ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಸಿರು ನಿಶಾನೆ

By Kannadaprabha NewsFirst Published Oct 23, 2019, 7:17 AM IST
Highlights

ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ತನ್ನ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿ, ಅನುಮತಿ ನೀಡಿದೆ.

ಬೆಂಗಳೂರು [ಅ.23]:  ಮಹತ್ವದ ಬೆಳವಣಿಗೆಯೊಂದರಲ್ಲಿ ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ತನ್ನ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದೆ.

ಈ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದು, ಇದು ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಸಂಬಂಧಪಟ್ಟಇಲಾಖೆ ಒಪ್ಪಿಗೆ ಪಡೆದು ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಪರಿಸರ ಇಲಾಖೆ ತನ್ನ ಆಕ್ಷೇಪಣೆ ಇಲ್ಲ ಎಂದು ಹೇಳಿರುವುದರಿಂದ ಈ ಯೋಜನೆ ಜಾರಿಗೊಳಿಸಲು ಎದುರಾಗಿದ್ದ ದೊಡ್ಡ ಅಡಚಣೆ ನಿವಾರಣೆಯಾದಂತಾಗಿದೆ. ಮುಂದಿನ ಕ್ರಮಗಳನ್ನು ಶೀಘ್ರ ಕೈಗೊಂಡು ಕುಡಿಯುವ ನೀರನ್ನು ಪೂರೈಸಲು ಅನುಕೂಲವಾಗುತ್ತದೆ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕುಂದಗೋಳ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಯೋಜನೆಯ ವೆಚ್ಚ 840 ಕೋಟಿ ರು. ಎಂದು ಅಂದಾಜಿಸಲಾಗಿದೆ. ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ಮುಂಗಾರು ಹಂಗಾಮಿನಲ್ಲಿ 3.90 ಟಿಎಂಸಿ ನೀರನ್ನು ಹಾಯಿಸುವ ಉದ್ದೇಶ ಹೊಂದಲಾಗಿದೆ.

ಆದರೆ, ಈ ಯೋಜನೆ ಸುಮಾರು 250 ಹೆಕ್ಟೇರ್‌ನಷ್ಟುಅರಣ್ಯ ಪ್ರದೇಶವನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ಇದಕ್ಕೆ 1980ರ ಅರಣ್ಯ (ಸಂರಕ್ಷಣಾ) ಕಾಯ್ದೆ ಅನ್ವಯ ಒಪ್ಪಿಗೆ ಪಡೆಯಬೇಕು. ಅಲ್ಲದೆ, ಇದು ಭೀಮಗಡ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

click me!