
ರಾಯಚೂರು : ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊನ್ನೆ ಅಂಕ ನೀಡುವುದಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನರೇ ಝಿರೋ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಮೋದಿ ನೇತೃತ್ವದ 11 ವರ್ಷದ ಆಡಳಿತಕ್ಕೆ ಶೂನ್ಯ ಅಂಕ ನೀಡಿದ್ದು, ಮುಂದಿನ ಮೂರು ವರ್ಷ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಬೆಲೆ ಏರಿಕೆಗೆ ಮೋದಿ ಕಾರಣ ಎನ್ನುತ್ತಿದ್ದಾರೆ. 2014ರಿಂದ 30-32 ಬಾರಿ ರಾಹುಲ್ ಗಾಂಧಿಯನ್ನು ಲಾಂಚ್ ಮಾಡುಯ್ಯತ್ನ ನಡೆಯಿತು. ಚಂದ್ರಯಾನ ಒಂದು ಬಾರಿ ವಿಫಲಗೊಂಡ ಮೇಲೆ ಯಶಸ್ವಿಯಾಗಿ ಲಾಂಚ್ ಆಯಿತು. ಆದರೆ, ರಾಹುಲ್‌ಗಾಂಧಿ ಯಶಸ್ವಿಯಾಗಲಿಲ್ಲ, ಜನರು ಅವರಿಗೆ ಶೂನ್ಯ ಅಂಕ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ಬದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಮರು ಜಾತಿ ಸಮೀಕ್ಷೆಗೆ ಮುಂದಾಗಿದ್ದಾರೆ. ಮೀಸಲಾತಿ ವಿರೋಧಿಸುವವರೇ ಅವರಾಗಿದ್ದಾರೆ. ಕಾಂಗ್ರೆಸ್‌ನ ನಾಯಕರಾದ ಜವಾಹರಲಾಲ್ ನೆಹರು ಅವರಿಂದ ರಾಜೀವ್ ಗಾಂಧಿವರೆಗೂ ಮೀಸಲಾತಿ ವಿರೋಧಿಸಿದವರು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು, ರಾಜೀವ್ ಗಾಂಧಿ ಅವರು ಮೀಸಲಾತಿ ವಿರೋಧ ಮಾಡಿರುವ ದೊಡ್ಡ ಭಾಷಣವೇ ಸಂಸತ್ತಿನಲ್ಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಶೇ.60 ಪರ್ಸೆಂಟೇಜ್ ಸರ್ಕಾರವೆಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಅವರು ದೂರಿದರು.
ಮಂತ್ರಾಲಯ ರಥ ಎಳೆದ ಸಚಿವ ಜೋಶಿ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕೇಂದ್ರದ ಗ್ರಾಹಕರ ವ್ಯವಹಾರಗಳು, ಆಹಾರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಕುಟುಂಬಸ್ಥರೊಂದಿಗೆ ಸೋಮವಾರ ಭೇಟಿ ನೀಡಿದರು. ಆರಂಭದಲ್ಲಿ ಶ್ರೀಮಠದಿಂದ ಸಚಿವರನ್ನು ಸ್ವಾಗತಿಸಲಾಯಿತು. ಬಳಿಕ ಗ್ರಾಮದೇವತೆ ಮಂಚಾಲಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ ಸಚಿವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಗುರುರಾಯರ ಮೂಲಬೃಂದಾವನದ ದರ್ಶನ ಪಡೆದು ಉತ್ಸವರಾಯರ ಪಾದಪೂಜೆಯಲ್ಲಿ ಭಾಗವಹಿಸಿದರು.
ಸಂಜೆ ಶ್ರೀಮಠದ ಪ್ರಾಕಾರದಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಸಚಿವರು ರಥವನ್ನು ಎಳೆದರು. ಇದೇ ವೇಳೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಪ್ರಹ್ಲಾದ್ ಜೋಶಿ ಅವರಿಗೆ ಫಲಮಂತ್ರಾಕ್ಷತೆ ಹಾಗೂ ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ