
ಬೆಂಗಳೂರು (ಜ.10): ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಜಾಗತಿಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ. ಆದರೆ, ಕಳೆದ ವರ್ಷ ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಶೋಗೆ ಕಾವೇರಿ ನೀರು ಪೂರೈಕೆ ಮಾಡಲಾಗಿರಲಿಲ್ಲ. ಆದರೆ, ಈ ವರ್ಷ ಕೆಆರ್‌ಎಸ್ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿರುವ ಕಾರಣ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2025ಕ್ಕೆ ಅಗತ್ಯವಾಗಿರುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು , ನೀರು ಪೂರೈಕೆಗಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. 'ವೈಮಾನಿಕ ಪ್ರದರ್ಶನಕ್ಕೆ ಪ್ರತಿದಿನ 4 ಎಂ.ಎಲ್.ಡಿಯಿಂದ 5 ಎಂ.ಎಲ್.ಡಿ ಕಾವೇರಿ ನೀರು ಅಗತ್ಯವಿದೆ. ನಾವು ವಿಶೇಷ ಪೈಪ್‌ಲೈನ್ ಮೂಲಕ 25 ಎಂ.ಎಲ್.ಡಿ ನೀರು ಪೂರೈಸುವ ಸ್ಥಿತಿಯಲ್ಲಿದ್ದೇವೆ ಎಂದರು.
ಮುಂದುವರೆದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನಾಲ್ಕು ದಿನಗಳ ಕಾಲ ನಿರಂತರ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಡಚಣೆಗಳು ಉಂಟಾದರೆ, ಬಿಡಬ್ಲ್ಯುಎಸ್ಎಸ್‌ಬಿ ತನ್ನ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಸಹ ವ್ಯವಸ್ಥೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗ್ಳೂರು ಏರ್‌ಶೋ ಇನ್ನೊಂದೇ ತಿಂಗಳು: ಭರದ ಸಿದ್ಧತೆ
ಇನ್ನು ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ವೈಮಾನಿಕ ಪ್ರದರ್ಶನ ನಡೆಯುವ ಯಲಹಂಕದವರೆಗೆ ಹೋಗಲು ಇರುವ ರಸ್ತೆಗಳನ್ನು ದುರಸ್ತಿ ಮಾಡಲು ಸರ್ಕಾರದಿಂದ ಸೂಚನೆ ನೀಡಲಾಗಿದೆ. ಜೊತೆಗೆ, ಅಗತ್ಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಮುಂದಾಗಿವೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನೀರಿನ ಪೂರೈಕೆಯ ಅಗತ್ಯವಿರುವ ವಿವಿಧ ಮಳಿಗೆಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ. ಬೇಡಿಕೆಯನ್ನು ಪೂರೈಸಲು ಬಿಡಬ್ಲ್ಯೂಎಸ್ಎಸ್ಬಿ ಸಜ್ಜಾಗಿದೆ ಎಂದು ಹೇಳಿದರು.
ಇನ್ನು ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಮೂಲವಾದ ಕಾವೇರಿ ಜಲಾಶಯಗಳು ಈ ವರ್ಷ ಭರ್ತಿಯಾಗಿದ್ದು, ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಒಂದು ವೇಳೆ ಪೂರೈಕೆಯಲ್ಲಿ ವ್ಯತ್ಯವಾದರೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ