*ಮೃತ ದೇಹಗಳನ್ನು ಇಟ್ಟು ಮರೆತಿದ್ದ ರಾಜಾಜಿನಗರ ESI ಸಿಬ್ಬಂದಿ
*ಸ್ವಚ್ಛಗೊಳಿಸಲು ಹೋದಾಗ ಕಳೇಬರಗಳು ಪತ್ತೆ
*ಶವಕ್ಕೆ ಕಟ್ಟಿದ್ದ ಟ್ಯಾಗ್‌ನಿಂದ ಕುಟುಂಬಸ್ಥರಿಗೆ ಮಾಹಿತಿ!
*ಪೊಲೀಸರೇ ಅಂತ್ಯಕ್ರಿಯೆ ನಡೆಸುವ ಪರಿಸ್ಥಿತಿ
ಬೆಂಗಳೂರು(ನ.29) ಕೊರೋನಾ ಸೋಂಕಿಗೆ (Corona Death) ತುತ್ತಾಗಿ ಸಾವನ್ನಪ್ಪಿದ 15 ತಿಂಗಳ ಬಳಿಕ ಇಬ್ಬರ ಮೃತದೇಹಗಳನ್ನು (Dead body) ರಾಜಾಜಿನಗರದ ಕಾರ್ಮಿಕ ವಿಮಾ ಆಸ್ಪತ್ರೆ ಶೈತ್ಯಾಗಾರದಿಂದ (ESI Hospital mortuary) ಹೊರತೆಗೆದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈಗ ಮೃತದೇಹಗಳನ್ನು ಸ್ವೀಕರಿಸಲು ಕುಟುಂಬದ ಸದಸ್ಯರು ಹಿಂದೇಟು ಹಾಕಿದ್ದಾರೆ. ಚಾಮರಾಜಪೇಟೆಯ ದುರ್ಗಾ (40) ಮತ್ತು ಕೆ.ಪಿ.ಅಗ್ರಹಾರದ ಮುನಿರಾಜು (35) ಮೃತಪಟ್ಟವರು. ಮೂರು ದಿನಗಳ ಹಿಂದೆ ಶವಾಗಾರದ ಸ್ವಚ್ಛತೆಗೆ ಕೆಲಸಗಾರರು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದುಆರೋಪಿಸಲಾಗಿದೆ.
ಕೊರೋನಾ ಸೋಂಕಿನ ಮೊದಲ ಅಲೆಯಲ್ಲಿ ಸೋಂಕಿತರಾದ ದುರ್ಗಾ (Durga) ಹಾಗೂ ಮುನಿರಾಜು (Muniraju) ಅವರನ್ನು 2020ರ ಜುಲೈನಲ್ಲಿ ಚಿಕಿತ್ಸೆ ಸಲುವಾಗಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ. ಬಳಿಕ ಮೃತದೇಹಗಳನ್ನು ಅಂತ್ಯಕ್ರಿಯೆಗೆ (Last Rites) ಬಿಬಿಎಂಪಿಗೆ (BBMP) ಒಪ್ಪಿಸುವ ಸಲುವಾಗಿ ಇಎಸ್‌ಐ ಆಸ್ಪತ್ರೆಯ ಹಳೆಯ ಶವಾಗಾರದಲ್ಲಿಡಲಾಗಿತ್ತು. ಮೊದಲ ಅಲೆಯಲ್ಲಿ ಬಿಬಿಎಂಪಿಯೇ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣ ಮೃತರ ಕುಟುಂಬದ ಸದಸ್ಯರು ಸಹ ಆಸ್ಪತ್ರೆಯ ಕಡೆ ಸುಳಿದಿರಲಿಲ್ಲ. ಆದರೆ ಆಸ್ಪತ್ರೆ ಹಾಗೂ ಬಿಬಿಎಂಪಿ ನಡುವಿನ ಸಂವಹನ ಕೊರತೆ ಪರಿಣಾಮ ಎರಡು ಮೃತದೇಹಗಳಿಗೆ ಮುಕ್ತಿಯೇ ಸಿಗದೆ ಅತಂತ್ರ ಸ್ಥಿತಿ ಬಂದೊದಗಿದೆ
undefined
ಶವಾಗಾರದಲ್ಲೇ ಕೊಳೆತ ಮೃತದೇಹಗಳು:
ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಆವರಣದಲ್ಲಿ ಆರು ಶೈತ್ಯಾಗಾರದ ಶವಾಗಾರವಿತ್ತು. ಆದರೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ಶವಾಗಾರದಲ್ಲಿ ಮೃತದೇಹಗಳನ್ನು ಶೇಖರಿಸಿಡಲು ಕಷ್ಟವಾಯಿತು. ಆಗ ಸರ್ಕಾರವು 2020ರಲ್ಲಿ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ಶವಾಗಾರ ನಿರ್ಮಿಸಿತು. ಈ ಶವಾಗಾರಕ್ಕೆ 2020ರ ಕೊನೆಯಲ್ಲಿ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಮುನ್ನ ಹಳೇ ಶವಾಗಾರವನ್ನು ಬಿಬಿಎಂಪಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಸಬೇಕಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ, ಹೊಸ ಶವಾಗಾರದ ಕಾರ್ಯಚಟುವಟಿಕೆ ಶುರುವಾದ ಬಳಿಕ ಹಳೆ ಕಟ್ಟಡದ ಕಡೆಗೆ ಸುಳಿಯದೆ ನಿರ್ಲಕ್ಷಿಸಿದ್ದಾರೆ.
ಕೊನೆಗೆ 1 ವರ್ಷದ ಮೂರು ತಿಂಗಳ ಬಳಿಕ ಹಳೆ ಶವಾಗಾರವನ್ನು ಸ್ವಚ್ಛಗೊಳಿಸಲು ಸ್ವಚ್ಛತಾ ಕೆಲಸ ಗಾರರು ತೆರಳಿದ್ದಾಗ ಶೈತ್ಯಾಗಾರದಲ್ಲಿ ದುರ್ನಾತ ಬರುತ್ತಿದ್ದುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ರಾಜಾಜಿನಗರ ಪೊಲೀಸರು, ಶೈತ್ಯಾಗಾರದಲ್ಲಿಟ್ಟಿದ್ದ ಮೃತದೇಹಗಳನ್ನು ಹೊರತೆಗೆದು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬಳಿಕ ಮೃತದೇಹಗಳಿಗೆ ಬಿಬಿಎಂಪಿ ಹಾಕಿದ್ದ ಟ್ಯಾಗ್ (Tag) ಮೂಲಕ ಅವುಗಳ ಗುರುತು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರೇ ಅಂತ್ಯಕ್ರಿಯೆ ನಡೆಸುವ ಪರಿಸ್ಥಿತಿ:
ಮೃತದೇಹಗಳ ಗುರುತು ಪತ್ತೆಯಾದ ಬಳಿಕ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಯಾರೊಬ್ಬರೂ ಸಹ ಬಂದಿಲ್ಲ. ಹೀಗಾಗಿ ನಾವೇ ಆ ಎರಡು ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದು ರಾಜಾಜಿನಗರ ಪೊಲೀಸರು ಹೇಳುತ್ತಾರೆ. ಮೃತದೇಹಗಳಿಗೆ ಬಿಬಿಎಂಪಿ ಹಾಕಿದ್ದ ಟ್ಯಾಗ್‌ನಿಂದ ಗುರುತು ಪತ್ತೆಯಾಯಿತು. 2009ರಲ್ಲೇ ದುರ್ಗಾ ಅವರ ಪತಿ ಮೃತಪಟ್ಟಿ
ದ್ದಾರೆ. ಹೀಗಾಗಿ ಆಕೆಯ ವಾರಸುದಾರರು ಎಂದು ನೋಂದಾಯಿಸಿದ್ದ ಸೋದರನ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ಆದರೆ ಆತ ಯಾವುದೇ ಸ್ಪಂದನೆ ನೀಡಲಿಲ್ಲ. ಇನ್ನು ಮುನಿರಾಜು ಕುಟುಂಬದವರನ್ನು ಹುಡುಕಲು ಕೆ.ಪಿ.ಅಗ್ರಹಾರದಲ್ಲಿ ಸುತ್ತಾಡಿದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂದ ರಾಜಾಜಿನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇಎಸ್‌ಐ ಬೇಜವಾಬ್ದಾರಿತನ:
ಕೊರೋನಾಕಾಲದಲ್ಲಿ ಇಎಸ್‌ಐ ಆಸ್ಪತ್ರೆಯ ಬೇಜವಾಬ್ದಾರಿ ನಡವಳಿಕೆಗೆ ಈ ಎರಡು ಮೃತದೇಹಗಳು ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಸೋಂಕಿನಿಂದ ರೋಗಿಗಳು ಮೃತಪಟ್ಟ ಬಳಿಕ ಸಂಬಂದಪಟ್ಟವರಿಗೆ ಆಸ್ಪತ್ರೆ ಸಿಬ್ಬಂದಿಮಾಹಿತಿ ನೀಡಬೇಕಿತ್ತು. ಅಲ್ಲದೆ ಬಿಬಿಎಂಪಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಬೇಕಿತ್ತು.ಆದರೆ ಕೊರೋನಾ ಮಾರ್ಗಸೂಚಿಯನ್ನು ಇಎಸ್‌ಐ ಆಸ್ಪತ್ರೆ ಪಾಲಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಲಾಗಿದೆ.