
ಬೆಂಗಳೂರು: ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಭ್ರಷ್ಟಾಚಾರ ಕುರಿತ ಟ್ವೀಟ್ ಕರ್ನಾಟಕದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಆರೋಪವನ್ನು ಅವರು ಹೊರಹಾಕಿದ್ದು, ಈ ಹೇಳಿಕೆ ವಿಪಕ್ಷಗಳಿಗೆ ತೀವ್ರ ದಾಳಿಯ ಆಯುಧವಾಗಿ ಪರಿಣಮಿಸಿದೆ. ಸರ್ಕಾರವು ಈ ಆರೋಪಗಳನ್ನು ತೀವ್ರವಾಗಿ ತಳ್ಳಿಹಾಕಿದರೂ, ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈಗ ಎರಡುವರೆ ವರ್ಷಗಳು ಆಗಿದೆ. ಈ ಅವಧಿಯಲ್ಲಿ ಸರ್ಕಾರವು “ಭ್ರಷ್ಟಾಚಾರರಹಿತ ಆಡಳಿತ” ನೀಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಘೋಷಿಸಿದ್ದಾರೆ. ಆದರೆ, ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್ ಈ ಘೋಷಣೆಗಳಿಗೆ ಸವಾಲು ಎಸೆದಂತಾಗಿದೆ.
ಅವರು ತಮ್ಮ ಪೋಸ್ಟ್‌ನಲ್ಲಿ ರಾಜ್ಯದ 12 ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಪ್ರಮಾಣವನ್ನು ಶೇಕಡಾವಾರು ವಿವರಿಸುವ ಮೂಲಕ, ಸರ್ಕಾರದ ನೈತಿಕತೆಯ ಮೇಲೆ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಈ ವಿಭಾಗಗಳಲ್ಲಿ ಅಬಕಾರಿ, ಸಾರಿಗೆ, ಪೊಲೀಸ್, ಜಿಎಸ್‌ಟಿ ಹಾಗೂ ನೋಂದಣಿ ಇಲಾಖೆಗಳು ಸೇರಿವೆ.
ಈ ಅಂಕಿ-ಅಂಶಗಳು ಟ್ವೀಟ್ ಮೂಲಕ ವೈರಲ್ ಆಗುತ್ತಿದ್ದಂತೆ, ರಾಜ್ಯದ ರಾಜಕೀಯ ವಲಯದಲ್ಲಿ ಭ್ರಷ್ಟಾಚಾರದ ಚರ್ಚೆ ಮತ್ತೆ ಮರುಕಳಿಸಿತು.
ಈ ಹೇಳಿಕೆ ವಿಪಕ್ಷಗಳಿಗೆ ಸಿಕ್ಕ ಸುವರ್ಣಾವಕಾಶವಾಗಿ ಪರಿಣಮಿಸಿತು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ತೀವ್ರ ಟೀಕೆಗಳನ್ನು ಹೊರಹಾಕಿ, “ಪಾರದರ್ಶಕ ಆಡಳಿತ ನೀಡುತ್ತೇವೆ” ಎಂಬ ಸರ್ಕಾರದ ದಾವೆ ಕೇವಲ ನುಡಿಮುತ್ತು ಎಂದು ಆರೋಪಿಸಿದರು.
ಉದ್ಯಮಿ ಮೋಹನ್ ದಾಸ್ ಪೈ ಅವರ ಹೇಳಿಕೆಗೆ ಮೊದಲಿಗರಾಗಿ ಪ್ರತಿಕ್ರಿಯಿಸಿದವರು ಸಚಿವ ಈಶ್ವರ ಖಂಡ್ರೆ. ಅವರು ಪೈ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇವರು ಬಿಜೆಪಿ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎನ್ನುವ ದಾಖಲೆಗಳಿದ್ದರೆ ಸಿಎಂ ಅವರಿಗೆ ನೀಡಲಿ. ನಾವು ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತಿದ್ದೇವೆ. ಬಿಜೆಪಿಯವರು ಕುಮ್ಮಕ್ಕು ಕೊಡಲು ಇವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಪತ್ರಕರ್ತರಿಗೆ ಹೇಳಿದರು.
ಶಾಸಕ ನರೇಂದ್ರ ಸ್ವಾಮಿ ಅವರು ಕೂಡ ಮೋಹನ್ ದಾಸ್ ಪೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರು ಪೈ ಅವರನ್ನು “ವಿದ್ಯಾವಂತ ಮತ್ತು ಸಂಭಾವಿತ ವ್ಯಕ್ತಿ ಪ್ರಚೋದನಾತ್ಮಕ ಹೇಳಿಕೆ ನೀಡುವುದಕ್ಕಿಂತ ಸಮಸ್ಯೆ ಬಗೆಹರಿಸಲು ಮುಂದಾಗುವುದು ಒಳ್ಳೆಯದು. ಯಾವುದೇ ಸಮಸ್ಯೆ ಇದ್ದರೆ ಸರ್ಕಾರದ ಗಮನಕ್ಕೆ ತರಲಿ, ನಾವು ಸರಿಪಡಿಸಲು ಸಿದ್ಧರಾಗಿದ್ದೇವೆ. ಕೇವಲ ಸುದ್ದಿಗೋಸ್ಕರ ಅಥವಾ ಪ್ರಚಾರಕ್ಕಾಗಿಯೇ ಮಾತನಾಡುವುದು ಅವರಂತ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಉದ್ಯಮಿ ಮೋಹನ್ ದಾಸ್ ಪೈ ಅವರ ಭ್ರಷ್ಟಾಚಾರ ಆರೋಪವು ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಸರ್ಕಾರವು ಈ ಆರೋಪಗಳನ್ನು ತಳ್ಳಿಹಾಕಿದರೂ, ವಿರೋಧ ಪಕ್ಷಗಳು ಈ ಹೇಳಿಕೆಯನ್ನು ಕಾಂಗ್ರೆಸ್ ವಿರುದ್ಧ ಪ್ರಚಾರ ಶಸ್ತ್ರವಾಗಿ ಬಳಸಲು ಸಜ್ಜಾಗಿವೆ. ಮುಂದಿನ ದಿನಗಳಲ್ಲಿ ಪೈ ಅವರು ಆರೋಪಿಸಿದ ಅಂಕಿ-ಅಂಶಗಳಿಗೆ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರತ್ತ ಎಲ್ಲರ ಗಮನ ಹರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ