
ನವದೆಹಲಿ(ಡಿ.20): ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ವರ್ಷಗಳಿಂದ ಜಾರಿಯಲ್ಲಿರುವ ರಾತ್ರಿ ಸಂಚಾರ ನಿಷೇಧದಿಂದಾಗುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಇದೀಗ ಶಾಶ್ವತ ಪರಿಹಾರ ಕಂಡು ಕೊಳ್ಳಲು ಮುಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದವನ್ಯ ಜೀವಿಗಳಿಗೂ ಸಮಸ್ಯೆಯಾಗದಂತೆ, ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಸಿಗುವಂತೆ ಅರಣ್ಯ ಪ್ರದೇಶದಲ್ಲಿ 6 ಪಥಗಳ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮಲಯಾಳಿ ಮಾಧ್ಯಮವೊಂದು ವರದಿ ಮಾಡಿದೆ.
ಚಾಮರಾಜನಗರ: ಬಂಡೀಪುರದಲ್ಲಿ ದೇಶದಲ್ಲೇ ಪ್ರಥಮ ಶ್ವಾನದಳ ಕೇಂದ್ರ
ಕೇರಳದ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಸ್ ಅವರು ಬಂಡೀಪುರ ರಸ್ತೆ ಸಮಸ್ಯೆಯ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಭೇಟಿಯಾಗಿದ್ದರು. ಈ ವೇಳೆ ಗಡ್ಕರಿ ಅವರು ಸುರಂಗ ಮಾರ್ಗದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸುರಂಗ ಮಾರ್ಗ ರೂಪಿಸುವ ಸಂಬಂಧ ವಿಸ್ತ್ರತ ಯೋಜನಾ ವರದಿ(ಡಿಪಿಆರ್) ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ಈ ಹಿಂದೆ ಬಂಡೀಪುರ ರಸ್ತೆಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಪ್ರಸ್ತಾಪವಿತ್ತಾದರೂ ಅದು ಕಾರ್ಯಸಾಧುವಲ್ಲ ಎನ್ನುವ ಕಾರಣಕ್ಕೆ ಆ ಯೋಜನೆಯನ್ನು ಕೈಬಿಡಲಾಗಿದೆ. ಹೀಗಾಗಿ ವನ್ಯಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಸುರಂಗ ಮಾರ್ಗ ನಿರ್ಮಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಂದಿದೆ. ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಕೇರಳದ ವಯನಾಡು, ಮೈಸೂರು ಮತ್ತು ಬೆಂಗಳೂರು ನಡುವಿನ ಸಂಚಾರ ಇನ್ನಷ್ಟು ಸುಗಮವಾಗುವುದಲ್ಲದೆ, ಬಂಡೀಪುರ ಹೆದ್ದಾರಿಯಲ್ಲಿ ಜಾರಿಯಲ್ಲಿರುವ ಒಂದೂವರೆ ದಶಕದಷ್ಟು ಹಳೆಯ ರಾತ್ರಿ ಸಂಚಾರ ನಿಷೇಧದ ಸಮಸ್ಯೆಗೆ ಮುಕ್ತಿ ಸಿಗಲಿದೆ.
25 ಕಿ.ಮೀ. ಸುರಂಗ:
ಸದ್ಯ ರಾತ್ರಿ ಸಂಚಾರ ನಿರ್ಬಂಧ ಬಂಡೀಪುರ ಮೂಲಕ ಸಾಗುವ ಎನ್‌ಎಚ್ 766ನ 25 ಕಿ.ಮೀ. ಗೆ ಅನ್ವಯಿಸುತ್ತದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಈಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧವಿದೆ. ಸುರಂಗ ಮಾರ್ಗವೇನಾದರೂ ನಿರ್ಮಾಣವಾದರೆ ರಾತ್ರಿ ವೇಳೆಯೂ ವಾಹನಗಳು ಮುಕ್ತವಾಗಿ ಸಂಚರಿಸುವುದು ಸಾಧ್ಯವಾಗಲಿದೆ. ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ ಪ್ರಕರಣ ನ್ಯಾಯಾಲಯದಲ್ಲಿರುವು ದರಿಂದ ಕೇಂದ್ರ ಸರ್ಕಾರ ಈ ಹೊಸ ಪ್ರಸ್ತಾಪದ ಕುರಿತು ನ್ಯಾಯಾಲಯದ ಗಮನಕ್ಕೆ ತರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ