
ಬೆಂಗಳೂರು(ಅ.22): ಚಿತ್ತಾಪುರದಲ್ಲಿ ಗೋ ಹತ್ಯೆ ಮಾಡಿದವರ ವಿರುದ್ಧ ಪ್ರಕರಣ ಹಿಂಪಡೆದು ಮುಸ್ಲಿಂ ಓಲೈಕೆ ಮಾಡಲಾಗಿದೆ. ಈ ಸರ್ಕಾರ ಮುಸ್ಲಿಂ ದುಷ್ಕರ್ಮಿಗಳನ್ನು ಬೆಂಬಲಿಸಿದೆ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ತಾಪುರ ತಾಲೂಕಿನಲ್ಲಿ ಗೋ ಕಳ್ಳ ಸಾಗಣೆ ಹಾಗೂ ಗೋ ಹತ್ಯೆ ಮಾಡಿದ ಸುಮಾರು 30 ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣ ಹಿಂಪಡೆಯಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಮೇರೆಗೆ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಗಲಭೆ ವಿಚಾರದಲ್ಲೂ ಹೀಗೆಯೇ ಆಗಿ ಕೋರ್ಟ್ ಛೀಮಾರಿ ಹಾಕಿತ್ತು. ಈ ಪ್ರಕರಣದಲ್ಲೂ ಇದೇ ರೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಮಾತೆತ್ತಿದರೆ ಗಾಂಧೀಜಿ ಬಗ್ಗೆ ಮಾತನಾಡುತ್ತಾರೆ. ಗೋ ಹತ್ಯೆ ಮಾಡುವುದಾದರೆ ಗಾಂಧೀಜಿಗೆ ಇವರು ಯಾವ ಬೆಲೆ ನೀಡಿದ್ದಾರೆ? ಇದು ಮುಸ್ಲಿಂ ಓಲೈಕೆ ಸಂಸ್ಕೃತಿ. ಹೀಗೆ ಬಿಡುಗಡೆ ಮಾಡಿದರೆ ಅವರು ಮತ್ತೆ ಇದೇ ದಂಧೆಗೆ ಇಳಿಯುತ್ತಾರೆ. ಇದರ ವಿರುದ್ಧ ನಾವು ಕೋರ್ಟ್‌ಗೆ ಹೋಗಲಿದ್ದೇವೆ. ಈ ವಿಚಾರದಲ್ಲೂ ನಮಗೇ ಜಯ ಸಿಗಲಿದೆ ಎಂದು ಹೇಳಿದರು.
ಶೆಟ್ಟರ್ ಆದೇಶ ಒಂದು ಶಾಲೆಗೆ ಸೀಮಿತ:
ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಲದಲ್ಲಿ ಆಗಿದ್ದ ಆದೇಶವನ್ನು ಸರಿಯಾಗಿ ಓದಬೇಕು. ಅದರಲ್ಲಿ ಮುಖ್ಯಮಂತ್ರಿಯ ಸಹಿಯೂ ಇಲ್ಲ. ಅದು ಚಾಮರಾಜಪೇಟೆಯ ಒಂದೇ ಒಂದು ಶಾಲೆಗೆ ಸಂಬಂಧಿಸಿ ಹೊರಡಿಸಿದ ಸಣ್ಣ ಆದೇಶ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಇರಲಿಲ್ಲ. 14 ಸೈಟು ಲೂಟಿಯಾದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ ಎಲ್ಲದಕ್ಕೂ ಅಧಿಕಾರಿಗಳೇ ಸಹಿ ಹಾಕಿದ್ದಾರೆ. ಹಾಗಾದರೆ ಇವೆಲ್ಲ ಹಗರಣ ಮುಖ್ಯಮಂತ್ರಿಯಿಂದಲೇ ನಡೆದಿದೆಯೇ ಎಂದು ಅಶೋಕ್ ಪ್ರಶ್ನಿಸಿದರು.
ಆರ್‌ಎಸ್‌ಎಸ್‌ಗೆ ಯಾವುದೇ ಆತಂಕವಿಲ್ಲ. ಇದು ಇಡೀ ದೇಶದಲ್ಲಿರುವ ಸಂಘಟನೆ. ಈ ಬಗ್ಗೆ ಆರ್‌ಎಸ್‌ಎಸ್ ನಾಯಕರು ತಲೆ ಕೆಡಿಸಿಕೊಂಡಿಲ್ಲ. ನಿರ್ಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಆರ್‌ಎಸ್‌ಎಸ್ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮತ ಕಡಿಮೆಯಾದರೆ ತೇಜಸ್ವಿ ಬಳಿ ಕೇಳಿ:
ಸಿಎಂ ಸಿದ್ದರಾಮಯ್ಯ ಅತಿ ಕಡಿಮೆ ಮತದ ಅಂತರದಲ್ಲಿ ಗೆದ್ದಿದ್ದಾರೆ. ತೇಜಸ್ವಿ ಸೂರ್ಯ ಒಂದು ಬಾರಿಯೂ ಸೋತಿಲ್ಲ. ಸಿದ್ದರಾಮಯ್ಯ ಅವರಿಗೆ ಮತ ಕಡಿಮೆಯಾದರೆ ತೇಜಸ್ವಿ ಸೂರ್ಯ ಬಳಿ ಕೇಳಬಹುದು. ಅವರನ್ನು ಅಮಾವಾಸ್ಯೆ, ಹುಣ್ಣಿಮೆ ಎನ್ನಬೇಕಿಲ್ಲ. ಪ್ರಧಾನಿ ಮೋದಿ ರೈಲ್ವೆಗೆ, ರಸ್ತೆಗೆ, ಕುಡಿಯುವ ನೀರಿಗೆ ಎಷ್ಟು ಅನುದಾನ ನೀಡಿದ್ದಾರೆ? ಹಿಂದಿನ ಮನಮೋಹನ್ ಸಿಂಗ್ ಎಷ್ಟು ನೀಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಲಿ. ಎನ್‌ಡಿಎ ಸರ್ಕಾರದ ಐದು ಪಟ್ಟು ಹೆಚ್ಚು ಅನುದಾನ ನೀಡಿದೆ. ರಾಜ್ಯ ಕಾಂಗ್ರೆಸ್‌ನಿಂದ ಒಂದು ಬಸ್ ನಿಲ್ದಾಣ, ಆಸ್ಪತ್ರೆ, ರಸ್ತೆ ಕೂಡ ನಿರ್ಮಾಣವಾಗಿಲ್ಲ ಎಂದು ಕಿಡಿಕಾರಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ