ಹಳದಿ ಆಯ್ತು ಈಗ ಗುಲಾಬಿ ಮೆಟ್ರೋ ಆರಂಭಕ್ಕೆ ಜನರ ಕೂಗು! 2026ರ ಡಿಸೆಂಬರ್‌ಗೆ ಪ್ರಯಾಣ ಸೇವೆ ಪ್ರಾರಂಭ?

Kannadaprabha News, Ravi Janekal |   | Kannada Prabha
Published : Aug 18, 2025, 06:20 AM IST
Namma Metro

ಸಾರಾಂಶ

ನಾಗವಾರ-ಕಾಳೇನ ಅಗ್ರಹಾರ ಗುಲಾಬಿ ಮಾರ್ಗದ ಕಾಮಗಾರಿ ೨೦೨೬ರ ಡಿಸೆಂಬರ್‌ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಆದರೆ, ರೈಲುಗಳ ಲಭ್ಯತೆ ಮತ್ತು ಇತರ ಸವಾಲುಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

  • ಮಯೂರ್‌ ಹೆಗಡೆ

ಬೆಂಗಳೂರು (ಆ.18): ಹಳದಿ ಮಾರ್ಗದ ಬಳಿಕ ಇದೀಗ ವಿಳಂಬ ಆಗಿರುವ ನಾಗವಾರ-ಕಾಳೇನ ಅಗ್ರಹಾರ ‘ಗುಲಾಬಿ’ ಮಾರ್ಗವನ್ನು ನಿಗದಿತ ವೇಳೆಗೆ ಆರಂಭಿಸಲು ಹಾಗೂ ಮುಖ್ಯವಾಗಿ ಅಗತ್ಯ ರೈಲುಗಳನ್ನು ಪೂರೈಸಿಕೊಳ್ಳಲು ನಗರ ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.

ಯೋಜನೆ ಪ್ರಕಾರ ಇದೇ ಸೆಪ್ಟೆಂಬರ್‌ಗೆ ಗುಲಾಬಿ ಮಾರ್ಗದ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಪ್ರಸ್ತುತ ಡೆಡ್‌ಲೈನ್‌ನ್ನು 2026ರ ಡಿಸೆಂಬರ್‌ಗೆ ಮುಂದೂಡಲಾಗಿದ್ದು, ಈ ವೇಳೆಗೂ ವಾಣಿಜ್ಯ ಸಂಚಾರ ಆರಂಭವಾಗುವ ಬಗ್ಗೆ ಮೆಟ್ರೋ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಳೇನ ಅಗ್ರಹಾರದಿಂದ ನಾಗವಾರದ ತನಕದ 21.76 ಕಿ.ಮೀ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ 13.89 ಕಿಮೀ ಸುರಂಗ ಮಾರ್ಗ ಹೊಂದಿದೆ. ಕಾಳೇನ ಅಗ್ರಹಾರ-ತಾವರೆಕೆರೆವರೆಗೆ 7.5ಕಿಮೀ ಎಲಿವೆಟೆಡ್‌ ಕಾರಿಡಾರ್‌ ಹೊಂದಿದೆ. ಎಲೆವೆಟೆಡ್‌ನಲ್ಲಿ 6, ಸುರಂಗದಲ್ಲಿ 12 ನಿಲ್ದಾಣಗಳು ನಿರ್ಮಾಣ ಆಗುತ್ತಿವೆ. 2026ರ ಜೂನ್‌ಗೆ ಎಲಿವೆಟೆಡ್‌ ಮಾರ್ಗ, ಡಿಸೆಂಬರ್‌ಗೆ ಸುರಂಗಮಾರ್ಗವನ್ನು ಜನಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ವಿಳಂಬ ಯಾಕೆ?:

2020ರ ಆಗಸ್ಟ್‌ನಿಂದ ಆರಂಭವಾಗಿದ್ದ ಜೋಡಿ ಸುರಂಗ (26ಕಿಮೀ) ಕೊರೆವ ಮಾರ್ಗ ಕಳೆದ ವರ್ಷ (2024 ಅ.23) ಮುಗಿದಿತ್ತು. 9 ಟನಲ್‌ ಬೋರಿಂಗ್‌ ಮಷಿನ್‌ ಮೂಲಕ ಸುರಂಗ ಕೊರೆದಿದ್ದರೂ ಟಿಬಿಎಂ ಯಂತ್ರಗಳು ನೆಲದೊಳಗೆ ಹಿಂದೆ ಮುಂದೆ ಚಲಿಸಲಾಗದೆ ಸಿಲುಕಿದ್ದವು. ಈ ವಿಳಂಬವೇ ಒಟ್ಟಾರೆ ಯೋಜನೆ ನಿಧಾನವಾಗಲು ಕಾರಣವಾಗಿದೆ. ಎಲಿವೆಟೆಡ್‌ ಕಾರಿಡಾರ್‌ ಕಾಮಗಾರಿ ಶೇ.92ರಷ್ಟು ಮುಗಿದಿದೆ. ಸುರಂಗ ಮಾರ್ಗದಲ್ಲಿ ಡೇರಿ ಸರ್ಕಲ್‌ನಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ಶೇ.97, ಅಲ್ಲಿಂದ ಶಿವಾಜಿನಗರದವರೆಗೆ ಶೇ.95, ಟ್ಯಾನರಿ ರಸ್ತೆವರೆಗೆ ಶೇ.93, ನಾಗವಾರದವರೆಗೆ ಶೇ.90ಕ್ಕಿಂತ ಹೆಚ್ಚು ಸೇರಿ ಒಟ್ಟಾರೆ ಶೇ.95ರಷ್ಟು ಕಾಮಗಾರಿ ಮುಗಿದಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಹೆಚ್ಚಿದ ಯೋಜನಾ ವೆಚ್ಚ:

2017ರಲ್ಲಿ ಗುಲಾಬಿ ಮಾರ್ಗದ ಕಾಮಗಾರಿ ಅಂದಾಜು ವೆಚ್ಚ ₹11,014 ಕೋಟಿ ಆಗಿತ್ತು. ಆದರೆ, ವಿಳಂಬ ಕಾಮಗಾರಿಯಿಂದ ಯೋಜನಾ ವೆಚ್ಚ ಹೆಚ್ಚಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದ ತನಕದ 21.25 ಕಿಮೀ ಮಾರ್ಗದ ನಿರ್ಮಾಣಕ್ಕೆ ಅಂದಾಜು ₹12 ಸಾವಿರ ಕೋಟಿ ವೆಚ್ಚವಾಗಲಿದೆ ಎಂದುಕೊಳ್ಳಲಾಗಿದೆ. ಈ ಪೈಕಿ ಡೇರಿ ವೃತ್ತದಿಂದ ನಾಗವಾರ ತನಕದ ಸುರಂಗ ಮಾರ್ಗಕ್ಕೇ ಅಂದಾಜು ₹5,000 ಕೋಟಿ ವೆಚ್ಚವಾಗಲಿದೆ.

ಜನದಟ್ಟಣೆಯ ಮಾರ್ಗ:

ಈ ಮಾರ್ಗ ಬೆಂಗಳೂರಿನ ಉತ್ತರ (ಹೊರವರ್ತುಲ ರಸ್ತೆ ) - ದಕ್ಷಿಣ (ಬನ್ನೇರುಘಟ್ಟ ರಸ್ತೆ) ಬೆಸೆಯಲಿದೆ. ನಗರದ ಜನದಟ್ಟಣೆಯ ಪ್ರದೇಶದಿಂದ ಹಾದು ಹೋಗಲಿದ್ದು, ಶಿವಾಜಿನಗರ, ಪಾಟರಿ ಟೌನ್‌, ಟ್ಯಾನರಿ ರಸ್ತೆಗಳ ಮೆಟ್ರೋದಲ್ಲಿ ಹೆಚ್ಚು ಪ್ರಯಾಣಿಕರನ್ನು ನಿರೀಕ್ಷಿಸಬಹುದು. ಹಳದಿ ಮಾರ್ಗದ ಸಿವಿಲ್‌ ಕಾಮಗಾರಿ ಮುಗಿದು ಒಂದೂವರೆ ವರ್ಷ ರೈಲುಗಳಿಲ್ಲದ ಕಾರಣ ಸಂಚಾರ ವಿಳಂಬವಾಗಿತ್ತು. ಈ ಸಮಸ್ಯೆ ಗುಲಾಬಿ ಮೆಟ್ರೋದಲ್ಲೂ ಮರುಕಳಿಸದಂತೆ ಕ್ರಮ ವಹಿಸಿ ಎಂದು ಮೆಟ್ರೋ ಸಾರಿಗೆ ಕಾರ್ಯಕರ್ತ ರಾಜ್‌ಕುಮಾರ್ ದುಗರ್‌ ಒತ್ತಾಯಿಸಿದ್ದಾರೆ.

5 ಇಂಟರ್‌ಚೇಂಜ್‌: 23 ರೈಲು ಅಗತ್ಯ

ಗುಲಾಬಿ ಸೇರಿ ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಬಿಇಎಂಎಲ್‌ ಒಟ್ಟೂ 53 ರೈಲುಗಳನ್ನು ಪೂರೈಸುವ ಕಾರ್ಯಾದೇಶ ಪಡೆದಿದೆ. ಅದರಲ್ಲಿ 23 ರೈಲು ಗುಲಾಬಿ ಮಾರ್ಗಕ್ಕೆ ನಿಯೋಜನೆ ಆಗಲಿವೆ. ಮೊದಲ ಹಂತದಲ್ಲಿ ₹3658 ಕೋಟಿ ವೆಚ್ಚದಲ್ಲಿ 42 ರೈಲನ್ನು ಪೂರೈಸಲು ಒಪ್ಪಂದವಾಗಿತ್ತು. ಬಳಿಕ 2ನೇ ಹಂತದಲ್ಲಿ ಹೆಚ್ಚುವರಿ ₹402 ಕೋಟಿ ಒಪ್ಪಂದ ಮಾಡಿಕೊಂಡು ಒಟ್ಟಾರೆ 53 ರೈಲನ್ನು ಪೂರೈಸಲು ಒಪ್ಪಂದವಾಗಿದೆ. ನಾಗವಾರ ನಿಲ್ದಾಣವು ನೀಲಿ ಮಾರ್ಗ, ಎಂಜಿ ರೋಡ್‌ ನಿಲ್ದಾಣ ನೇರಳೆ ಮಾರ್ಗ, ಡೈರಿ ಸರ್ಕಲ್ ನಿಲ್ದಾಣ ಪ್ರಸ್ತಾವಿತ ಕೆಂಪು ಮಾರ್ಗ, ಜಯದೇವ ನಿಲ್ದಾಣವು ಹಳದಿ ಮಾರ್ಗ ಹಾಗೂ ಜೆಪಿ ನಗರ 4ನೇ ಹಂತವು ಕಿತ್ತಳೆ ಮಾರ್ಗ ಸೇರಿ ಒಟ್ಟು 5 ಇಂಟರ್‌ಚೇಂಜ್‌ ಇರಲಿವೆ.

2017ರಲ್ಲಿ ಆರಂಭವಾಗಿ 2020ರಲ್ಲಿ ಮುಗಿಯಬೇಕಿದ್ದ ಈ ಯೋಜನೆ ಸಾಕಷ್ಟು ವಿಳಂಬವಾಗಿದೆ. 2027ಕ್ಕಾದರೂ ಪೂರ್ಣಗೊಳಿಸಬೇಕು. ಮುಖ್ಯವಾಗಿ ರೈಲ್ವೆಸೆಟ್‌ಗಳು ಸೂಕ್ತ ಸಮಯಕ್ಕೆ ಲಭ್ಯ ಆಗುವಂತೆ ಮಾಡಿಕೊಳ್ಳಬೇಕು.

- ರಾಜಕುಮಾರ್‌ ದುಗರ್‌, ಸಿಫಾರ್‌ಸಿ ಸಂಘಟನೆ

ನಗರದ ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಗುಲಾಬಿ ಮಾರ್ಗದ್ದು ಪ್ರಮುಖ ಪಾತ್ರ. ಕೋಚ್‌ ಪೂರೈಕೆ, ಸಿಗ್ನಲಿಂಗ್‌, ಎಲೆಕ್ಟ್ರಿಫಿಕೇಶನ್‌ ಸೇರಿ ಎಲ್ಲ ಭಾಗಿದಾರರ ಜತೆಗೆ ಸಮನ್ವಯತೆ ಸಾಧಿಸಿ ಕೆಲಸವನ್ನು ಬೇಗ ಮುಗಿಸಬೇಕಾಗಿದೆ.

- ಪ್ರಕಾಶ್‌ ಮಂಡೊತ್‌, ಬೆಂಗಳೂರು ಮೆಟ್ರೋ ಆ್ಯಂಡ್‌ ಸಬ್‌ಅರ್ಬನ್‌ ರೈಲ್‌ ಪ್ಯಾಸೆಂಜರ್ಸ್‌ ಅಸೋಸಿಯೇಶನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!