ತಮಿಳನಾಡಿನವರು ನೀರು ಕೇಳಿದ್ರು, ನೀವು ರಾಜ್ಯದ ಹಿತ ಮರೆತು ಕಾವೇರಿ ನೀರು ಹರಿಸಿಬಿಟ್ರಿ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೇನು ಎಂದು ರಾಜ್ಯಸರ್ಕಾರವನ್ನು ನಮೋ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು.
ಮಂಡ್ಯ (ಸೆ.29): ತಮಿಳನಾಡಿನವರು ನೀರು ಕೇಳಿದ್ರು, ನೀವು ರಾಜ್ಯದ ಹಿತ ಮರೆತು ಕಾವೇರಿ ನೀರು ಹರಿಸಿಬಿಟ್ರಿ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೇನು ಎಂದು ರಾಜ್ಯಸರ್ಕಾರವನ್ನು ನಮೋ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು.
ಇಂದು ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗಿ ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಲಿ ಎಂಬ ಕಾಂಗ್ರೆಸ್ ಆಗ್ರಹ ಪ್ರಸ್ತಾಪಿಸಿ ಚಕ್ರವರ್ತಿ ಸೂಲಿಬೆಲೆ ಟಾಂಗ್ ನೀಡಿದರು.
ನಾವು ನೀರು ಕೊಡೋಕೆ ಆಗಲ್ಲ ಎಂದಾಗ ಮಾತ್ರ ಕೇಂದ್ರ ಮಧ್ಯಸ್ಥಿಕೆಗೆ ಅವಕಾಶವಿರುತ್ತದೆ. ಆದರೆ ಕಾವೇರಿ ನೀರನ್ನು ನಿರಂತರ ಹರಿಸುತ್ತಿರೋದು ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ರಾಜ್ಯ ಸರ್ಕಾರ ಡಿಸ್ಮಿಸ್ ಆಗುತ್ತೆ: ಸಿಎಂ ಸಿದ್ದರಾಮಯ್ಯ
ತಮಿಳನಾಡಿನ ಸಿಎಂನೊಂದಿಗೆ ಸಖ್ಯ ಬೆಳೆಸಿಕೊಂಡು ವೈಯಕ್ತಿಕ, ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ನೀರನ್ನು ತಮಿಳನಾಡಿಗೆ ಹರಿಸಿದ್ದಾರೆ. ಈ ನಾಡಿನ ರೈತರ ಹಿತಕ್ಕಿಂತ ತಮಿಳನಾಡಿನೊಂದಿಗೆ ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿದೆ. ಹೀಗಾಗಿ ರೈತರ ವಿರೋಧದ ನಡುವೆಯೋ ಈ ರೀತಿ ನೀರು ಹರಿಸಿದ್ದಾರೆ. ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ ಎಂದು ಆಗ್ರಹಿಸುತ್ತಿರುವುದು ಎಷ್ಟು ಸರಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈಗ ಸಾಕಷ್ಟು ನೀರು ಹರಿದು ಹೋಗಿದೆ, ಮುಂದೆ ನೀರು ಹರಿಸೋಕೆ ಆಗಲ್ಲ ಎಂದು ಗಟ್ಟಿ ನಿರ್ಧಾರ ಮಾಡಬೇಕು. ಕಾವೇರಿ ನೀರಿನ ವಿಚಾರದಲ್ಲಿ ತಮಿಳನಾಡು ಅಗ್ರೇಸಿವ್ ಆಗಿ ಮಾತನಾಡುತ್ತೆ. ಯಾವಾಗಲೂ ನಮಗೆ ಅನ್ಯಾಯವಾಗಿದೆ ಎಂದು ಅಪೀಲು ಹೋಗುತ್ತೆ. ಆದರೆ ನಮ್ಮವರು ಇದಕ್ಕೆ ತದ್ವಿರುದ್ಧ.
ತಮಿಳುನಾಡಿನಂತೆ ನಮ್ಮವರು ಅಗ್ರೇಸಿವ್ ಆಗಿ ವಾದ ಮಾಡಲ್ಲ.
ಟ್ರಿಬ್ಯುನಲ್‌ನಲ್ಲಿ ಸಮರ್ಥವಾಗಿ ವಾದ ಮಾಡದಿದ್ರಿಂದ ಈ ರೀತಿ ಸಂಕಷ್ಟ ಎದುರಾಗುತ್ತಿದೆ. ನಾವು ಸಮರ್ಥವಾಗಿ ವಾದ ಮಾಡುವ ಅನಿವಾರ್ಯತೆ ಇದೆ ಎಂದರು.
ಈ ಹಿಂದೆ ಜಲ ವಿವಾದ ಆದಾಗ ಆಗಿನ ಪ್ರಧಾನಿ ವಾಜಪೇಯಿ ಅವರು ಮಧ್ಯಪ್ರವೇಶ ಮಾಡಿದಹಾಗೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎಂಬ ನಿಲುವು ಒಪ್ಪಿಕೊಳ್ಳುತ್ತೇನೆ. ಎರಡು ಸರ್ಕಾರಗಳಿಗೆ ಯಾವುದೇ ಸಮಸ್ಯೆ ಇಲ್ಲ. ಎರಡು ಸರ್ಕಾರಗಳ ಮೈತ್ರಿ ತುಂಬಾ ಚನ್ನಾಗಿ ಇದೆ.
ಕೇಂದ್ರ ಸರ್ಕಾರ ಬಂದು ನೀರು ಬಿಡಬೇಡಿ ಅಂತಾ ಕರ್ನಾಟಕಕ್ಕೆ, ನೀರು ಕೇಳಬೇಡಿ ಅಂತಾ ತಮಿಳುನಾಡಿಗೆ ಅನ್ನೋಕೆ ಆಗಲ್ಲ. ಆದರೆ ಒಂದು ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದಾಗ ಕೇಂದ್ರ ಮಧ್ಯಸ್ಥಿಕೆ ವಹಿಸಬಹುದು ಎಂದರು.
ಕನ್ನಡಪರ ಸಂಘಟನೆಗಳ ಪ್ರತಿಭಟನೆ: ತಮಿಳನಾಡು ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ
ನಮಗೆ ಅನ್ಯಾಯವಾಗಿದೆ. ಹೀಗಿದ್ದೂ ಕರ್ನಾಟಕ ಸರ್ಕಾರ ತಮಿಳನಾಡಿಗೆ ಅವರು ಕೇಳಿದ್ದಕ್ಕಿಂತ ಹೆಚ್ಚು ನೀರು ಬಿಡುತ್ತಿದೆ ನಾವು ನೀರು ಕೊಡೋಕೆ ಆಗಲ್ಲ. ಪ್ರಾಧಿಕಾರದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ದೃಢವಾಗಿ ಹೇಳಲಿ. ರಾಜ್ಯದಲ್ಲಿನ ವಾಸ್ತವ ಸ್ಥಿತಿ ಏನಿದೆಯೆಂದು ಮನವರಿಕೆ ಮಾಡಿಕೊಡಲಿ. ಆಗ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರ ಇದ್ಯಾವುದನ್ನೂ ಮಾಡದೆ ಕಾವೇರಿ ನೀರು ನಿರಂತರವಾಗಿ ಹರಿಸುತ್ತ ಬಂದಿದೆ. ಇದೀಗ ಮತ್ತೆ ನೀರು ಹರಿಸುವಂತೆ ಆದೇಶ ಬಂದಿರುವುದು ದುರದೃಷ್ಟವಾಗಿದೆ ಎಂದರು.