ಚುನಾವಣೆ ನಂತರ ಅರಣ್ಯ ಸಿಬ್ಬಂದಿಗೆ ಕ್ಯಾಂಟೀನ್‌ ವ್ಯವಸ್ಥೆ

By Kannadaprabha NewsFirst Published Apr 12, 2024, 12:25 PM IST
Highlights

ಕಾಡು-ಮೇಡು ಅಲೆಯುತ್ತಾ ಅರಣ್ಯ, ವನ್ಯಜೀವಿ ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟ ಎನ್ನುವಂತಾಗಿದೆ. ಹೀಗಾಗಿಯೇ ಕಡಿಮೆ ಬೆಲೆಯಲ್ಲಿ ಪಡಿತರ ಸಿಗಲು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ‘ಅರಣ್ಯ ಕ್ಯಾಂಟೀನ್‌’ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸಲಾಗುತ್ತಿತ್ತು. 

ಗಿರೀಶ್‌ ಗರಗ

ಬೆಂಗಳೂರು(ಏ.12):  ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಬಹುದಿನದ ಬೇಡಿಕೆಯಾದ ‘ಅರಣ್ಯ ಕ್ಯಾಂಟೀನ್‌’ ಸ್ಥಾಪನೆಗೆ ಇಲಾಖೆ ಮುಂದಾಗಿದ್ದು, ಚುನಾವಣೆ ಮುಗಿದ ನಂತರ ಆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಕ್ಯಾಂಟೀನ್‌ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಕಾಡು-ಮೇಡು ಅಲೆಯುತ್ತಾ ಅರಣ್ಯ, ವನ್ಯಜೀವಿ ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟ ಎನ್ನುವಂತಾಗಿದೆ. ಹೀಗಾಗಿಯೇ ಕಡಿಮೆ ಬೆಲೆಯಲ್ಲಿ ಪಡಿತರ ಸಿಗಲು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ‘ಅರಣ್ಯ ಕ್ಯಾಂಟೀನ್‌’ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದಷ್ಟೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ ಸುಭಾಷ್‌ ಮಾಲ್ಖೆಡೆ ಅವರು ಸೇನೆ ಮತ್ತು ಪೊಲೀಸ್‌ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಾಗಿ ಅರಣ್ಯ ಕ್ಯಾಂಟೀನ್‌ ಸ್ಥಾಪಿಸುವಂತೆ ಶಿಫಾರಸು ಮಾಡಿದ್ದರು.

ತಮಿಳುನಾಡು ಮಾದರಿಯಲ್ಲಿ ಅನುಷ್ಠಾನ?

ತಮಿಳುನಾಡಿನಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ ತಮಿಳುನಾಡು ಪೊಲೀಸ್‌ ಅಕಾಡೆಮಿಯಿಂದ ರಾಜ್ಯದೆಲ್ಲೆಡೆ 56 ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ. ಈ ಕ್ಯಾಂಟೀನ್‌ಗಳಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಬಂಧಿಕಾನೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಗೃಹ ಬಳಕೆ, ದಿನಸಿ ವಸ್ತುಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚಿನ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಗೃಹ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ 34 ಪೊಲೀಸ್‌ ಕ್ಯಾಂಟೀನ್‌ಗಳು

ರಾಜ್ಯದ 14 ಸಾವಿರ ಪೊಲೀಸ್‌ ಸಿಬ್ಬಂದಿಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 4 ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಪೊಲೀಸ್‌ ಕ್ಯಾಂಟೀನ್‌ಗಳಿವೆ. ಈ ಕ್ಯಾಂಟೀನ್‌ಗಳಲ್ಲಿ ದಿನಸಿ ಸಾಮಗ್ರಿಗಳು, ಎಲೆಕ್ಟ್ರಿಕ್‌ ವಸ್ತುಗಳು, ವಸ್ತ್ರಗಳು, ಪಾದರಕ್ಷೆ, ಪಾತ್ರೆ ಮುಂತಾದವುಗಳನ್ನು ಶೇ.30ರವರೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಆ ಕ್ಯಾಂಟೀನ್‌ಗಳಲ್ಲಿ ರಾಜ್ಯದ ಅರಣ್ಯ ಇಲಾಖೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿ, ಅಧಿಕಾರಿಗಳಿಗೂ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ.

10 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ, ಅಧಿಕಾರಿಗಳಿಗೆ ಅನುಕೂಲ

ರಾಜ್ಯ ಅರಣ್ಯ ಇಲಾಖೆಗೆ 14,766 ಹುದ್ದೆಗಳನ್ನು ಮಂಜೂರಾಗಿದ್ದು, ಸದ್ಯ 8,551 ಹುದ್ದೆ ಭರ್ತಿ ಮಾಡಲಾಗಿದೆ. ಅದರ ಜತೆಗೆ 2 ಸಾವಿರಕ್ಕೂ ಹೆಚ್ಚಿನ ಹೊರಗುತ್ತಿಗೆ ನೌಕರರಿದ್ದಾರೆ. ಪೊಲೀಸ್‌ ಕ್ಯಾಂಟೀನ್‌ ಬಳಕೆಗೆ ಅವಕಾಶ ನೀಡುವುದರಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ವಸ್ತುಗಳು ಸಿಗುವಂತಾಗಲಿದೆ. ಪ್ರಮುಖವಾಗಿ ಅರಣ್ಯ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಅರಣ್ಯ ಕ್ಯಾಂಟೀನ್‌ಗೆ ಆಗ್ರಹಿಸಿತ್ತು ಕನ್ನಡಪ್ರಭ

ಅರಣ್ಯ ಇಲಾಖೆ ಸಿಬ್ಬಂದಿ ಸಮಸ್ಯೆ ಕುರಿತಂತೆ ಕಳೆದ ಜನವರಿಯಲ್ಲಿ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ ಹೆಸರಿನಲ್ಲಿ ಸರಣಿ ವರದಿ ಪ್ರಕಟಿಸಿದ್ದ ಕನ್ನಡಪ್ರಭ, ಅರಣ್ಯ ಸಿಬ್ಬಂದಿಗೆ ಅರಣ್ಯ ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿತ್ತು. ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ಸಮಸ್ಯೆ, ಕ್ಯಾಂಟೀನ್‌ ಸ್ಥಾಪನೆಯಿಂದ ಅವರಿಗಾಗುವ ಅನುಕೂಲದ ಬಗ್ಗೆ ಜ.10ರಂದು ವಿವರವಾದ ವರದಿ ಪ್ರಕಟಿಸಿತ್ತು.

ಅರಣ್ಯ ಸಿಬ್ಬಂದಿಗೆ ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಪೊಲೀಸ್‌ ಕ್ಯಾಂಟೀನ್‌ ಮಾದರಿ ಅರಣ್ಯ ಕ್ಯಾಂಟೀನ್‌ ಸ್ಥಾಪಿಸುವ ಕುರಿತ ಪ್ರಸ್ತಾವನೆಯಿದೆ. ಈ ಬಗ್ಗೆ ಚರ್ಚೆಯನ್ನೂ ನಡೆಸಲಾಗಿದೆ. ಲೋಕಸಭೆ ಚುನಾವಣೆಯಿರುವ ಕಾರಣ ಸದ್ಯಕ್ಕೆ ಆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಚುನಾವಣಾ ನೀತಿ ಸಂಹಿತೆ ಮುಕ್ತಾಯದ ನಂತರ ಅರಣ್ಯ ಕ್ಯಾಂಟೀನ್‌ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ತಿಳಿಸಿದ್ದಾರೆ. 

click me!