14 ಜಿಲ್ಲೆಗಳಲ್ಲಿ ವಿಜಯೇಂದ್ರ ಆ್ಯಂಬುಲೆನ್ಸ್‌: 24 ಗಂಟೆ ತುರ್ತು ನೆರವು!

Published : May 29, 2021, 07:30 AM IST
14 ಜಿಲ್ಲೆಗಳಲ್ಲಿ ವಿಜಯೇಂದ್ರ ಆ್ಯಂಬುಲೆನ್ಸ್‌: 24 ಗಂಟೆ ತುರ್ತು ನೆರವು!

ಸಾರಾಂಶ

* ‘ಮೈ ಸೇವಾ’ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಸಚಿವ ಅಶೋಕ್‌ ಚಾಲನೆ * ಕೋವಿಡ್‌ ರೋಗಿಗಳಿಗೆ 24 ಗಂಟೆ ತುರ್ತು ನೆರವು ನೀಡಲು ತಂಡ ಸಿದ್ಧ * ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಕೂಡ ಪೂರೈಕೆ

ಬೆಂಗಳೂರು(ಮೇ.29): ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವವರು ಹಾಗೂ ಕೋವಿಡ್‌ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಿರಂತರವಾಗಿ ಸೇವೆ ಮಾಡುತ್ತಿರುವ ಮುಂಚೂಣಿ ಯೋಧರಿಗೆ ಸಹಾಯ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ‘ಮೈ ಸೇವಾ’ ಎಂಬ ತಂಡವು ಸಿದ್ಧವಾಗಿದೆ.

ದಿನದ 24 ಗಂಟೆಗಳ ಕಾಲ ತಂಡವು ಬಡವರು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇರುವವರ ಸಹಾಯಕ್ಕಾಗಿ ಆ್ಯಂಬುಲೆನ್ಸ್‌ಗಳೊಂದಿಗೆ ಸಿದ್ಧವಾಗಿರಲಿದೆ. ಆರಂಭಿಕ ಹಂತವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್‌ ಸೇವೆ ಸಮೇತ ತಂಡ ಕೆಲಸ ಮಾಡಲಿದೆ. ಬಳಿಕ ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ.

ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಈ ‘ಮೈ ಸೇವಾ’ ತಂಡದ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಅಶೋಕ್‌, ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ. ಹಲವು ಜಿಲ್ಲೆಗಳಿಗೆ ಈ ಆ್ಯಂಬುಲೆಸ್ಸ್‌ ಹೋಗುತ್ತಿವೆ. ಹಳ್ಳಿಗಾಡಿನಿಂದ ನಗರಕ್ಕೆ ಬರುವ ಸೋಂಕಿತರಿಗೆ ಅನುಕೂಲವಾಗುತ್ತದೆ. ಹಳ್ಳಿಯ ಪ್ರದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಮೈ ಸೇವಾ’ ಮಾದರಿ ಕೆಲಸಕ್ಕೆ ಮುಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ವಿಜಯೇಂದ್ರ ನೇತೃತ್ವದ ತಂಡದಿಂದ 14 ಜಿಲ್ಲೆಗಳಲ್ಲಿ ಆ್ಯಂಬುಲೆಸ್ಸ್‌ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಆಕ್ಸಿಜನ್‌ ವ್ಯವಸ್ಥೆ ಇರುತ್ತದೆ. ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ವಿಜಯೇಂದ್ರ, ವಾಹನ ಚಾಲಕ ಮತ್ತು ಒಬ್ಬ ಸಿಬ್ಬಂದಿಯನ್ನು ಒಳಗೊಂಡ ತಂಡದ ಆ್ಯಂಬುಲೆನ್ಸ್‌ಗಳು ಆಯಾ ಜಿಲ್ಲೆಗಳಲ್ಲಿನ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಮೂಲಕ ಸಕಾಲಕ್ಕೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಿವೆ. ತಂಡದ ವತಿಯಿಂದ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಒದಗಿಸಲಾಗುತ್ತದೆ. ಅಲ್ಲದೆ, ಕೋವಿಡ್‌ನಿಂದ ಜನರನ್ನು ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಯೋಧರಿಗೆ ಅವರವರ ಜಿಲ್ಲೆಗಳಲ್ಲಿ ಕೆಲವೊಂದು ಹೋಟೆಲ್‌ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಬೆಂಗಳೂರು (ಬೆಂ.ಉತ್ತರ, ಬೆಂ.ಕೇಂದ್ರ ಹಾಗೂ ಬೆಂ.ದಕ್ಷಿಣ), ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ತುಮಕೂರು, ಕೊಪ್ಪಳ, ರಾಯಚೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಬಳ್ಳಾರಿ, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ‘ಮೈ ಸೇವಾ’ ತಂಡ ಕೆಲಸ ಮಾಡಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!