
ಬೆಂಗಳೂರು (ಡಿ.24): ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಬಂಧನದ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪಿ ಪರ ವಕೀಲರು ಹಾಗೂ ಸಿಐಡಿ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿ ಬಳಿಕ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಬೈರತಿ ಪರ ವಾದ: ಇದಕ್ಕೂ ಮುನ್ನ ಆರೋಪಿ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಈ ಕೊಲೆ ಪ್ರಕರಣದಲ್ಲಿ 18 ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯಾಗಿದೆ. ಇದರಲ್ಲಿ ಏಳರಿಂದ ಎಂಟು ಆರೋಪಿಗಳು ಕೊಲೆಯಾದ ವ್ಯಕ್ತಿಗೆ ಪರಿಚಿತರು ಇದ್ದಾರೆ. ಆದರೆ, ಬೈರತಿ ಬಸವರಾಜು ಅವರನ್ನು ಈ ಪ್ರಕರಣದಲ್ಲಿ ಐದನೇ ಆರೋಪಿ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊಲೆಯಾದ ಬಿಕ್ಲು ಶಿವನ ತಾಯಿ ಸಹ ಬೈರತಿ ಬಸವರಾಜು ವಿರುದ್ಧ ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಅನುಮಾನದ ಮೇಲೆ ಎಫ್ಐಆರ್‌ನಲ್ಲಿ ಹೆಸರು ಸೇರಿದ್ದಾರೆ. ಈ ಕೊಲೆಯಲ್ಲಿ ಬೈರತಿ ಬಸವರಾಜು ಅವರ ಪಾತ್ರವಿಲ್ಲ ಎಂದು ಹೇಳಿದರು.
ತಮ್ಮ ಕಕ್ಷಿದಾರ ಬೈರತಿ ಬಸವರಾಜು ಅವರು ಯಾವುದೇ ರೀತಿಯ ಸಂಚು ರೂಪಿಸಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಕೊಲೆ ಬಳಿಕವೂ ಯಾವುದೇ ಪಾತ್ರವಿಲ್ಲ. ಐದು ತಿಂಗಳಿಂದ ಸಿಐಡಿ ಅಧಿಕಾರಿಗಳ ಸುಮ್ಮನೆ ಇದ್ದು, ಈಗ ತಮ್ಮ ಕಕ್ಷಿದಾರರು ಸಾಕ್ಷ್ಯ ನಾಶ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ತಮ್ಮ ಕಕ್ಷಿದಾರರು ಸ್ಪೀಕರ್ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ನೈಜ ಆರೋಪಿಗಳ ಬಂಧನವಾಗಬೇಕು. ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 19 ರಿಮ್ಯಾಂಡ್ ಅಪ್ಲಿಕೇಶನ್‌ಗಳಲ್ಲಿ ಎಲ್ಲೂ ಬೈರತಿ ಬಸವರಾಜು ವಿರುದ್ಧ ಆರೋಪಗಳಿಲ್ಲ. ಈಗ ಬಂಧನ ಮಾಡಿ ವಿಚಾರಣೆ ಮಾಡಬೇಕು ಎಂದು ಸಿಐಡಿ ಮುಂದಾಗಿದೆ. ಬಂಧನದ ಅಗತ್ಯವಿಲ್ಲ. ಹೀಗಾಗಿ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಸರ್ಕಾರದ ವಾದವೇನು?: ಸಿಐಡಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಅಶೋಕ್ ನಾಯ್ಕ್ ವಾದ ಮಂಡಿಸಿ, ಆರೋಪಿ ಬೈರತಿ ಬಸವರಾಜು ಪ್ರಕರಣದ ವಿಚಾರಣೆಗೆ ಹಾಜರಾಗುತ್ತಿಲ್ಲ. ಜನರಿಂದ ಚುನಾಯಿತರಾದ ಶಾಸಕ ಬೆಳಗಾವಿ ಅಧಿವೇಶನಕ್ಕೆ ಹಾಜರಾಗುತ್ತಾರೆ. ಸಿಐಡಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ. ಹೈಕೋರ್ಟ್ ತೀರ್ಪು ನೀಡುವ ಹಿಂದಿನ ದಿನವೇ ಆರೋಪಿ ಪರಾರಿಯಾಗಿದ್ದಾರೆ. ಇಷ್ಟು ದಿನ ಹೈಕೋರ್ಟ್ ರಕ್ಷಣೆ ಇದ್ದುದ್ದರಿಂದ ಬಂಧನ ಮಾಡಿರಲಿಲ್ಲ. ಈಗಲೂ ಆರೋಪಿ ತಲೆಮರೆಸಿಕೊಂಡಿದ್ದು, ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ 1ನೇ ಆರೋಪಿ ಜಗದೀಶ್ ವಿರುದ್ಧ 16 ಅಪರಾಧ ಪ್ರಕರಣಗಳಿವೆ. ಇಂತಹ ವ್ಯಕ್ತಿಯ ಜತೆಗೆ ಬೈರತಿ ಬಸವರಾಜು ಸಂಪರ್ಕದಲ್ಲಿದ್ದಾರೆ. ಆರೋಪಿ ಜಗದೀಶ್ ಹಾಗೂ ಇತರೆ ಆರೋಪಿಗಳ ಜತೆಗೆ ಕುಂಭ ಮೇಳಕ್ಕೆ ಹೋಗಿದ್ದರು. ಬೈರತಿ ಬಸವರಾಜು ಅವರು ಶಾಸಕರಾಗಿದ್ದರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾರೆ. ಇವರ ವಿರುದ್ಧ ಕೊಲೆಯಾದ ಬಿಕ್ಲು ಶಿವ ದೂರು ಸಹ ನೀಡಿದ್ದ. ಈತನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳಾದ ಬೈರತಿ ಬಸವರಾಜು, ಜಗದೀಶ್, ಅಜಿತ್ ಹಾಗೂ ಇತರರು ಕುಂಭಮೇಳಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಗೆ ಹೋಗುವ ಮುನ್ನ ಬಿಕ್ಲು ಶಿವನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಹೇಳಿದರು.
ಕೊಲೆ ಬಳಿಕ 1ನೇ ಆರೋಪಿ ಜಗದೀಶ್, 5ನೇ ಆರೋಪಿ ಬೈರತಿ ಬಸವರಾಜುಗೆ ಮಾಹಿತಿ ನೀಡಿ ವಿದೇಶಕ್ಕೆ ಪರಾರಿಯಾಗಿದ್ದ. ಇದಕ್ಕೂ ಮುನ್ನ ಇಬ್ಬರು ಆರೋಪಿಗಳು ಒಂದೇ ಕಡೆ ಇರುವ ಬಗ್ಗೆ ನಮ್ಮ ಬಳಿ ಸಾಕ್ಷಿಯಿದೆ. ಈ ಪ್ರಕರಣದ 1, 5, 20ನೇ ಆರೋಪಿಗಳು ಹೊರಗೆ ಬರುವುದಿಲ್ಲ. ಮಾಲೂರು, ಕೋಲಾರ ಭಾಗದ ಇತರೆ ಆರೋಪಿಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಹೀಗಾಗಿ ಆರೋಪಿ ಬೈರತಿ ಬಸವರಾಜುಗೆ ಜಾಮೀನು ಮಂಜೂರು ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ