ಪೌರತ್ವ ಕಾಯ್ದೆ ಪರ ಹೋರಾಟಗಾರಗೆ ಇರಿತ!

By Suvarna NewsFirst Published Dec 23, 2019, 7:34 AM IST
Highlights

ಪೌರತ್ವ ಕಾಯ್ದೆ ಪರ ಹೋರಾಟಗಾರಗೆ ಇರಿ| ಬೆಂಗಳೂರಲ್ಲಿ ಧರಣಿ ನಡೆಸಿ ವಾಪಸ್ಸಾಗುತ್ತಿದ್ದಾಗ ಮಾರಣಾಂತಿಕ ಹಲ್ಲೆ| ಪ್ರಾಣಾಪಾಯದಿಂದ ಪಾರು, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ

ಬೆಂಗಳೂರು[ಡಿ.23]: ಪೌರತ್ವ ತಿದ್ದುಪಡಿ ಕಾಯ್ದೆಯ ಪರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ಜೆ.ಪಿ.ನಗರ ನಿವಾಸಿ ವರುಣ್‌ (31) ಮಾರಣಾಂತಿಕ ಹಲ್ಲೆಗೊಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕೊಲೆಗೆ ಯತ್ನಿಸಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೋತ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೆಂಗಳೂರಿನ ಪುರಭವನದ ಮುಂಭಾಗ ಬೆಳಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆ.ಪಿ. ನಗರದ ವರುಣ್‌ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಬಂದ ವರುಣ್‌ ಮಧ್ಯಾಹ್ನ 12 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಜೆ.ಸಿ.ರಸ್ತೆಯ ಬಂಬೂ ಬಜಾರ್‌ ರಸ್ತೆಯಲ್ಲಿ ತೆರಳುವಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವರುಣ್‌ ಅವರ ಬೈಕ್‌ ಅಡ್ಡಗಟ್ಟಿಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಸೇರುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವರುಣ್‌ರನ್ನು ಸಾರ್ವಜನಿಕರೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ವರುಣ್‌ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು. ಯಾವುದೇ ರಾಜಕೀಯ ಕಾರಣಕ್ಕೆ ಕೃತ್ಯ ನಡೆದಿಲ್ಲ. ವೈಯಕ್ತಿಕ ವಿಚಾರಕ್ಕೆ ಇರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಗೆ ಸಂಸದ ಭೇಟಿ:

ವಿಷಯ ತಿಳಿಯುತ್ತಿದ್ದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ವರುಣ್‌ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ದುಷ್ಕರ್ಮಿಗಳು ವರುಣ್‌ ಅವರ ಕೊಲೆಗೆ ಯತ್ನಿಸಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

click me!