
ಕಾರವಾರ, ಉತ್ತರಕನ್ನಡ (ಡಿ.16): ಮಂಗಳವಾರ ಬೆಳಗ್ಗೆ ಭಟ್ಕಳ ತಹಸೀಲ್ದಾರ್ ಕಚೇರಿಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಕರೆ ಬಂದಿದ್ದು, ಇದರಿಂದಾಗಿ ಕಚೇರಿ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ 7.25ಕ್ಕೆ 'ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ' ಎಂಬ ಈಮೇಲ್ ಮೂಲಕ ಈ ಸಂದೇಶ ರವಾನೆಯಾಗಿದ್ದು, 'ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು: ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ. ಎಲ್ಲರನ್ನೂ ಬೇಗ ತೆರವುಗೊಳಿಸಿ! ಎಂದು ಕನ್ನಡದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ತಕ್ಷಣದ ಬೆದರಿಕೆಯ ಹಿನ್ನೆಲೆಯಲ್ಲಿ, ಯಾವುದೇ ಅನಾಹುತವಾಗದಂತೆ ತಡೆಯಲು ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಾಂಬ್ ಹಾಗೂ ಡಾಗ್ ಸ್ಕ್ವಾಡ್ ಕಚೇರಿ ಆವರಣವನ್ನು ಪರಿಶೀಲಿಸಲು ಸಿದ್ಧತೆ ನಡೆಸಿವೆ.
ಬಾಂಬ್ ಬೆದರಿಕೆ ಮಾತ್ರವಲ್ಲದೆ, ಅನಾಮಿಕ ಕಳುಹಿಸಿದ ಈಮೇಲ್‌ನಲ್ಲಿ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ಹಲವು ತಲೆಬುಡವಿಲ್ಲದ ಆರೋಪಗಳನ್ನು ಮಾಡಲಾಗಿದೆ. ಪ್ರಶಾಂತ್ ಕಿಶೋರ್ ಮತ್ತು ಸುನೀಲ್ ಕನುಗೋಲು ಸೂಚನೆಯ ಮೇರೆಗೆ ಡಿಎಂಕೆ ಸರ್ಕಾರವು 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು ಎಂದು ಆರೋಪಿಸಲಾಗಿದೆ.
ಅಲ್ಲದೆ, ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಮೂಲಕ 'ಗೆಲಿಲಿಯೋ ಆ್ಯಪ್' ಬಳಸಿ ಕನ್ನಡಿಗರ ಮೇಲೆ ಗೂಡಾಚಾರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಡಿಎಂಕೆ ನಾಯಕ ಉದಯನಿಧಿ ಅವರ ಉದ್ದೇಶ ಹಣಗಳಿಸುವುದಕ್ಕಿಂತ ಹೆಚ್ಚಿದೆ ಎಂಬ ಸಂದೇಶವನ್ನೂ ಈಮೇಲ್‌ನಲ್ಲಿ ಬರೆಯಲಾಗಿದೆ. ಇದಕ್ಕಿಂತಲೂ ಗಂಭೀರವಾಗಿ, ಹಲವು ಅನಾಥಾಶ್ರಮಗಳ ಹೆಣ್ಣುಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತಿದ್ದು, ಡಿಎಂಕೆ ನಾಯಕತ್ವಕ್ಕೆ ಇದರ ಬಗ್ಗೆ ಮಾಹಿತಿ ಇದೆ ಎಂದು ಆಪಾದಿಸಿ, ಈಮೇಲ್ ಅನ್ನು ಏನೇನೋ ಬರೆದು ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ