ಫೋನ್‌ ಪೇ ಬಾಯ್ಕಾಟ್‌ ಮಾಡೋದಲ್ಲ, ಆ ರೀತಿಯ ಕಂಪನಿ ಕಟ್ಟಿ ಅದು ಗಂಡಸ್ತನ; ಕನ್ನಡಿಗರಿಗೆ ಸವಾಲ್‌ ಎಸೆದ ಯುವಕ!

By Santosh Naik  |  First Published Jul 22, 2024, 8:18 PM IST

ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಫೋನ್‌ ಪೇ ಕಂಪನಿ ಸಂಸ್ಥಾಪಕ ವಿರೋಧ ವ್ಯಕ್ತಪಡಿಸಿದ್ದಕ್ಕೆ, ದೊಡ್ಡ ಅಭಿಯಾನ ಆರಂಭವಾಗಿತ್ತು. ಈಗ ಮತ್ತೊಬ್ಬ ಯುವಕ ಕನ್ನಡಿಗರಿಗೆ ಫೋನ್‌ ಪೇ ತರಹದ ಕಂಪನಿ ಕಟ್ಟಿ ಎಂದು ಸವಾಲ್‌ ಎಸೆದಿದ್ದಾನೆ.


ಬೆಂಗಳೂರು (ಜು.22): ರಾಜ್ಯ ಸರ್ಕಾರ ಯು ಟರ್ನ್ ಹೊಡೆದಿರುವ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಮಸೂದೆಗೆ ಫೋನ್‌ ಪೇ ಕಂಪನಿಯ ಸಿಇಒ ಸಮೀರ್‌ ನಿಗಮ್‌ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪರಿಗಣಿಸಿದ ಜನತೆ ಫೋನ್‌ ಪೇಯನ್ನು ಅನ್‌ಇನ್ಸ್‌ಟಾಲ್‌ ಮಾಡುವ ಅಭಿಯಾನ ಮಾಡಿದ್ದರು. ಈ ಅಭಿಯಾನ ಬಿಗಿಯಾಗುತ್ತಿದ್ದಂತೆ ಸಮೀರ್‌ ನಿಗಮ್‌ ತಮ್ಮ ಹೇಳಿಕೆಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಬಾಯ್ಕಾಟ್‌ ಫೋನ್‌ ಪೇ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟ್ರೆಂಡಿಂಗ್‌ ಆಗುತ್ತಿರುವ ನಡುವೆ ಯುವಕನೊಬ್ಬ ಕನ್ನಡಿಗರಿಗೆ ಸವಾಲ್‌ ಎಸೆದು ಹೇಳೀಕೆ ನೀಡಿದ್ದಾನೆ. ಕನ್ನಡಿಗರ ಬಾಯ್ಕಾಟ್‌ನಂಥ ಕೆಲಸ ಮಾಡುವ ಬದಲು, ಫೋನ್‌ ಪೇ ರೀತಿಯ ಕಂಪನಿಯನ್ನು ಹುಟ್ಟುಹಾಕಿ ಎಂದು ಆಕ್ರೋಶದಿಂದ ಸವಾಲ್‌ ಎಸೆದಿದ್ದಾನೆ. ಅಳಗನಿ ಕಿರಣ್‌ ಕುಮಾರ್‌ ಎನ್ನುವ ವ್ಯಕ್ತಿ  ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ದಿನದ ಹಿಂದೆ ವಿಡಿಯೋ ಹಂಚಿಕೊಂಡಿದ್ದು, ಫೋನ್‌ ಪೇ ಬಾಯ್ಕಾಟ್‌ ಮಾಡೋದಲ್ಲ. ಆ ರೀತಿಯ ಕಂಪನಿ ಕಟ್ಟಿ ಅದು ಗಂಡಸ್ತನ ಎಂದು ಕನ್ನಡಿಗರಿಗೆ ಸವಾಲ್‌ ಎಸೆದಿದ್ದಾನೆ.

'ನಮಸ್ಕಾರ.. ಏನು ಎಲ್ಲರೂ, ಫೋನ್‌ ಪೇಯನ್ನ ಬಹಳ ಜೋರಾಗಿ ಅನ್‌ಇನ್ಸ್‌ಟಾಲ್‌ ಮಾಡ್ತಾ ಇದ್ದೀರಾ. ಓಹ್‌ ಎಂಪ್ಲಾಯ್‌ಮೆಂಟ್‌ ಬಿಲ್‌ಗೆ ಬೆಂಬಲ ಕೊಟ್ಟಿಲ್ಲ ಅನ್ನೋ ಕಾರಣಕ್ಕಾ? ಸೂಪರ್‌.  ಹಾಗಿದ್ರೆ ಒಂದು ಕೆಲಸ ಮಾಡೋಣ. ಭಾರತ್‌ ಪೇ ಇನ್ಸ್‌ಟಾಲ್‌ ಮಾಡಿಕೊಳ್ಳೋಣ. ಓಹ್‌ ಭಾರತ್‌ ಪೇ ಅಲ್ಲಿ ಭಾರತ್‌ ಇದೆ. ಕರ್ನಾಟಕ ಇಲ್ಲ. ಅದೂ ಕರೆಕ್ಟೇ. ನಾವ್ಯಾಕೆ ಇನ್ಸ್‌ಟಾಲ್‌ ಮಾಡ್ಕೋತೀವಿ. ಫೋನ್‌ ಪೇ ಅನ್‌ ಇನ್ಸ್‌ಟಾಲ್‌ ಮಾಡೋದು ದೊಡ್ಡ ವಿಚಾರವಲ್ಲ. ಫೋನ್‌ ಪೇಯಂಥ ಸಂಸ್ಥೆಯನ್ನ ಹುಟ್ಟಿಹಾಕೋದು ಗಂಡಸ್ತನ. ಬಟ್‌ ನಮಗೆ ಅಷ್ಟು ಟೈಮ್‌ ಎಲ್ಲಿದೆ. ಯಾಕಂದ್ರೆ, ನಮ್ಮ ರಾಜಕಾರಣಿಗಳು, ನಮ್ಮ ನಾಯಕರು  ಏನ್‌ ಕೆಲ್ಸ ಹೇಳ್ತಾರೋ ಆ ಕೆಲ್ಸ ಮಾಡೋದ್ರಲ್ಲಿ, ಅವರ ಹಿಂದೆ ಫಾಲೋ ಮಾಡ್ಕೊಂಡು ಓಡಾಡೋದ್ರಲ್ಲಿ ನಾವು ಬ್ಯುಸಿ ಆಗಿದ್ದೇವೆ. ನಮ್‌ ಕೈಲಿ ಒಂದು ಕಂಪನಿ ಕಟ್ಟೋಕೆ ಎಲ್ಲಿ ಆಗುತ್ತೆ? ಕರೆಕ್ಟ್‌ ಅಲ್ವಾ? ನಿಮಗೆ ಯಾರೆಲ್ಲಾ ಛೂ ಬಿಟ್ಟು, ಯಾರೆಲ್ಲಾ ನಿಮ್ಮ ಎತ್ತಿ ಕಟ್ಟಿ ಈ ದಂಗೆ ಏಳಿಸ್ತಾ ಇದ್ದೀರೋ ಅವರೆಲ್ಲ ತಮ್ಮ ಮಕ್ಕಳನ್ನ ವಿದೇಶದಲ್ಲಿ ಓದಿಸ್ತಾ ಇದ್ದಾರೆ. ನಿಮ್ಮ ಮಕ್ಕಳು ಎಲ್ಲಿ ಓದ್ತಾ ಇದ್ದಾರೆ. ಐದು ನಿಮಿಷ ನಿಮ್ಮ ಜೀವನದ ಬಗ್ಗೆ ನಿಮ್ಮ ಬಗ್ಗೆ ಯಾವಾಗ್ಲಾದ್ರೂ ಯೋಚ್ನೆ ಮಾಡಿದ್ದೀರಾ? 

ಈ ರೀತಿ ಸಂಸ್ಥೆಗಳನ್ನ ಬಾಯ್ಕಾಟ್‌ ಮಾಡೋದ್ರಿಂದ ನಮ್ಮ ಕರ್ನಾಟಕದ ಆರ್ಥಿಕತೆಗೆ ಎಷ್ಟು ಹೊಡೆತ ಬೀಳುತ್ತೆ ಅಂತಾ ಯಾರಾದ್ರೂ ಒಬ್ರು ಯೋಚ್ನೆ ಮಾಡಿದ್ದೀರಾ? ಯಾಕಂತಂದ್ರೆ ನಿಮ್ಮ ರಾಜಕಾರಣಿಗಳಿಗೆ ಆ ಯೋಚನೆಗಳಿಲ್ಲ. ಅಟ್‌ ಲೀಸ್ಟ್‌ ನಿಮಗಾದ್ರೂ ಆ ಯೋಚನೆ ಇರ್ಲಿ. ಅವರಿಗೆ ಈ ಯೋಚನೆ ಇರೋದಿಲ್ಲ ಯಾಕಂದ್ರೆ, ಅವರ ಇಡೀ ಜೀವನಕ್ಕೆ ಅವರ ತಲೆಮಾರಿಗೆ, ಅವರ ಮಕ್ಕಳು, ಮೊಮ್ಮಕ್ಕಳಿಗೆ ಬೇಕಾಗೋವಷ್ಟು ಆಸ್ತಿಯನ್ನ ಅವ್ರು ಮಾಡ್ಕೊಂಡಿದ್ದಾರೆ. ಇನ್ನೂ 10 ತಲೆಮಾರು ಕೂತ್ಕೊಂಡು ತಿನ್ನೋವಷ್ಟು ಆಸ್ತಿ ಮಾಡಿದ್ದಾರೆ.  ಆದರೆ, ನೀವು? ನಿಮ್ಮ ಮಕ್ಕಳು ಇದೇ ರೀತಿ ಲಕ್ಷುರಿಯಾಗಿ ಇದ್ದಾರಾ? ಈ ರೀತಿ ಹೊಸ ಹೊಸ ಕಂಪನಿಗಳು ಕರ್ನಾಟಕಕ್ಕೆ ಬರೋದರಿಂದ ರಾಜ್ಯದ ಆರ್ಥಿಕತೆ ಎಷ್ಟು ಮುಂದೆ ಬರುತ್ತೆ. ಬೆಂಗಳೂರು ನಗರ 20 ರಿಂದ 30 ವರ್ಷದ ಹಿಂದೆ ಹೇಗಿತ್ತು? ಇವಾಗ ಎಷ್ಟು ಅಭಿವೃದ್ಧಿಯಾಗಿದೆ. ಇದು ಬೆಂಗಳೂರು ಬೃಹತ್‌ ಮರವಾಗಿ ಬೆಳೆದು ನಿಂತಿದೆ ಅಂದ್ರೆ ಅದಕ್ಕೆ ಕಾರಣ ಯಾರು? ಇಷ್ಟು ಸಂಸ್ಥೆಗಳು ಬಂದಿರೋದರಿಂದಲೇ ತಾನೆ.

Latest Videos

undefined

ಬೇಷರತ್ ಕ್ಷಮೆ ಕೇಳಿದ ಫೋನ್ ಪೇ ಸಿಇಒ; ಮತ್ತೆ Phonepe ಇನ್‌ಸ್ಟಾಲ್ ಮಾಡ್ತಾರಾ ವಿಶಾಲ ಹೃದಯದ ಕನ್ನಡಿಗರು? 

ನಾನು ಕ್ಯಾಬ್‌ ಡ್ರೈವರ್‌ಗೆ ಒಂದು ಪ್ರಶ್ನೆ ಮಾಡ್ತೀನಿ. ಚಾಲಕರೇ, ನೀವು ಬೆಂಗಳೂರಲ್ಲಿ ಎಲ್ಲೇ ಇದ್ರೂ ಕೂಡ, ಎಲ್ಲೋ ಒಂದು ಕಡೆ ಟ್ರಿಪ್‌ ಬರುತ್ತೆ. ಎಲ್ಲಿಂದ ಬರುತ್ತೆ ಇದು. ಜನಸಂಖ್ಯೆ ಜಾಸ್ತಿ ಇರೋದ್ರಿಂದ ಇದಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆ ಹೋಗೋಕೆ ಕ್ಯಾಬ್‌ ಬುಕ್‌ ಮಾಡ್ತಾರೆ. ಕೋವಿಡ್‌ ಟೈಮ್‌ನಲ್ಲಿ ಇದೇ ಕ್ಯಾಬ್‌ ಡ್ರೈವರ್‌ಗಳು ತಮ್ಮ ಕ್ಯಾಬ್‌ಗಳು ಅರ್ಧ ರೇಟ್‌ಗೆ ಮಾರಾಟ ಮಾಡಿದ್ರು? ಯಾಕಂದ್ರೆ ಆಗ ಯಾರೂ ಕೂಡ ಪ್ರಯಾಣ ಮಾಡೋರು ಇರ್ಲಿಲ್ಲ. ಆವಾಗ ನಿಮ್ಮ ಪರಿಸ್ಥಿತಿ ಹೇಗಿತ್ತು? ಅದೇ ರೀತಿ ಹೋಟೆಲ್‌ ಉದ್ಯಮದವರು ಕೂಡ ಕಷ್ಟ ಪಟ್ರು. ಜನ ಇಲ್ಲ ಅಂದ್ರೆ ಏನಾಗುತ್ತೆ ಅನ್ನೋದು ನೆನಪಲ್ಲಿ ಇರಲಿ. ರಾಜಕಾರಣಿಗಳ ಆಟಕ್ಕೆ ಎಂದಿಗೂ ಬಲಿಯಾಗಬೇಡಿ. ಯಾವ ಭಾಷೆ ದೊಡ್ಡದು, ಯಾವುದು ಚಿಕ್ಕದು ಅನ್ನೋದಲ್ಲ.ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಅದು ಮುಖ್ಯ. ಭಾರತ ಅನ್ನೋದು ದೊಡ್ಡದು. ಅವರವರ ಭಾಷೆ ಅವರಿಗೆ ದೊಡ್ಡದು. ಯಾರೂ ಕಮ್ಮಿಯಿಲ್ಲ. ಯಾರೂ ಹೆಚ್ಚಲ್ಲ. ಭಾರತದ ಒಗ್ಗಟ್ಟಿಗೆ, ಏಕತೆಗೆ ಯಾರೂ ಅಡ್ಡಿಯಾಗಬಾರದು.  ದೇಶದ ಅಭಿವೃದ್ಧಿಗೆ ಯಾರೂ ಅಡ್ಡಿಯಾಗಬಾರದು ಎನ್ನುವುದು ನನ್ನ ವಾದ ಎಂದು ಹೇಳಿ ಮಾತು ಮುಗಿಸಿದ್ದಾರೆ.

ನೀವು ಕನ್ನಡಿಗರಾಗಿದ್ರೆ ಫೋನ್‌ಪೇ ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಿ; ಟ್ವಿಟರ್‌ ಟ್ರೆಂಡಿಂಗ್!

 

click me!