6 ದಿನಗಳ ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ

By Kannadaprabha NewsFirst Published Jan 19, 2020, 7:20 AM IST
Highlights

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆರು ದಿನಗಳ ದಾವೋಸ್‌ ಪ್ರವಾಸ ಭಾನುವಾರದಿಂದ ಆರಂಭಗೊಳ್ಳಲಿದ್ದು, ಜ.24ರಂದು ರಾಜ್ಯಕ್ಕೆ ಹಿಂತಿರುಗಲಿದ್ದಾರೆ.

ಬೆಂಗಳೂರು [ಜ.19]:  ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆರು ದಿನಗಳ ದಾವೋಸ್‌ ಪ್ರವಾಸ ಭಾನುವಾರದಿಂದ ಆರಂಭಗೊಳ್ಳಲಿದ್ದು, ಜ.24ರಂದು ರಾಜ್ಯಕ್ಕೆ ಹಿಂತಿರುಗಲಿದ್ದಾರೆ.

ಭಾನುವಾರ ಬೆಳಗ್ಗೆ 10.25ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಮಧ್ಯಾಹ್ನ 3.55ಕ್ಕೆ ದುಬೈನಿಂದ ಹೊರಟು ಸ್ವಿಜರ್‌ಲೆಂಡ್‌ನ ಜೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 7.50ರ ಸುಮಾರಿಗೆ ತಲುಪಲಿದ್ದಾರೆ. ತರುವಾಯ ಅಲ್ಲಿಂದ ರಸ್ತೆ ಮೂಲಕ ದಾವೋಸ್‌ಗೆ ತೆರಳಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಸಾಥ್‌ ನೀಡಲಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಬಿ.ಮರಮಕಲ್‌, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಪಿ.ರುದ್ರಯ್ಯ, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಖಾಸಗಿ ಕಾರ್ಯದರ್ಶಿ ಎಸ್‌.ದವಳೇಶ್ವರ್‌ ಸಹ ತೆರಳಲಿದ್ದಾರೆ.

ಸಂಪುಟಕ್ಕೆ ಗ್ರೀನ್ ಸಿಗ್ನಲ್ ಕೊಡುವುದರ ಜತೆಗೆ BSYಗೆ 5 ಖಡಕ್ ಸೂಚನೆ ಕೊಟ್ಟ ಶಾ...

ಸೋಮವಾರ (ಜ.20)ರಂದು ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಸಭೆ ಜರುಗಲಿದೆ ಹಾಗೂ ಕರ್ನಾಟಕ ಮಳಿಗೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ (ಜ.21) ವಿಶ್ವ ಆರ್ಥಿಕ ಒಕ್ಕೂಟದ ಸಭೆಗಳು ನಡೆಯಲಿವೆ. ಬುಧವಾರ (ಜ.22) ಕರ್ನಾಟಕದಲ್ಲಿ ಹೂಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ ಜರುಗಲಿದೆ. ಅಲ್ಲದೇ, ಉದ್ಯಮಿಗಳ ಜತೆ ವೈಯಕ್ತಿಕ ಸಭೆಗಳು ನಡೆಯಲಿವೆ.

ಗುರುವಾರ (ಜ.23) ಯಡಿಯೂರಪ್ಪ ಸ್ವದೇಶಕ್ಕೆ ಹೊರಡಲಿದ್ದು, ಸಂಜೆ 5 ಗಂಟೆಗೆ ದಾವೋಸ್‌ನಿಂದ ರಸ್ತೆ ಮೂಲಕ ಜೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾತ್ರಿ 9.55ಕ್ಕೆ ಅಲ್ಲಿಂದ ಹೊರಟು ಶುಕ್ರವಾರ ಬೆಳಗ್ಗೆ 7.10ಕ್ಕೆ ದುಬೈ ತಲುಪಲಿದ್ದಾರೆ. ಕೆಲ ಸಮಯ ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಬೆಳಗ್ಗೆ 10ಕ್ಕೆ ದುಬೈನಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ.

"

click me!