
- ಮತ್ತೆ 30 ಕೆಮಿಕಲ್ ಕಂಪನಿಗಳು ಸಜ್ಜು: ಜನರ ಬದುಕು ನುಜ್ಜುಗುಜ್ಜು ! । ಈಗ ಮೈಮರೆತರೆ, ಮುಂದೆ ಬದುಕು ಜೀವಚ್ಛವದಂತೆ ಎಂಬ ಆತಂಕ
ಆನಂದ್ ಎಂ. ಸೌದಿ
ಯಾದಗಿರಿ (ಏ.20): ಈಗಾಗಲೇ 20ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳು ಕಾರ್ಯಾರಂಭಗೊಳಿಸಿದ ಬೆನ್ನಲ್ಲೇ ಮತ್ತೆ 30ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳು ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕಾಲಿಡಲು ಸಜ್ಜಾಗುತ್ತಿವೆ. "ರೆಡ್ ಝೋನ್" (ಅಪಾಯಕಾರಿ ಕೆಂಪು ವಲಯ) ಎಂದೇ ಕರೆಯಲ್ಪಡುವ ಸುತ್ತಮುತ್ತಲ ವ್ಯಾಪ್ತಿಯ ಜನರು ಈಗ ಮೈಮರೆತರೆ, ಮುಂದೆ ಬದುಕು ಜೀವಚ್ಛವದಂತೆ ಎಂಬ ಆತಂಕ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಕಂಪನಿಗಳ ನಿಯಮ ಮೀರಿ ಕಾರ್ಯಾಚರಣೆಯಿಂದಾಗಿ ತ್ಯಾಜ್ಯ ದುರ್ನಾತ- ವಿಷಗಾಳಿಯಿಂದ ಜನ-ಜೀವ ಸಂಕಷ್ಟದಲ್ಲಿದೆ ಎಂಬ ಆರೋಪ ಮಧ್ಯೆ, ಮತ್ತೇ ಇಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಸಜ್ಜಾಗಿರುವುದು ಆತಂಕ ಮೂಡಿಸಿದೆ.
ಇದನ್ನೂ ಓದಿ: ಕಡೇಚೂರು ವಿಷಗಾಳಿ:: 'ಸಾಹುಕಾರ ಅಗ್ತೀವಿ' ಅಂದ್ಕೊಂಡವ್ರಿಗೆ ಬೇಡ್ಕೊಂಡು ತಿನ್ನೋ ಸ್ಥಿತಿ!
ದಶಕದ ಹಿಂದೆ, ಟೆಕ್ಸಟೈಲ್ ಪಾರ್ಕ್ ಸ್ಥಾಪನೆಗೆಂದು ಹೇಳಿ ಅಲ್ಲಿನ ಜನರ ಒಪ್ಪಿಗೆ ಮೇರೆಗೆ ಸ್ವಾಧೀನಪಡಿಸಿಕೊಂಡಿದ್ದ 3,232 ಎಕರೆ ಜಮೀನಿನಲ್ಲಿ ತಲೆಯೆತ್ತಿ ಅರ್ಭಟಿಸುತ್ತಿರುವುದು ಬಹುತೇಕ ಕೆಮಿಕಲ್ ಕಂಪನಿಗಳು ಗಾರ್ಮೆಂಟ್ಸ್ ಫ್ಕಾಕ್ಟರಿಗಳಲ್ಲಿ ಹೇರಳವಾಗಿ ಉದ್ಯೋಗದ ಅವಕಾಶ ಇರುತ್ತದೆ ಎಂಬ ಆಶಾಭಾವೆನಯೊಂದಿಗೆ ಭೂಮಿ ನೀಡಿದ ರೈತರಿಗೆ ಈಗ ಸಿಗುತ್ತಿರುವುದು ರೋಗ-ರುಜಿನಗಳ ಗುಚ್ಛ ಅಂತಾರೆ ಇಲ್ಲಿನ ಮಂದಿ.
"ಕನ್ನಡಪ್ರಭ"ಕ್ಕೆ ದೊರೆತ ಮಾಹಿತಿಗಳ ಪ್ರಕಾರ, ಜಿಲ್ಲಾಮಟ್ಟದಲ್ಲಿ ಅನುಮತಿ ಪಡೆದ 15 ಹಾಗೂ ರಾಜ್ಯಮಟ್ಟದಲ್ಲಿ ಅನುಮತಿ ಪಡೆದ 14 ಕಂಪನಿಗಳ ಸೇರಿದಂತೆ ಒಟ್ಟು 29 ವಿವಿಧ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಬಹುತೇಕ ಪಾಲು, ಕೆಮಿಕಲ್-ಬಲ್ಕಡ್ ಡ್ರಗ್ ಫ್ಯಾಕ್ಟರಿಗಳೇ. ಹಾಗೆಯೇ ಜಿಲ್ಲಾಮಟ್ಟದಲ್ಲಿ ಅನುಮತಿ ಪಡೆದ 17 ಹಾಗೂ ರಾಜ್ಯಮಟ್ಟದಲ್ಲಿ ಅನುಮತಿ ಪಡೆದ 20 ಕಂಪನಿಗಳು ಸೇರಿದಂತೆ ಒಟ್ಟು 37 ಕಂಪನಿಗಳು ರೂಪು-ರೇಷೆ ಸಿದ್ಧಪಡಿಸಿಕೊಳ್ಳುತ್ತಿವೆ. ವೈದ್ಯಕೀಯ ಹಾಗೂ ಬಲ್ಕ್ ಡ್ರಗ್ ಕೆಮಿಕಲ್ ಕಂಪನಿಗಳು ಪಾಲು ಇಲ್ಲಿ ಹೆಚ್ಚು. ಬೇರೆ ಬೇರೆ ರಾಜ್ಯಗಳಲ್ಲಿ ನಿಷೇಧಕ್ಕೊಳಗಾದ ಅಥವಾ ಅಲ್ಲಿ ವ್ಯಕ್ತವಾದ ವಿರೋಧದಿಂದಾಗಿ ದಾರಿ ಬದಲಿಸಿದ ಕೆಲವು "ಅಪಾಯಕಾರಿ" ಕಂಪನಿಗಳು ಈ ಕೈಗಾರಿಕಾ ಪ್ರದೇಶದಲ್ಲಿ ಕಾಲಿಡಲು ಕಸರತ್ತು ನಡೆಸಿವೆ ಎಂಬ ಆರೋಪಗಳು ಇಲ್ಲಿನವರಿಂದ ಕೇಳಿ ಬರುತ್ತಿವೆ.
- ಡಿಸಿ, ಸಿಇಓಗೆ ಜನಸಂಗ್ರಾಮ ಪರಿಷತ್ ದೂರು
ಯಾದಗಿರಿ: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಹದಗೆಡುತ್ತಿರುವ ಜನಜೀವನದ ಕುರಿತು ಬಳ್ಳಾರಿ ಜಿಲ್ಲೆ ಸಂಡೂರಿನ ಪರಿಸರ ಕಾಳಜಿಯ ಸಾಮಾಜಿಕ ಹೋರಾಟಗಾರ ಶ್ರೀಶೈಲ ಆಲದಹಳ್ಳಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿದ್ದ ಬೆನ್ನಲ್ಲೇ ಬಳ್ಳಾರಿಯ ಜನಸಂಗ್ರಾಮದ ಪರಿಷತ್ ಸಹ ಯಾದಗಿರಿ ಜಿಲ್ಲಾಧಿಕಾರಿ, ಜಿಪಂ ಸಿಯೊಗೆ ಈ-ಮೇಲ್ ಮೂಲಕ ಪತ್ರ ಬರೆದು ದೂರು ಸಲ್ಲಿಸಿದೆ.
ಕೈಗಾರಿಕಾ ಪ್ರದೇಶದಲ್ಲಿ ಜನರ ಆರೋಗ್ಯ, ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಜನಸಂಗ್ರಾಮ ಪರಿಷತ್‌ನ ರಾಜ್ಯಾಧ್ಯಕ್ಷ ಟಿ. ಎಂ. ಶಿವಕುಮಾರ್, ಸಲಹೆಗಾರ ಚಾಗನೂರು ಮಲ್ಲಿಕಾರ್ಜು ರೆಡ್ಡಿ, ರೈತ ಸಂಘದ ಕರೂರು, ಮಾಧವರೆಡ್ಡಿ, ನಾಗರಾಜ್, ಮಂಜುನಾಥ್ ಹಾಗೂ ಶ್ರೀಶೈಲ ತಂಡ ಮಿಂಚಂಚೆ ಮೂಲಕ ಪತ್ರ ರವಾನಿಸಿ, ಕೈಗೊಂಡ ಕ್ರಮದ ಬಗ್ಗೆ ಕೋರಿದ್ದಾರೆ.
ಈ ಹಿಂದೆ ಬಳ್ಳಾರಿಯಲ್ಲಿ ಚಾಗನೂರು-ಸಿರವಾರ ಏರ್‌ರ್ಪೋರ್ಟ್ ಭೂ ಚಳವಳಿಯಲ್ಲಿ ಜೀವ ಪಣಕ್ಕಿಟ್ಟು ಹೋರಾಟ ನಡೆಸಿದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಹಾಗೂ ಸಂಡೂರಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ತಂಡ ಕಟ್ಟಿ ಹೋರಾಟಕ್ಕಿಳಿದ ನ್ಯಾಯವಾದಿ ಟಿ. ಎಂ. ಶಿವಕುಮಾರ್ ಮತ್ತವರ ತಂಡ ಗಣಿಧಣಿಗಳ ವಿರುದ್ಧ ಸೆಟೆದು ನಿಂತಿತ್ತು. ರಾಜ್ಯದ ವಿವಿಧೆಡೆ ಪರಿಸರಕ್ಕೆ ಧಕ್ಕೆ, ಜನಜೀವನದ ಮೇಲೆ ಪರಿಣಾಮ ಬೀರುವ ಪ್ರಸಂಗಗಳು ಕಂಡುಬಂದಾಗ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಟಿ. ಎಂ. ಶಿವಕುಮಾರ್, ಶ್ರೀಶೈಲ ಹಾಗೂ ಮೂಲಿಮನಿ ಈರಣ್ಣ ಮತ್ತವರ ತಂಡ ದಾಖಲೆಗಳ ಸಮೇತ ಸ್ವಯಂಪ್ರೇರಿತವಾಗಿ ದೂರು ನೀಡಿ, ದೆಹಲಿ ಮಟ್ಟದಲ್ಲೂ ಕಾನೂನು ಹೋರಾಟ ನಡೆಸುತ್ತಿದೆ.
ಇದನ್ನೂ ಓದಿ: ಕಡೇಚೂರು ವಿಷಗಾಳಿ: 'ಮನುಷ್ಯರೇ ಸಾಯ್ಲಿಕತ್ತೀವಿ, ಪ್ರಾಣಿ ಪಕ್ಷಿಗಳು ಬದುಕ್ತಾವೇನ್?' ಗ್ರಾಮಸ್ಥರ ಆತಂಕದ ಮಾತು!
ಅದರಂತೆ, ಈಗ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಜನಜೀವನ ಕುರಿತು "ಕನ್ನಡಪ್ರಭ" ಪ್ರಕಟಿಸುತ್ತಿರುವ ಸರಣಿ ವರದಿಗಳ ಉಲ್ಲೇಖಿಸಿ ಹಾಗೂ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದ ಬಗ್ಗೆ ಆಡಳಿತ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜನಸಂಗ್ರಾಮ್ ಪರಿಷತ್ ಪತ್ರ ಬರೆದಿದೆ.
ಕೆಮಿಕಲ್ ಕಂಪನಿಗಳ ಗಾಳಿ- ತ್ಯಾಜ್ಯದಿಂದ ಹದಗೆಟ್ಟಿರುವ ವಾತಾವರಣದಿಂದಾಗಿ ಕಳೆದ ಐದು ವರ್ಷಗಳಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದೇವೆ. ಈಗ, ಮತ್ತೇ 30ಕ್ಕೂ ಹೆಚ್ಚು ಕಾರ್ಖಾನೆಗಳ ಆರಂಭವಾಗಿಬಿಟ್ಟರೆ ಮುಂದಿನ ಪೀಳಿಗೆಯನ್ನೇ ಹೊಸಕಿ ಹಾಕಿದಂತಾಗುತ್ತದೆ.
ಭೀಮು, ಬಾಡಿಯಾಳ ಗ್ರಾಮಸ್ಥ. (19ವೈಡಿಆರ್3)
ಕೇಂದ್ರ ಪರಿಸರ, ಅರಣ್ಯ ಹಾಗೂ ಅರಣ್ಯ ಸಚಿವಾಲಯ, ರಾಷ್ಟ್ರೀಯ ಹಸಿರು ಪೀಠಕ್ಕೆ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿ, ನೊಂದವರ ನೆರವಿಗೆ ನಿಲ್ಲುತ್ತೇವೆ.
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಸಾಮಾಜಿಕ ಹೋರಾಟಗಾರರು, ಬಳ್ಳಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ