ನಂತಹ ಇತರ ಎಲ್ಲ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸಬಹುದು, ಆದರೆ ಆರ್‌ಎಸ್‌ಎಸ್‌ನಲ್ಲಿ ಭಾಗವಹಿಸುವಂತಿಲ್ಲ! ಇದ್ಯಾವ ನ್ಯಾಯ? ಬೇರೆ ಸಂಘಟನೆಗಳಿಗಿಲ್ಲದ ನಿರ್ಬಂಧ ಆರ್‌ಎಸ್‌ಎಸ್‌ಗೆ ಮಾತ್ರ ಏಕೆ?

ಆರ್‌ಎಸ್‌ಎಸ್‌ ಅಸಹಿಷ್ಣುತೆ ಪಾಠ ಮಾಡಿದೆಯೇ?

ಈಶ್ವರನಲ್ಲದೆ ಬೇರಾವ ದೇವರನ್ನೂ ಪೂಜಿಸಬಾರದು, ವೇದವನ್ನು ಯಾರು ವಿರೋಧಿಸುತ್ತಾರೋ ಅವರ ಕುತ್ತಿಗೆಯನ್ನು ಕಡಿಯುತ್ತೇವೆ, ಮುಸ್ಲಿಮರೆಲ್ಲ ಕೀಳು ಸಂತತಿ, ಹಿಂದುತ್ವವನ್ನು ನಂಬದಿದ್ದರೆ ಅಂಥ ಮುಸ್ಲಿಂ ಹುಡುಗಿಯರನ್ನು ಮದುವೆಯಾಗಬಾರದು, ವಿಷ್ಣುವನ್ನು ಯಾರು ನಂಬುವುದಿಲ್ಲವೋ ಅವರ ವಿರುದ್ಧ ಹೋರಾಡಿ, ಯಾರು ಹಿಂದೂ ಧರ್ಮಕ್ಕೆ ಸೇರುವುದಿಲ್ಲವೋ ಅವರು ವಿನಮ್ರರಾಗಿದ್ದರು ಸಹ ಜಝಿಯಾ ತೆರಿಗೆ ನೀಡುವವರೆಗೂ ಅವರ ಜೊತೆ ಯುದ್ಧ ಮಾಡಿ, ಯಾರು ನಮ್ಮ ಶ್ಲೋಕಗಳಲ್ಲಿ ನಂಬಿಕೆ ಹೊಂದಿಲ್ಲವೋ ಅವರನ್ನು ಬೆಂಕಿಗೆ ದೂಡಿ, ನಮ್ಮ ದೇವರಲ್ಲಿ ನಂಬಿಕೆ ಹೊಂದಿಲ್ಲದವರು ಮತಾಂತರವಾಗುವವರೆಗೂ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ ಮತ್ತು ಮತಾಂತರಕ್ಕೆ ವಿರೋಧಿಸಿದರೆ ಕೊಲೆ ಮಾಡಿ ಎಂದು ಆರ್‌ಎಸ್‌ಎಸ್‌ ಎಂದಾದರೂ ಬೋಧಿಸಿದೆಯೇ? ತಿಳಿಸಿ.

ನಿಜವಾದ ಫ್ಯಾಸಿಸ್ಟ್‌ ಯಾರು?

ಕಾಂಗ್ರೆಸ್ಸಿಗರು ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಅವರನ್ನು ಫ್ಯಾಸಿಸ್ಟ್‌ ಎಂದು ಕರೆಯುತ್ತಾರೆ. ಆದರೆ ರಾಹುಲ್‌ ಗಾಂಧಿಯವರ ಅಜ್ಜ ಫ್ಯಾಸಿಸ್ಟ್‌. ನಾಝಿಗಳು ಮುಸೊಲಿನಿಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಿದ್ದಾಗ ನೆಹರೂ ನಾಝಿಗಳ ಪರವಾಗಿ ಹೋರಾಡಿದರು. ಅದೇ ಸಮಯದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ನಾಯಕರು ಗಲ್ಲು ಶಿಕ್ಷೆಯನ್ನು ಸ್ವಇಚ್ಛೆಯಿಂದ ಎದುರಿಸಿದರು. ದೇವಿಪಾದ ಚೌಧರಿ, ಜಗತ್ಪತಿ ಕುಮಾರ್‌, ಅಣ್ಣಾಸಾಹೇಬ್‌ ದೇಶಪಾಂಡೆ, ರಮಾಕಾಂತ ಕೇಶವ, ವಸಂತರಾವ್‌ ಓಕ್, ನಾರಾಯಣ ಸಿಂಗ್‌, ಚಂದ್ರಕಾಂತ ಭಾರದ್ವಾಜ್, ದಾದಾ ನಾಯಕ್‌ ಚಿಮೂರ್‌, ಬಾಬುರಾವ್‌ ಭೇಗಡೆ, ಲಾಲಾ ಹಂಸರಾಜ್‌ ಗುಪ್ತಾ, ಬಾಲಾಜಿ ರಾಯಪುರಕರ್‌, ಹೇಮೂ ಕಾಲಾನಿ ಮೊದಲಾದ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಗಲ್ಲುಶಿಕ್ಷೆಗೆ ಒಳಗಾದರು. ಸಂವಿಧಾನ ತಿದ್ದುಪಡಿಯಿಂದ ಹಿಡಿದು ವಾಕ್ ಸ್ವಾತಂತ್ರ್ಯವನ್ನು ತುಳಿಯುವವರೆಗೆ, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ತಿರಸ್ಕರಿಸುವವರೆಗೆ ಕಾಂಗ್ರೆಸ್ ನಿಜವಾದ ಫ್ಯಾಸಿಸ್ಟ್ ಆಗಿದೆ.

ಕಾಂಗ್ರೆಸ್ ಫ್ಯಾಸಿಸ್ಟ್ ಅಲ್ಲದ ಏನನ್ನು ಮಾಡಿಲ್ಲ?

ಅಂತಿಮವಾಗಿ, 1947ರ ಆಗಸ್ಟ್ 15ರ ಬಗ್ಗೆ ಹೇಳುವುದಾದರೆ, ಆಗ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಮೌಂಟ್ ಬ್ಯಾಟನ್ ನೆಹರೂ ಅವರಿಗೆ ಯೂನಿಯನ್ ಜ್ಯಾಕ್ ಅನ್ನು ಕೆಳಗಿಳಿಸಬೇಡಿ, ಏಕೆಂದರೆ ಅದರಿಂದ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿದರು. ಬ್ಯಾಟನ್‌ ಮಾತಿಗೆ ನೆಹರೂ ಒಪ್ಪಿದರು. ಆದರೆ ಇದನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಇಂಡಿಯನ್‌ ನ್ಯಾಶನಲ್‌ ಆರ್ಮಿ (ಐಎನ್ಎ) ಪ್ರತಿಭಟಿಸಿತು. ಐಎನ್ಎ ಸೈನಿಕರಿಗೆ ಕೆಂಪುಕೋಟೆಯನ್ನು ಪ್ರವೇಶಿಸಲು ಅವಕಾಶವಿರಲಿಲ್ಲ, ಹಾಗಾಗಿ ಬ್ಯಾಟನ್‌ ಇಚ್ಛೆಯಂತೆ ನಮ್ಮ ಸ್ವಾತಂತ್ರ್ಯ ದಿನದಂದು ಕೊನೆಗೂ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಲೇ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?