
ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಸೆಪ್ಟೆಂಬರ್ 5ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಬಳಿಕ ಶ್ರೀಗಳನ್ನು ವೈದ್ಯಕೀಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಅವರ ಶಿಷ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುರುಘಾ ಶರಣರ ಶಿಷ್ಯರಾದ ತಿಪ್ಪೇರುದ್ರಸ್ವಾಮಿ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮರುಘಾ ಶ್ರೀಗಳಿಗೆ ಮತ್ತೊಂದು ಶಾಕ್, ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್!
ಆತ್ಮಹತ್ಯೆಗೆ ಯತ್ನಿಸಿದ ತಿಪ್ಪೆರುದ್ರಸ್ವಾಮಿ ಅವರನ್ನು ಪೊಲೀಸರು ತಡೆದು ಅವರನ್ನು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಧ್ಯಕ್ಕೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಮುಂದೆ ಶ್ರೀಗಳ ಭಕ್ತರ ಗುಂಪು ಜಮಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಇದೇ ತಿಪ್ಪೇರುದ್ರಸ್ವಾಮಿ ಕಳೆದ ವರ್ಷ ಕೂಡ ಬಿಜೆಪಿ ಕಚೇರಿ ಮುಂದೆ ಪೆಟೋಲ್ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನ ಮಾಡಿದ್ರು ಯೋಗವನ ಬೆಟ್ಟಕ್ಕೆ ಸಚಿವ ಶ್ರೀರಾಮುಲು ಸಹಾಯ ಮಾಡುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಂಧನದ ಬಳಿಕ ಮುರುಘಾ ಮಠದಲ್ಲಿ ಮೌನ
ಮುರುಘಾ ಮಠದಲ್ಲಿ ಶರಣರ ಬಂಧನದ ಬಳಿಕ ನೀರವ ಮೌನ ಆವರಿಸಿದೆ. ಮಠದ ಆವರಣ ಬಿಕೋ ಎನ್ನುತ್ತಿದೆ. ಮಠದ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಭಕ್ತಾದಿಗಳು ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ. ಜತೆಗೆ ಕೆಲವೇ ಕ್ಷಣಗಳಲ್ಲಿ ಶರಣರಿಗೆ MRI ಸ್ಕ್ಯಾನಿಂಗ್ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ತೆಯ ಹಿಂಭಾಗದಲ್ಲಿರುವ MRI ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮತ್ತು ಇಸಿಜಿ ಮಾಡಲಿದ್ದಾರೆ.
ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ