Mekhri Hebbal Integrated Corridor ಪರಿಶೀಲನೆ ವೇಳೆ ಸಿಎಂ ಡಿಕೆ ಶಿವಕುಮಾರ ಗರಂ ಆಗಿದ್ದೇಕೆ? ಯಾರ ಮೇಲೆ?

Kannadaprabha News   | Kannada Prabha
Published : Nov 10, 2026, 05:31 AM IST
Mekhri-Hebbal Integrated Corridor project

ಸಾರಾಂಶ

ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್‌ ಕಾರಿಡಾರ್‌ ಯೋಜನೆ ಪರಿಶೀಲನೆ ವೇಳೆ ಅವರು ಈ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು (ನ.11): ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದು, ನಾವೇನು ಮಾಡಿದರೂ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್‌ ಕಾರಿಡಾರ್‌ ಯೋಜನೆ ಪರಿಶೀಲನೆ

ಸೋಮವಾರ ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್‌ ಕಾರಿಡಾರ್‌ ಯೋಜನೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗಗಳು ಅನಿವಾರ್ಯವಾಗಿದೆ. ಕೆಲವರು ಸುರಂಗ ರಸ್ತೆ ಮಾಡಿದರೂ ಅಪಾದನೆ ಮಾಡ್ತಾರೆ, ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ದೂರುತ್ತಾರೆ. ಎಲ್ಲದರಲ್ಲೂ ಬರೀ ನೆಗೆಟಿವ್ ಯೋಚನೆ ಮಾಡುವುದೇ ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಹಾಗಾದರೆ ವಾಹನ ಸವಾರರು ಎಲ್ಲಿ ಹೋಗಬೇಕು? ರಸ್ತೆಗಳನ್ನು ಅಗಲೀಕರಣ ಮಾಡಲು ಕಟ್ಟಡಗಳನ್ನು ಕೆಡವಲು ಸಾಧ್ಯವೇ? ಇಲ್ಲವೇ ಮೇಲ್ಸೇತುವೆ ಮಾಡಬೇಕು ಅಥವಾ ಭೂಮಿಯ ಒಳಗೆ ಮಾರ್ಗ ನಿರ್ಮಿಸಬೇಕಷ್ಟೆ ಎಂದು ಹೇಳಿದರು.

ಮೇಖ್ರಿ ಸರ್ಕಲ್‌ನಲ್ಲಿ ಸಂಚಾರ ಸುಗಮಗೊಳಿಸಲು ಮೇಲ್ಭಾಗದಲ್ಲಿ ರೋಟರಿ (ರಿಂಗ್) ಸರ್ಕಲ್ ಮಾದರಿಯ ವ್ಯವಸ್ಥೆ ನಿರ್ಮಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಅಗತ್ಯವಿರುವ ಕಾರ್ನರ್ ಜಾಗವನ್ನು ನೀಡುವಂತೆ ಈಗಾಗಲೇ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರು ಜಾಗ ಬಿಟ್ಟುಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕಾಮಗಾರಿ ಸಂದರ್ಭದಲ್ಲಿ ನಗರದ ಸಾಮಾನ್ಯ ಸಂಚಾರವನ್ನು ಎಲ್ಲಿಯೂ ಸ್ಥಗಿತಗೊಳಿಸುವುದಿಲ್ಲ. ನಿರ್ಮಾಣ ಕಾರ್ಯದ ವೇಳೆ ಸರಕು ಸಾಗಣೆ ವಾಹನಗಳನ್ನು ಮಾತ್ರ ಕೆಲ ಸಮಯ ನಿರ್ಬಂಧಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ 9 ಕೋಟಿ ರು. ವೆಚ್ಚದಲ್ಲಿ ಅಕ್ಕಪಕ್ಕದ ಪರ್ಯಾಯ ರಸ್ತೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲಾಗಿದೆ ಎಂದು ಹೇಳಿದರು.

ವಿರೋಧಿಸುವುದೇ ಅವರ ಕೆಲಸ

ಅಭಿವೃದ್ಧಿ ಯೋಜನೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸವನ್ನೂ ವಿರೋಧಿಸಲೆಂದೇ ವಿಪಕ್ಷಗಳು ಒಂದು ಗುಂಪನ್ನು ನೇಮಿಸಿಕೊಂಡಿವೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲಿ ನಗರದ ಮೂಲಸೌಕರ್ಯಕ್ಕಾಗಿ ಇಂತಹ ಯಾವುದಾದರೂ ಮಹತ್ವದ ಕೆಲಸಗಳನ್ನು ಮಾಡಿದ್ದಾರೆಯೇ? ನಮ್ಮ ಸರ್ಕಾರದ ಅಭಿವೃದ್ಧಿಯ ವೇಗವನ್ನು ಅರಗಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಇತ್ತೀಚೆಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಯೋಜನೆಗೆ ಸಂಬಂಧಿಸಿದ ಸ್ಥಳವನ್ನು ಪರಿಶೀಲಿಸಿದ್ದೇನೆ. ಲಾಲ್‌ಬಾಗ್ ಬಳಿ ಸುರಂಗ ಮಾರ್ಗ ಹಾದುಹೋಗುವ ಪ್ರದೇಶದಲ್ಲಿ ದೊಡ್ಡ ಹಳ್ಳವಿದ್ದು, ಬಂಡೆ ಇರುವ ಸ್ಥಳಕ್ಕೂ ಸುರಂಗ ಹೊರಬರುವ ಸ್ಥಳಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾರಾಷ್ಟ್ರದಿಂದ ಉಜ್ಜಿನಿ ಬಳಿ ಹೊಸ ಡ್ಯಾಂಗೆ ರಾಜ್ಯ ವಿರೋಧ, ಇದು ಕೃಷ್ಣಾ ನ್ಯಾಯಾಧಿಕರಣ ತೀರ್ಪಿಗೆ ವಿರುದ್ಧ
ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಹೈಕೋರ್ಟ್‌ ಕೆಂಡಾಮಂಡಲ!