ರಾಜ್ಯದಲ್ಲೇ ಮೊದಲು 10 ವರ್ಷದೊಳಗಿನ ಮಗು ಕೊರೋನಾ ಸೋಂಕಿಗೆ ಬಲಿ

By Kannadaprabha News  |  First Published Aug 1, 2020, 10:26 AM IST

ಬೆಂಗಳೂರು ನಗರದಲ್ಲಿ 8 ವರ್ಷದ ಬಾಲಕಿ ಜು.20 ರಂದು ಸಾವು| ಶುಕ್ರವಾರ ಬರೋಬ್ಬರಿ 62 ಮಂದಿ ಪೌರಕಾರ್ಮಿಕರಿಗೆ ಸೋಂಕು, 20 ಮಂದಿ ಸಾವು| ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಪೌರ ಕಾರ್ಮಿಕರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲು ಮುಂದಾದ ಬಿಬಿಎಂಪಿ|


ಬೆಂಗಳೂರು(ಆ.01): ರಾಜಧಾನಿಯಲ್ಲಿ ಮಹಾಮಾರಿ ಕೊರೋನಾ ಸೋಂಕು ಉಲ್ಬಣಿಸುತ್ತಿದ್ದು ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಎಂಟು ವರ್ಷದ ಬಾಲಕಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಜೊತೆಗೆ ಕಳೆದ 24 ತಾಸಿನಲ್ಲಿ 2,220 ಬರೋಬ್ಬರಿ ಹೊಸ ಕೊರೋನಾ ಸೋಕು ಪ್ರಕರಣಗಳು ವರದಿಯಾಗಿದೆ. ಇದಲ್ಲದೆ ಶುಕ್ರವಾರ ಪೌರ ಕಾರ್ಮಿಕರಿಗೆ ನಡೆದ ಸೋಂಕು ಪರೀಕ್ಷೆ ಶಿಬಿರದಲ್ಲಿ ನಗರದ 62 ಮಂದಿ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ.

ಶುಕ್ರವಾರ ಬರೋಬ್ಬರಿ 62 ಮಂದಿ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿರುವುದು ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ 10 ವರ್ಷದೊಳಗಿನ ಮಗು ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು ಬೆಂಗಳೂರು ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

Latest Videos

undefined

ರಾಜ್ಯದಲ್ಲಿ ಈವರೆಗೂ ಚಿಕ್ಕ ವಯಸ್ಸಿನವರಲ್ಲಿ ಸೋಂಕು ಉಂಟಾಗಿದ್ದರೂ ಯಾರೂ ಮೃತಪಟ್ಟಿರಲಿಲ್ಲ. ಈವರೆಗೆ 20 ವರ್ಷದೊಳಗಿನ ಇಬ್ಬರು ಮಾತ್ರ ಮೃತಪಟ್ಟಿದ್ದು 10 ವರ್ಷದೊಳಗಿನ ಮಕ್ಕಳಿಗೆ ಯಾರಿಗೂ ಜೀವದ ಅಪಾಯ ಉಂಟಾಗಿರಲಿಲ್ಲ.

ಹಗ್ಗದಿಂದ ಎಳೆದು ತಂದು ಸೋಂಕಿತನ ಅಂತ್ಯಕ್ರಿಯೆ!

ಇದೀಗ ಆರೋಗ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಕೋವಿಡ್‌ ವರದಿಯಲ್ಲಿ ನಗರದಲ್ಲಿ ವಿಷಮಶೀತ ಜ್ವರದಿಂದ ಬಳಲುತ್ತಿದ್ದ 8 ವರ್ಷ ಬಾಲಕಿ ಸೇರಿದಂತೆ 11 ಮಂದಿ ಮಹಿಳೆಯರು ಹಾಗೂ 9 ಮಂದಿ ಪುರುಷರು ಸೇರಿದಂತೆ ಒಟ್ಟು 20 ಮಂದಿ ಬೆಂಗಳೂರಿಗರು ಸೋಂಕಿಗೆ ಬಲಿಯಾಗಿದ್ದಾರೆ. ಈ 8 ವರ್ಷ ಬಾಲಕಿ ಜು.20ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಇಲಾಖೆ ದೃಢಪಡಿಸಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಪೌರ ಕಾರ್ಮಿಕರಿಗೆ ಸೋಂಕು:

ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಪೌರ ಕಾರ್ಮಿಕರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಶುಕ್ರವಾರ ಪಾಲಿಕೆಯ 8 ವಲಯ ವ್ಯಾಪ್ತಿಯಲ್ಲಿ 3,362 ಮಂದಿ ಪೌರ ಕಾರ್ಮಿಕರನ್ನು ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಡಿಸಿದ್ದು, ಈ ಪೈಕಿ 62 ಮಂದಿ ಪೌರ ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ.

ಈ ಹಿಂದೆ ಕೆಲ ಪೌರ ಕಾರ್ಮಿಕರು ಸೋಂಕಿಗೆ ತುತ್ತಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್‌ ಸಹ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿತ್ತು. ಬಿಬಿಎಂಪಿಯ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ಅವರು ನಗರದ ಎಲ್ಲ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿರುವವರು ಹಾಗೂ 50 ವರ್ಷ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ ಸಮಸ್ಯೆ ಎದುರಿಸುತ್ತಿರುವವರನ್ನು ಹಂತ ಹಂತವಾಗಿ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಪಾಲಿಕೆಯ ಎಂಟು ವಲಯಗಳಲ್ಲಿ 3,362 ಮಂದಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 15 ಜನ ಆಟೋ ಟಿಪ್ಪರ್‌ ಚಾಲಕರು ಹಾಗೂ ಇಬ್ಬರು ಮೇಲ್ವಿಚಾರಕರು ಸೇರಿದಂತೆ 62 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

24 ತಾಸಿನಲ್ಲಿ 2,220 ಮಂದಿಗೆ ಕೊರೋನಾ ಸೋಂಕು ದೃಢ

ಜು.30 ಸಂಜೆ 5ರಿಂದ ಜು.31ರ ಸಂಜೆ 5ರವರೆಗೆ ನಗರದಲ್ಲಿ 2,220 ಹೊಸ ಪ್ರಕರಣಗಳು ಸೇರಿದಂತೆ ಈವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 55,544ಕ್ಕೆ ಏರಿಕೆಯಾಗಿದೆ. ಜತೆಗೆ ಶುಕ್ರವಾರ 20 ಸೋಂಕಿತರ ಸಾವು ವರದಿಯಾಗಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,029ಕ್ಕೆ ಏರಿಕೆಯಾಗಿದೆ. ಈ ನಡುವೆ ಶುಕ್ರವಾರ ಒಂದೇ ದಿನ 1,113 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಈ ಮೂಲಕ ಈವರೆಗೆ ಸೋಂಕಿನಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 16,896ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇನ್ನೂ 37,618 ಮಂದಿ ಸೋಂಕಿತರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 336 ಮಂದಿ ಸೋಂಕಿತರಿಗೆ ಐಸಿಯು ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಲಯವಾರು ಪೌರಕಾರ್ಮಿಕರ ಪರೀಕ್ಷೆ ಮಾಹಿತಿ

ವಲಯ ಪರೀಕ್ಷೆ ಒಳಪಟ್ಟವರ ಸಂಖ್ಯೆ ದೃಢಪಟ್ಟವರ ಸಂಖ್ಯೆ

ಪೂರ್ವ 947 24
ಪಶ್ಚಿಮ 590 8
ದಕ್ಷಿಣ 00 00
ಯಲಹಂಕ 1,070 9
ಮಹದೇವಪುರ 10 00
ಬೊಮ್ಮನಹಳ್ಳಿ 00 00
ರಾಜರಾಜೇಶ್ವರಿ ನಗರ 453 16
ದಾಸರಹಳ್ಳಿ 292 5
ಒಟ್ಟು 3,362 62
 

click me!