ಗಡಿ ವಿವಾದ: ಸಿಎಂಗೆ ಕೇಂದ್ರ ಬುಲಾವ್‌, ನಾಳೆ ಅಮಿತ್‌ ಶಾ ಸಂಧಾನ ಸಭೆ

By Kannadaprabha NewsFirst Published Dec 13, 2022, 8:00 AM IST
Highlights

ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ದೆಹಲಿಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಮುಖಾಮುಖಿ ಮಾತುಕತೆ ನಡೆಯಲಿದೆ. 

ಬೆಂಗಳೂರು(ಡಿ.13): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಉಲ್ಬಣಿಸಿರುವ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ತ್ವೇಷಮಯ ವಾತಾವರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬುಧವಾರ ಪರಿಹಾರೋಪಾಯ ಕಂಡು ಹಿಡಿಯುವ ನಿರೀಕ್ಷೆಯಿದೆ.

ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ದೆಹಲಿಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಮುಖಾಮುಖಿ ಮಾತುಕತೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಪಾಲುದಾರ ಸರ್ಕಾರ ಮತ್ತು ಕರ್ನಾಟಕದಲ್ಲಿ ಪೂರ್ಣ ಬಿಜೆಪಿಯದ್ದೇ ಸರ್ಕಾರ ಇರುವುದರಿಂದ ಮಾತುಕತೆ ಸಫಲವಾಗಬಹುದು ಎನ್ನಲಾಗುತ್ತಿದೆ.

Border Dispute: ಮಹಾರಾಷ್ಟ್ರದ ಅಪ್ಪಟ್ಟ ಮರಾಠಿ ಹಳ್ಳಿಗಳಿಗೂ ಕರ್ನಾಟಕ ಸೇರುವ ಒಲವು

ಸಭೆಯ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ಅತ್ತ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರೂ ತಲುಪಲಿದ್ದಾರೆ. ಈ ಸಭೆಯಲ್ಲಿ ರಾಜ್ಯದ ನಿಲುವನ್ನು ಬೊಮ್ಮಾಯಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಲಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಮಿತ್‌ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿಚಾರ, ನಿಲುವು ಮತ್ತು ವಾಸ್ತವಾಂಶವನ್ನು ತಿಳಿಸಿದ್ದಾರೆ. ಇದೀಗ ಅದೆಲ್ಲವನ್ನೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅಮಿತ್‌ ಶಾ ಅವರ ಮುಂದಿಡಲಿದ್ದಾರೆ.

ಈ ಹಿಂದೆಯೂ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಪ್ರಕರಣ ಸದ್ಯ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ನಮ್ಮ ನ್ಯಾಯ ಸಮ್ಮತ ವಿಚಾರ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಲವು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ.
 

click me!