ಒಂದಕ್ಕಿಂತ ಒಂದು ಸುಂದರ, ಮನಮೋಹಕ ಕಲಾಕೃತಿಗಳು. ಯಾವುದನ್ನು ಖರೀದಿಸಲಿ ಎಂಬ ಜಿಜ್ಞಾಸೆ, ಹರಿದುಬಂದ ಕಲಾಸಕ್ತರ ಸಾಗರ... ಇವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಚಿತ್ರಸಂತೆ’ಯಲ್ಲಿ ಕಂಡುಬಂದ ದೃಶ್ಯ.
ಬೆಂಗಳೂರು (ಜ.9) : ಒಂದಕ್ಕಿಂತ ಒಂದು ಸುಂದರ, ಮನಮೋಹಕ ಕಲಾಕೃತಿಗಳು. ಯಾವುದನ್ನು ಖರೀದಿಸಲಿ ಎಂಬ ಜಿಜ್ಞಾಸೆ, ಹರಿದುಬಂದ ಕಲಾಸಕ್ತರ ಸಾಗರ... ಇವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಚಿತ್ರಸಂತೆ’ಯಲ್ಲಿ ಕಂಡುಬಂದ ದೃಶ್ಯ.
ಕರ್ನಾಟಕ ಚಿತ್ರಕಲಾ ಪರಿಷತ್(Karnataka Chitrakala Parishad)ನಿಂದ ಭಾನುವಾರ ಕುಮಾರಕೃಪಾ ರಸ್ತೆ(Kumarakrupa road), ಗಾಂಧಿ ಭವನ ರಸ್ತೆ(Gandhi bhavan road)ಯಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿತ್ರಸಂತೆ(Chitra sante)ಗೆ ಲಕ್ಷಾಂತರ ಜನರು ಭೇಟಿ ನೀಡಿ ಕಲಾವಿದರು ಕೈಚಳಕ ಕಂಡು ಬೆರಗಾದರು. ಚಿತ್ತಾಕರ್ಷಕವಾಗಿ ವಿಭಿನ್ನ ಬಣ್ಣಗಳಿಂದ 1300ಕ್ಕೂ ಅಧಿಕ ಕಲಾವಿದರು ರಚಿಸಿದ ಕಲಾಕೃತಿಗಳ ಸೊಬಗನ್ನು ಕಣ್ತುಂಬಿಕೊಂಡರು. ಚಿಕ್ಕಮಕ್ಕಳು-ಹಿರಿಯರು ಎನ್ನುವ ಬೇಧವಿಲ್ಲದೇ ಅಬಾಲವೃದ್ಧರಾದಿಯಾಗಿ ಲಕ್ಷಾಂತರ ಜನ ಆಗಮಿಸಿದ್ದು ಚಿತ್ರಗಳನ್ನು ವೀಕ್ಷಿಸಿ ಖುಷಿಪಟ್ಟರು.
Chitra Santhe 2023: ನವಿಲು ಚಿತ್ರ ಬಿಡಿಸುವ ಮೂಲಕ 'ಚಿತ್ರಸಂತೆ'ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ನೂರು ರುಪಾಯಿಯಿಂದ ಏಳೆಂಟು ಲಕ್ಷ ರುಪಾಯಿ ಮೌಲ್ಯದ ಕಲಾಕೃತಿಗಳನ್ನೂ ಮಾರಾಟಕ್ಕಿಟ್ಟಿದ್ದು ಜನತೆ ತಮ್ಮ ಬಜೆಟ್‌ಗೆ ಹೊಂದಿದ, ಮನಸಿಗೊಪ್ಪಿದ ಕಲಾಕೃತಿಗಳನ್ನು ಖರೀದಿಸಿ ಮನೆಗೊಯ್ದರು. ಒಟ್ಟಾರೆ ನಾಲ್ಕೈದು ಕೋಟಿ ರು. ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ ಕಲಾವಿದರು ಶಿವ, ವಿನಾಯಕ, ರಾಧಾ-ಕೃಷ್ಣ, ಬುದ್ಧ, ಗ್ರಾಮೀಣ ಜನಜೀವನ ಅದರಲ್ಲೂ ಮಹಿಳೆಯರ ದಿನ ನಿತ್ಯದ ಗೃಹ ಕೆಲಸಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿದ್ದು ವಿಶೇಷವಾಗಿತ್ತು. ಮಣ್ಣಿನಿಂದ ತಯಾರಿಸಿದ ವಿಭಿನ್ನ ನಮೂನೆಯ ಹೂಕುಂಡ, ವಿಷಲ್ ಗಮನ ಸೆಳೆದವು.
ಜಾತ್ರೆಗೆ ಹೋದ ಅನುಭವ
ಇಲ್ಲಿ ಬರೀ ಕಲಾಕೃತಿಗಳಷ್ಟೇ ಮಾರಾಟಕ್ಕಿರಲಿಲ್ಲ. ಜಾತ್ರೆಯಲ್ಲಿ ಹೇಗೆ ವಿಭಿನ್ನ ರೀತಿಯ ವಸ್ತುಗಳು ಮಾರಾಟಕ್ಕಿರುತ್ತವೆಯೋ ಅದೇ ರೀತಿ ಬಟ್ಟೆ, ಮಕ್ಕಳ ಆಟಿಕೆಗಳು, ಮಹಿಳೆಯರ ಆರ್ಟಿಫಿಷಿಯಲ್ ಆಭರಣಗಳು, ಮ್ಯಾಟ್, ಟೇಬಲ್ ಕ್ಲಾತ್, ಗೃಹ ಅಲಂಕಾರಿಕ ವಸ್ತುಗಳೂ ಮಾರಾಟಕ್ಕಿದ್ದವು. ಐಸ್ ಕ್ರೀಂ, ಕಡಲೆಕಾಯಿ, ಪಾಪ್‌ಕಾರ್ನ್, ಸ್ವೀಟ್ ಕಾರ್ನ್ ಮತ್ತಿತರ ಆಹಾರ ಪದಾರ್ಥಗಳ ಮಾರಾಟವೂ ಜೋರಾಗಿಯೇ ನಡೆಯಿತು. ಜೆ.ಪವನ ಎಂಬುವರು ದಾರದಲ್ಲಿ ರಚಿಸಿದ ಕಸೂತಿ ಕಲಾಕೃತಿಗಳೂ ಮೆಚ್ಚುಗೆಗೆ ಪಾತ್ರವಾದವು.
ಪೋರ್ಟ್ ರೈಟ್ ರಚಿಸುವ ಕಲಾವಿದರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಚಿಕ್ಕಮಕ್ಕಳಂತೂ ಕಲಾವಿದರಿಂದ ತಮ್ಮ ಚಿತ್ರಗಳನ್ನು ರಚಿಸಿಕೊಂಡು ಸಂತಸಗೊಂಡರು. ಕಪ್ಪು ಬಿಳುಪು ಪೋರ್ಚ್‌ರೈಟ್‌ಗೆ .100ರಿಂದ .500 ರವರೆಗೂ ಪಡೆಯಲಾಗುತ್ತಿತ್ತು. ವರ್ಣರಂಜಿತ ಪೋರ್ಚ್‌ರೈಟ್ ರಚಿಸುವ ಕಲಾವಿದರೂ ಕಂಡುಬಂದರು. 50ಕ್ಕೂ ಅಧಿಕ ಕಲಾವಿದರು ಪೋರ್ಚ್‌ರೈಟ್ ಬಿಡಿಸುವಲ್ಲಿ ತಲ್ಲೀನರಾಗಿದ್ದರು.
‘ಕಳೆದ 15 ವರ್ಷದಿಂದ ಚಿತ್ರಸಂತೆಗಾಗಿಯೇ ಆಂಧ್ರದ ವಿಶಾಖಪಟ್ಟಣದಿಂದ ಆಗಮಿಸುತ್ತಿದ್ದೇವೆ. ವ್ಯಾಪಾರ ಪರವಾಗಿಲ್ಲ’ ಎನ್ನುತ್ತಾರೆ ಪೋರ್ಚ್‌ರೈಟ್ ಕಲಾವಿದ ಕೇದಾರ್‌ನಾಥ್. ಆದರೆ ಮಹಾರಾಷ್ಟ್ರದ ಸತೀಶ್ ಪವಾರ್ ಹೇಳಿಕೆ ಇದಕ್ಕಿಂತ ಭಿನ್ನವಾಗಿತ್ತು. ‘ಮಧ್ಯಾಹ್ನದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬಹಳ ಜನಸಂದಣಿ ಇದೆ. ಆದರೆ ವ್ಯಾಪಾರ ಮಾತ್ರ ಹೆಚ್ಚಾಗಿ ಆಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.
8 ಗಂಟೆಯಾದರೂ ವ್ಯಾಪಾರ
ರಾತ್ರಿ ಎಂಟು ಗಂಟೆಗೆ ಚಿತ್ರಸಂತೆ ಮುಗಿಯಲಿದ್ದರೂ ಜನರು 8 ಗಂಟೆಯಾದರೂ ಆಗಮಿಸುತ್ತಿದ್ದುದು ಕಂಡುಬಂತು. 8 ಗಂಟೆಯ ನಂತರ ಕುಮಾರಕೃಪಾ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮೊದಲೇ ತಿಳಿಸಿದ್ದರಿಂದ ಕೊನೇ ಕ್ಷಣದಲ್ಲಿ ವ್ಯಾಪಾರ ಮಾಡಬೇಕೋ ಅಥವಾ ಕಲಾಕೃತಿಗಳನ್ನು ಪ್ಯಾಕ್ ಮಾಡಿ ಹೊರಡಬೇಕೋ ಎಂಬ ಗೊಂದಲದಲ್ಲಿ ಕಲಾವಿದರು ಇದ್ದದ್ದು ಕಂಡುಬಂತು.
Chitra Santhe 2023: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಕಲಾಕೃತಿಗಳ ಚಿತ್ರ ಸಂತೆ
₹8 ಲಕ್ಷಕ್ಕೆ ಪೈಂಟಿಂಗ್ ಮಾರಾಟ
ಕಳೆದ 15 ವರ್ಷದಿಂದ ಚಿತ್ರಸಂತೆಗೆ ಆಗಮಿಸುತ್ತಿರುವ ತಮಿಳುನಾಡಿ(Tamilunadu)ನ ಕೊಯಮತ್ತೂರಿನ ಗೋಕುಲಂ ವಿಜಯ್(Gokulam vijay) ಅವರ ದುಬಾರಿ ಪೈಂಟಿಂಗ್‌ಗಳು ಈ ಬಾರಿಯೂ ಕಲಾಸಕ್ತರ ಗಮನ ಸೆಳೆದವು. ದೇವಸ್ಥಾನದ ರಾಜಗೋಪುರದ ಮುಂದಿನ ದೃಶ್ಯವುಳ್ಳ ಆಯಿಲ್ ಪೈಂಟಿಂಗ್ ಬರೋಬ್ಬರಿ .8 ಲಕ್ಷಕ್ಕೆ ಮಾರಾಟವಾಯಿತು. ದೇವಸ್ಥಾನದ ಮುಂದಿನ ಬೀದಿಯಲ್ಲಿ ಆಟಿಕೆ ಮಾರುವವ, ಅಂಗಡಿಯಲ್ಲಿ ಮಾರಾಟಕ್ಕಿಟ್ಟಹೂವಿನ ಹಾರ, ನಿಂಬೆಹಣ್ಣು, ತೆಂಗಿನ ಕಾಯಿ, ಬಣ್ಣಬಣ್ಣದ ಹೂ ಸೇರಿದಂತೆ ಪೂಜಾ ಸಾಮಗ್ರಿಗಳು, ದೇವಸ್ಥಾನಕ್ಕೆ ತೆರಳುತ್ತಿರುವ ಭಕ್ತರು, ದೇವರ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿರುವ ವೃದ್ಧೆ, ಮಹಿಳೆ, ಮಗುವಿರುವ ಈ ಕಲಾಕೃತಿ ಅತ್ಯಾಕರ್ಷಕವಾಗಿದೆ