ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಬಾಗಿನ

Kannadaprabha News   | Kannada Prabha
Published : Jul 01, 2025, 08:31 AM IST
Siddaramaiah

ಸಾರಾಂಶ

ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾದ ಕೃಷ್ಣರಾಜಸಾಗರ ಜಲಾಶಯದಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಡಿಸಿಎಂ, ಹಲವು ಸಚಿವರು, ಸ್ಥಳೀಯ ಜಲಪ್ರತಿನಿಧಿಗಳ ಜೊತೆ ಜಲಾಶಯಕ್ಕೆ ಆಗಮಿಸಿ, ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು.

ಮಂಡ್ಯ (ಜು.01): ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾದ ಕೃಷ್ಣರಾಜಸಾಗರ ಜಲಾಶಯದಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಡಿಸಿಎಂ ಡಿ.ಕೆ.ಶಿವಕುಮಾರ್‌, ಹಲವು ಸಚಿವರು, ಸ್ಥಳೀಯ ಜಲಪ್ರತಿನಿಧಿಗಳ ಜೊತೆ ಜಲಾಶಯಕ್ಕೆ ಆಗಮಿಸಿ, ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಇದರೊಂದಿಗೆ ಜೂನ್ ತಿಂಗಳಲ್ಲಿ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಿದ್ದರಾಮಯ್ಯ ಸಿಎಂ ಆಗಿ 3ನೇ ಬಾರಿ, ಡಿಸಿಎಂ ಆಗಿ ಒಮ್ಮೆ, ಒಟ್ಟು ನಾಲ್ಕು ಬಾರಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಬಾಗಿನ ಅರ್ಪಣೆ ಹಿನ್ನೆಲೆ ಜಲಾಶಯವನ್ನು ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು. ತಳಿರು ತೋರಣಗಳನ್ನು ಕಟ್ಟಿದ್ದರಿಂದ ಅಣೆಕಟ್ಟು ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀರಂಗಪಟ್ಟಣದ ಶಾಶ್ವತ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ। ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ವೈದಿಕರ ತಂಡ ಬೆಳಗ್ಗೆಯಿಂದಲೇ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿತು. 40 ಜೋಡಿ ಮೊರದಲ್ಲಿ ಬಳೆ, ಹಸಿರು ಬಣ್ಣದ ರವಿಕೆ ಕಣ, ಅರಿಶಿನ-ಕುಂಕುಮ ಸೇರಿದಂತೆ ಇತರ ದ್ರವ್ಯಾಧಿ ಸಾಮಗ್ರಿಗಳಿಂದ ಕೂಡಿದ ಬಾಗಿನ ಸಿದ್ದಪಡಿಸಿಕೊಂಡಿತ್ತು.

ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಪೂಜಾ ಸ್ಥಳವನ್ನು ಸಹ ತಳಿರು ತೋರಣ ಹಾಗೂ ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಮಧ್ಯಾಹ್ನ 1:30ರ ವೇಳೆಗೆ ಅಣೆಕಟ್ಟು ಬಳಿ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಬೋಸರಾಜು ಮತ್ತು ಶಾಸಕರು ಇದ್ದರು. ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಬಾಗಿನ ಸಮರ್ಪಿಸಿದರು. ನಂತರ ಅಣೆಕಟ್ಟು ಕೆಳಭಾಗವಿರುವ ಕಾವೇರಿ ಪ್ರತಿಮೆಗೂ ಕೂಡ ಪೂಜೆ ಸಲ್ಲಿಸಿದರು.

ಸ್ಮಾರಕ ನಿರ್ಮಾಣಕ್ಕೆ ಸೂಚನೆ: ಕೃಷ್ಣರಾಜಸಾಗರ ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾಗಿದೆ. ಇದೊಂದು ಹೊಸ ದಾಖಲೆ. ಇದರ ನೆನಪು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯಬೇಕು. ಮುಂದಿನ ಪೀಳಿಗೆಗೂ ಗೊತ್ತಾಗಬೇಕು. ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾದ ಸವಿನೆನಪಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲು ಶೀಘ್ರ ಶಿಲಾನ್ಯಾಸ ನೆರವೇರಿಸುವಂತೆ ಸಿದ್ದರಾಮಯ್ಯ ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಕಾವೇರಿ ತಾಯಿ, ಚಾಮುಂಡೇಶ್ವರಿ ಕೃಪಾಕಟಾಕ್ಷದಿಂದ ಈ ವರ್ಷ ರಾಜ್ಯ ಸುಭಿಕ್ಷವಾಗಿದೆ. ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ಎಲ್ಲಾ ನಾಲೆಗಳಿಗೂ ತಕ್ಷಣದಿಂದಲೇ ನೀರು ಹರಿಸುವಂತೆ ಸಿದ್ದರಾಮಯ್ಯ ಆದೇಶಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌