ವಾರದಲ್ಲಿ ಸಿಎಂ ಪ್ಯಾಕೇಜ್ ಲಭ್ಯ, ಅರ್ಜಿ ಹಾಕಲು 1-2 ದಿನದಲ್ಲಿ ಲಿಂಕ್!

By Kannadaprabha NewsFirst Published May 17, 2020, 10:25 AM IST
Highlights

ಸಿಎಂ ಪ್ಯಾಕೇಜ್‌ ಹಂಚಿಕೆಗೆ ಚಾಲನೆ|  ಫಲಾನುಭವಿಗಳ ಮಾಹಿತಿ ಸಂಗ್ರಹ, ವಾರದಲ್ಲಿ ವೆಬ್‌ಸೈಟಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ| ಚಾಲಕರು, ಹೂವು ರೈತರು, ಕ್ಷೌರಿಕರು, ಅಗಸರು, ನೇಕಾರರಿಗೆ ಪ್ಯಾಕೇಜ್‌

ಬೆಂಗಳೂರು(ಮೇ.17): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೊದಲ ಹಂತದಲ್ಲಿ ಘೋಷಿಸಿದ್ದ 1,610 ಕೋಟಿ ರು. ಪ್ಯಾಕೇಜ್‌ಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಫಲಾನುಭವಿಗಳ ಮಾಹಿತಿ ಸಂಗ್ರಹ ಹಾಗೂ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದು, ವಾರದೊಳಗಾಗಿ ಎಲ್ಲಾ ಫಲಾನುಭವಿಗಳಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ವೇದಿಕೆ ಕಲ್ಪಿಸಲು ಸರ್ಕಾರ ಸಜ್ಜಾಗಿದೆ.

"

ಮುಖ್ಯಮಂತ್ರಿಗಳು ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ವಿವಿಧ ವರ್ಗದವರಿಗೆ ಮೇ 6ರಂದು ಪರಿಹಾರ ಪ್ಯಾಕೇಜ್‌ ಘೋಷಿಸಿದ್ದರು. ಇದರಂತೆ 11,687 ಹೆಕ್ಟೇರ್‌ ಪ್ರದೇಶದಲ್ಲಿ ಹೂವು ಬೆಳೆದಿರುವ ಬೆಳೆಗಾರರಿಗೆ ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರು., 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರು., 60 ಸಾವಿರ ಅಗಸರು ಹಾಗೂ 2.30 ಲಕ್ಷ ಕ್ಷೌರಿಕರಿಗೆ ತಲಾ 5 ಸಾವಿರ ರು., 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರು. ಪರಿಹಾರ ನೇರವಾಗಿ ಖಾತೆಗೆ ವರ್ಗಾಯಿಸುವುದಾಗಿ ಹೇಳಲಾಗಿತ್ತು.

1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಉಳಿದಂತೆ 54 ಸಾವಿರ ಕೈ ಮಗ್ಗ ನೇಕಾರರ 30 ಜಿಲ್ಲೆಗಳ ಜಿಲ್ಲಾವಾರು ಪಟ್ಟಿಯನ್ನು ಕೈ ಮಗ್ಗ ಮತ್ತು ಜವಳಿ ಇಲಾಖೆ ಈಗಾಗಲೇ ಸರ್ಕಾರಕ್ಕೆ ಕಳುಹಿಸಿದೆ. ಪರಿಹಾರ ಸಿದ್ಧತೆಗೂ ಮೊದಲು 42 ಸಾವಿರದಷ್ಟಿದ್ದ ಕೈ ಮಗ್ಗಗಳ ಪರಿಷ್ಕೃತ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಲಾಗಿದೆ. ಸರ್ಕಾರವು ನೇರವಾಗಿ ನೇಕಾರರ ಖಾತೆಗೆ ಹಣ ಜಮೆ ಮಾಡಲು ಅನುವಾಗುವಂತೆ ಜಿಲ್ಲಾವಾರು ನೇಕಾರರ ವೈಯಕ್ತಿಕ ವಿವರ ಸಂಗ್ರಹಿಸಲಾಗುತ್ತಿದೆ. ಇದರ ಆಧಾರದ ಮೇಲೆ ಸರ್ಕಾರವು ನೇರವಾಗಿ ಅವರ ಖಾತೆಗೆ ಹಣಹಾಕಬಹುದು ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇದೇ ವೇಳೆ ನೀಡಿದ್ದ ಭರವಸೆಯಂತೆ ಜೂ.30 ರವರೆಗೆ ವಿದ್ಯುತ್‌ ಬಿಲ್‌ ಪಾವತಿಸದಿದ್ದರೂ ಸಂಪರ್ಕ ಕಡಿತ ಮಾಡುವುದಿಲ್ಲ ಎಂದು ಇಂಧನ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ.

ಹೂವು ಬೆಳೆಗಾರರ ಮಾಹಿತಿ ಸಂಗ್ರಹಿಸಿ:

ಇನ್ನು ಹೂವು ಬೆಳೆಗಾರರಿಗೆ ಹೆಕ್ಟೇರಿಗೆ ತಲಾ ಗರಿಷ್ಠ 25 ಸಾವಿರ ರು.ಗಳಂತೆ ಪರಿಹಾರ ಘೋಷಿಸಲಾಗಿದೆ. ಅಂದಾಜು 11,687 ಹೆಕ್ಟೇರ್‌ ಹೂವು ಬೆಳೆ ಇರುವುದಾಗಿ ತೋಟಗಾರಿಕೆ ಇಲಾಖೆಯಿಂದ ವರದಿ ನೀಡಿದ್ದೆವು. ಈ ಬಗ್ಗೆ ವಿವರವಾಗಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಆಯ್ಕೆ ನಡೆಸಿ ಜಿಲ್ಲಾವಾರು ಪಟ್ಟಿಸಿದ್ಧಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತೋಟಗಾರಿಕೆ ಇಲಾಖೆ ಸೂಚನೆ ನೀಡಿದೆ.

ಆಟೋ, ಕ್ಯಾಬ್ ಚಾಲಕರು 5000 ರೂ. ಪಡೆಯುವುದು ಹೇಗೆ? ಯಾವೆಲ್ಲಾ ಡ್ರೈವರ್ಸ್‌ಗೆ ಅನ್ವಯ?

ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ. ವೆಂಕಟೇಶ್‌, ಆಯಾ ಜಿಲ್ಲಾಧಿಕಾರಿಗಳಿಂದ ಅರ್ಹ ಫಲಾನುಭವಿಗಳ ಪಟ್ಟಿಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಪಟ್ಟಿಇಲಾಖೆಗೆ ಬಂದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ನಿಯಮಾವಳಿ ರೂಪಿಸಲಾಗುವುದು. ಬಳಿಕ ಅರ್ಹರ ಖಾತೆಗೆ ನೇರವಾಗಿ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.

ಇನ್ನು ಪ್ರಾಥಮಿಕ ಮಾಹಿತಿಯಂತೆ 60 ಸಾವಿರ ಅಗಸರು ಹಾಗೂ 2.30 ಲಕ್ಷ ಕ್ಷೌರಿಕರಿಗೆ ತಲಾ 5 ಸಾವಿರ ರು. ಪರಿಹಾರ ಘೋಷಿಸಲಾಗಿದೆ. ಇವರ ವೈಯಕ್ತಿಕ ವಿವರ ಕಲೆ ಹಾಕುವ ಹೊಣೆಯನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದು, ಕೊರೋನಾ ನಿಯಂತ್ರಣ ಮತ್ತಿತರ ಚಟುವಟಿಕೆಯಲ್ಲಿ ಹೈರಾಣಾಗಿರುವ ಜಿಲ್ಲಾಡಳಿತಕ್ಕೆ ಇದು ಹೊಸ ತಲೆನೋವಾಗಿ ಪರಿಣಮಿಸಿದೆ. ಅಗಸರು, ಕ್ಷೌರಿಕರ ಇತ್ತೀಚಿನ ವರದಿ ಜಿಲ್ಲಾಡಳಿತದ ಬಳಿ ಇಲ್ಲ. ಇನ್ನು ಕ್ಷೌರಿಕರ ವಿವರಗಳನ್ನು ಸಂಘ-ಸಂಸ್ಥೆಗಳ ಮೂಲಕ ಹಾಗೂ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಕಲೆ ಹಾಕಬಹುದಾದರೂ ಅಗಸರ ಮಾಹಿತಿ ಕ್ರೂಢೀಕರಣ ಕಷ್ಟವಾಗಲಿದೆ. ಆದರೂ ಒಂದು ವಾರದೊಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಂಕಷ್ಟದ ನಡುವೆ ದೇಶಕ್ಕೇ ಮಾದರಿ ಆಗುವ ಕೆಲಸ: ಬಿಎಸ್‌ವೈ ಹೊಗಳಿದ ಸಿದ್ದು, ಡಿಕೆಶಿ!

ಚಾಲಕರ ಪರಿಹಾರಕ್ಕೆ 20 ಕೋಟಿ ಮಂಜೂರು:

ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಒದಗಿಸಲು ಸಾರಿಗೆ ಇಲಾಖೆ 7.75 ಲಕ್ಷ ಅರ್ಹ ಫಲಾನುಭವಿಗಳ ಪಟ್ಟಿಸಿದ್ಧಪಡಿಸಿದ್ದು, ಇದರ ಆಧಾರದ ಮೇಲೆ ಹಣಕಾಸು ಇಲಾಖೆ ಈಗಾಗಲೇ 20 ಕೋಟಿ ರು. ಹಣ ಬಳಕೆಗೆ ಮಂಜೂರಾತಿ ನೀಡಿದೆ. ಹೀಗಾಗಿ ಅರ್ಹ ಫಲಾನುಭವಿಗಳ ಆಯ್ಕೆ ಹಾಗೂ ಪರಿಹಾರ ಸಂದಾಯ ಮಾಡುವ ಕುರಿತು ನಿಯಮಾವಳಿ ರೂಪಿಸಿ ಸಾರಿಗೆ ಇಲಾಖೆ ಆಯುಕ್ತರು ಶನಿವಾರ ಆದೇಶ ಹೊರಡಿಸಿದ್ದಾರೆ.

ಇದರಂತೆ ಸದ್ಯದಲ್ಲೇ https://sevasindhu.karnataka.gov.in/ (ಸೇವಾ ಸಿಂಧು) ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಕೆಗೆ ಆಯ್ಕೆ ನೀಡಲಾಗುವುದು.

ಯಾವ ಆಟೋ/ ಟ್ಯಾಕ್ಸಿ ಚಾಲಕರು ಅರ್ಹರು?:

- ಮಾ.24 ರ ಒಳಗಾಗಿ ಚಾಲನೆ ಪರವಾನಗಿ (ಹಳದಿ ಬ್ಯಾಡ್ಜ್‌), ಎಫ್‌ಸಿ (ವಾಹನ ಸುಸ್ಥಿತಿ ಪ್ರಮಾಣಪತ್ರ) ಹೊಂದಿರುವ ವಾಹನಗಳಿಗೆ ಮಾತ್ರ ಅನ್ವಯ.

- ಸೇವಾ ಸಿಂಧು ವೆಬ್‌ಸೈಟ್‌ ಪೋರ್ಟಲ್‌ ಮೂಲಕವೇ ಅರ್ಜಿ ಹಾಕಬೇಕು (ವೆಬ್‌ಸೈಟ್‌ನಲ್ಲಿ ಇನ್ನೂ ಅವಕಾಶ ಕಲ್ಪಿಸಿಲ್ಲ)

- ಅರ್ಜಿದಾರರ ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆ ಪರಿಶೀಲಿಸಿ ಪರಿಹಾರ

- ಫಲಾನುಭವಿ ಖಾತೆಗೆ ನೇರವಾಗಿ ಪರಿಹಾರ ಜಮೆ ಮಾಡಲಾಗುವುದು (ಡಿಬಿಟಿ)

- ಒಂದಕ್ಕಿಂತ ಹೆಚ್ಚು ಆಟೋ, ಟ್ಯಾಕ್ಸಿ ಇರುವ ಮಾಲೀಕರು ದುರ್ಬಳಕೆ ಮಾಡಿಕೊಳ್ಳದಂತೆ ವಾಹನ ಸಂಖ್ಯೆ ಹಾಗೂ ಡಿಎಲ್‌ ಪರಿಶೀಲಿಸಿಯೇ ಪರಿಹಾರ ನೀಡಬೇಕು.

50000 ಕೋಟಿ ರು. ಪ್ಯಾಕೇಜ್‌ಗೆ ಬೇಡಿಕೆ: ಸಿಎಂ ಭೇಟಿಯಾದ ಪ್ರತಿಪಕ್ಷಗಳ ನಿಯೋಗ!

ಏನೇನು ಪ್ರಕ್ರಿಯೆ?

ಜಿಲ್ಲಾವಾರು 54 ಸಾವಿರ ನೇಕಾರರ ಪಟ್ಟಿಸಿದ್ಧ

ಅರ್ಹ ಹೂ ಬೆಳೆಗಾರರ ಪಟ್ಟಿಸಿದ್ಧ ಹೊಣೆ ಡಿಸಿಗೆ

ವಾರದಲ್ಲಿ ಅಗಸರು, ಕ್ಷೌರಿಕರ ಮಾಹಿತಿ ಸಂಗ್ರಹ

ಚಾಲಕರ ಆಯ್ಕೆಗೆ ಸಾರಿಗೆ ಇಲಾಖೆ ನಿಯಮಾವಳಿ ಸಿದ್ಧ

"

click me!