ಕಾವೇರಿ ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ - ಮುಂದೇನು?

Kannadaprabha News   | Kannada Prabha
Published : Jul 31, 2026, 08:59 AM IST
Cauvery Water Dispute CWMA has now also upheld the CWRC s order what next

ಸಾರಾಂಶ

ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ ನೀರು ಬಿಡಬೇಕೆಂಬ ಸಿಡಬ್ಲ್ಯುಆರ್‌ಸಿ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ, ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದೆ.

ನಿನ್ನೆ ಏನಾಯ್ತು?

  • 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಜು.28ರಂದು ಸೂಚಿಸಿದ್ದ ಸಿಡಬ್ಲ್ಯುಆರ್‌ಸಿ
  • ಇದರ ವಿರುದ್ಧ ಕರ್ನಾಟಕ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ
  • ಎಲ್‌ನಿನೋದಿಂದ ಬರಗಾಲವಿದೆ. ಡ್ಯಾಂಗಳಲ್ಲಿ 30 ವರ್ಷಕ್ಕಿಂತ ಕಡಿಮೆ ನೀರಿದೆ ಎಂದು ಕರ್ನಾಟಕದ ವಾದ
  • ತ.ನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ. ಈ ಹಿಂದೆ ಅವರಿಗೆ ಸಾಕಷ್ಟು ನೀರು ಬಿಟ್ಟಿದ್ದೇವೆ ಎಂದ ರಾಜ್ಯ
  • 3500 ಕ್ಯುಸೆಕ್‌ ಬಿಡುಗಡೆಗೆ ಆದೇಶಿಸಿದ್ದರೂ ನೀರು ಬಿಳಿಗುಂಡ್ಲು ತಲುಪಲು 7000 ಕ್ಯುಸೆಕ್‌ ಬಿಡಬೇಕು: ಕರ್ನಾಟಕ
  • ಸಿಡಬ್ಲ್ಯುಆರ್‌ಸಿ ಆದೇಶಕ್ಕೆ 15 ದಿನ ತಡೆ ನೀಡಲು ಕರ್ನಾಟಕ ಸರ್ಕಾರ ವಾದ. ಹೆಚ್ಚು ನೀರಿಗೆ ಬೇಡಿಕೆ ಇಟ್ಟ ತ.ನಾಡು
  • ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶವನ್ನು ಎತ್ತಿ ಹಿಡಿದ ನಿರ್ವಹಣಾ ಪ್ರಾಧಿಕಾರ

ನವದೆಹಲಿ/ಬೆಂಗಳೂರು (ಜು.31): 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ಸಿಡಬ್ಲ್ಯುಆರ್‌ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಎತ್ತಿ ಹಿಡಿದಿದೆ.

ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಖಾಲಿ ಇದ್ದರೂ 15 ದಿನಗಳಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿಗೆ ಸಂಬಂಧಿಸಿದ ಎರಡು ಸಂಸ್ಥೆಗಳು ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದೆ.

ಭಾನುವಾರ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಹಿನ್ನಡೆ:

ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಜು.28ರಂದು ಸೂಚಿಸಿತ್ತು. ಇದರ ವಿರುದ್ಧ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ಗೆ ಮೇಲ್ಮನವಿ ಸಲ್ಲಿಸಿತ್ತು. ಒಳಹರಿವಿನ ಸಮಸ್ಯೆಯಿಂದಾಗಿ ತೀವ್ರ ಜಲಸಂಕಷ್ಟವಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ನೀರು ಬಿಡುಗಡೆ ಆದೇಶಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿತ್ತು. ಆದರೆ, ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಆದೇಶವನ್ನು ಎತ್ತಿ ಹಿಡಿಯಲಾಗಿದೆ.

ಸೂಪರ್‌ ಎಲ್‌ ನಿನೋ ಪರಿಣಾಮದಿಂದಾಗಿ ಕರ್ನಾಟಕದ ಜಲಾಶಯಗಳಲ್ಲಿ ಶೇ.65.65ರಷ್ಟು ಮಾತ್ರವೇ ನೀರು ಇದೆ. ಇದು 30 ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. ತಮಿಳುನಾಡಿಗೆ ಹಿಂಗಾರು ಮಳೆಯಾಗುವ ನಿರೀಕ್ಷೆ ಇದೆ. 3500 ಕ್ಯುಸೆಕ್‌ ಹರಿಸುವಂತೆ ಆದೇಶಿಸಿದ್ದರೂ, ಬಿಳಿಗುಂಡ್ಲುವಿಗೆ ನೀರು ತಲುಪಬೇಕೆಂದರೆ 7000 ಕ್ಯುಸೆಕ್‌ ಬಿಡುಗಡೆ ಮಾಡಬೇಕಾಗುತ್ತದೆ. 2027ರ ಜೂನ್‌ವರೆಗೂ ಕುಡಿಯುವ ನೀರಿನ ಅವಶ್ಯಕತೆಗೇ 40 ಟಿಎಂಸಿ ಬೇಕಾಗಿದೆ ಎಂದು ಸರ್ಕಾರ ವಾದಿಸಿತು. ಆದರೆ, 3500 ಕ್ಯುಸೆಕ್‌ ಬದಲಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ವಾದ ಮಂಡಿಸಿತು.

ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್‌ ಗುಪ್ತಾ ಹಾಜರಿದ್ದರು. ಅವರು ಸಭೆಯ ಬಳಿಕ ದೆಹಲಿಯಲ್ಲಿಯೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಾಧಿಕಾರದ ನಿರ್ದೇಶನವನ್ನು ತಿಳಿಸಿದರು.

ಕಾವೇರಿ ನೀರು ವಿವಾದ ಸರ್ವ ಪಕ್ಷ ಸಭೆ:

ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2)ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಕೇಸ್: ಜಾಮೀನು ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಇಂದು ಹೈಕೋರ್ಟ್‌ ತೀರ್ಪು
Karnataka News Live: ಕಾವೇರಿ ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ - ಮುಂದೇನು?