ಸಿಎಂ ಸಿದ್ದರಾಮಯ್ಯ ನಂ.1 ಸುಳ್ಳುಗಾರ: ಎಂಎಲ್ಸಿ ರವಿಕುಮಾರ

By Kannadaprabha News  |  First Published Mar 8, 2024, 4:49 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ನಂ.1 ಸುಳ್ಳುಗಾರರಾಗಿದ್ದು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಜೆಂಡಾವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ ಆಕ್ರೋಶ ಹೊರ ಹಾಕಿದರು.


ರಾಯಚೂರು (ಮಾ.8): ಮುಖ್ಯಮಂತ್ರಿ ಸಿದ್ದರಾಮಯ್ಯ ನಂ.1 ಸುಳ್ಳುಗಾರರಾಗಿದ್ದು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಜೆಂಡಾವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ ಆಕ್ರೋಶ ಹೊರ ಹಾಕಿದರು.

ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2000-05 ವರೆಗೆ ಶೇ.29.5, 2015ರವರೆಗೆ ಶೇ.32ರಷ್ಟು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಪಾಲು ಬರ್ತಿತ್ತು. ಈಗ ಶೇ.42 ಅನುದಾನ ಬರುತ್ತಿದೆ. ಇದನ್ನು ಸಿದ್ದರಾಮಯ್ಯ ಮರೆ ಮಾಚುತ್ತಾರೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Latest Videos

undefined

ರಾಜ್ಯದಲ್ಲಿ ಈ ಬೇಸಗೆಗೆ ಭಾರೀ ತಾಪಮಾನ ಹೆಚ್ಚಳ! ಐಎಂಡಿ ವಿಜ್ಞಾನಿ ಹೇಳಿದ್ದೇನು?

ರಾಜ್ಯಕ್ಕೆ 5,500 ಕೋಟಿ ಬರ ಪರಿಹಾರ ಬಂದಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಪರಿಹಾರ ಕೊಡುವಾಗಲೇ ಕರ್ನಾಟಕಕ್ಕು ಬಿಡುಗಡೆ ಮಾಡಿದ್ದು, ಆದರೆ ಕಾಂಗ್ರೆಸ್ ಇದನ್ನು ಹೇಳುವುದಿಲ್ಲ. ಬರೀ ಪ್ರಧಾನಿ ಮೋದಿ ಅವರನ್ನೆ ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿರುವ ಸರ್ಕಾರವು ರಾಜ್ಯದ ರೈತರು, ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಬರ ನಿರ್ವಹಣೆಯಲ್ಲಿ ವಿಫಲ:

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು ಅದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ರೈತರ ಸಮಸ್ಯೆಗಿಂತ ಗ್ಯಾರಂಟಿ ಯೋಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಬರ ಪ್ರವಾಸ ಮಾಡುತ್ತಿಲ್ಲ. ರಾಜ್ಯದ 29 ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ರೈತರಿಗೆ ಪರಿಹಾರ ನೀಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣಕ್ಕೆ ಸೀಮಿತರಾಗಿದ್ದಾರೆ. ಜನರಿಗೆ ಉತ್ತರ ಕೊಡಲು ಹೆದರಿಕೆಯಿಂದ ರಾಜ್ಯದಲ್ಲಿ ಸಚಿವರು ಪ್ರವಾಸ ಮಾಡುತ್ತಿಲ್ಲ, ರಾಜ್ಯ ಸರ್ಕಾರ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರವು ತಮ್ಮ ಮಂತ್ರಿಗಳಿಗೆ ರಾಜ್ಯ ಸರ್ಕಾರ 34 ಹೊಸ ಇನ್ನೋವಾ ಕಾರುಗಳನ್ನ ಖರೀದಿಸಿದೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ 6 ಲಕ್ಷ ರು. ಖರ್ಚು ಮಾಡಿ ಮನೆ ನವೀಕರಣ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಮಜವಾದಿಯಾಗಿದ್ದು 85 ಕ್ಯಾಬಿನೆಟ್ ದರ್ಜೆಯ ಪೋಸ್ಟ್ ಕ್ರಿಯೆಟ್ ಮಾಡಿ ಸಂವಿಧಾನ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೇಸಿಗೆಯಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಯಾಗಿದ್ದು, ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಸರ್ಕಾರ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು. ಘೋಷಿಸುತ್ತಾರೆ. ಮತ್ತೊಂದೆಡೆ ಹಿಂದೂ ದೇವಾಲಯಗಳ ಹುಂಡಿ ಮೇಲೆ ಕಣ್ಣು ಹಾಕುತ್ತಾರೆ. ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ದೂರಿದರು.

ವಿಧಾನಸೌಧಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದವರನ್ನು, ಸಚಿವ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲಾ ಅಂತ ಮಾತನಾಡುತ್ತಾರೆ. ಆನಂತರ ಆರೋಪಿಗಳನ್ನು ಬಂಧಿಸುತ್ತಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು ನಮ್ಮ ಬ್ರದರ್ಸ್ ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳುತ್ತಾರೆ. ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್‌ಗೆ ಮೈ ಬ್ರದರ್ ಪಾಲಿಸಿ ಕಾರಣ ಎಂದು ವಾಗ್ದಾಳಿ ನಡೆಸಿದರು.

ಕೇವಲ 15 ದಿನದಲ್ಲೇ 1 ಲಕ್ಷ ಬೋರ್‌ವೆಲ್‌ ಖಾಲಿ! ಎಲ್ಲಿ ಎಷ್ಟು ಅಂತರ್ಜಲ ಮಟ್ಟ ಕುಸಿತ? ಇಲ್ಲಿದೆ ಮಾಹಿತಿ

ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ತನಿಖೆ ಪೂರ್ಣಗೊಳ್ಳುವವರೆಗೂ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರಿಗೆ ಉಪ ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸಬಾರದು ಎಂದು ಮನವಿ ಮಾಡಿದರು. ಈ ವೇಳೆ ಮಾಜಿ ಶಾಸಕ ಎ.ಪಾಪಾರೆಡ್ಡಿ, ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.

click me!