
ಕೊಪ್ಪಳ (ಮೇ.9): ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಯಾವ ಪುರುಷಾರ್ಥಕ್ಕೆ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವಧಿ ನವೆಂಬರ್ ವೇಳೆಗೆ ಮುಕ್ತಾಯ ಆಗಲಿರುವುದರಿಂದ ಇಂತಹ ಕಾರ್ಯಕ್ರಮ ಮಾಡಿ ರಿನಿವಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ 25 ಸಂಸದರು ಬಿಜೆಪಿಯವರು ಇದ್ದರೂ ವಿಜಯೇಂದ್ರ ಅವಧಿಯಲ್ಲಿ 17ಕ್ಕೆ ಕುಸಿದಿದೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುವುದಕ್ಕಿಂತ ಎಲ್ಲ ಕಡೆಯೂ ಡಿಲೀಂಗ್ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಬಿಜೆಪಿ ಹೈಕಮಾಂಡ್‌ಗೆ ನಾವು ಲಿಂಗಾಯತ ನಾಯಕರು ಎಂದು ಬಿಂಬಿಸಲು ಹೊರಟಿದ್ದಾರೆ. ಈಗ ಪ್ರದರ್ಶನಕ್ಕೆ ಇಟ್ಟಿರುವ ಕಾರ್ ಸಹ ಬಿಜೆಪಿಯದ್ದೇ ಆಗಿದೆ. ನಿಮಗೆ ಸ್ವಂತ ಕಾರ್ ಸಹ ಇರಲಿಲ್ಲ. ಆದರೂ ಸಾವಿರಾರು ಕೋಟಿ ಆಸ್ತಿ ಮಾಡಿದ್ದು ಹೇಗೆ? ಎಂದು ಪ್ರಶ್ನೆ ಮಾಡಿದರು.
ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿ ಗೆದ್ದಾಗ ಪೇಢೆ ಹಂಚುವ ಅವರು, ಇಲ್ಲಿ ಏನು ಆಗಿದೆ ಎನ್ನುವುದನ್ನು ಹೇಳುವುದಿಲ್ಲ. ಇಲ್ಲಿ ಎಲ್ಲ ಗೊಡ್ಡಿಯೇ ಇರುವುದರಿಂದ ಮಕ್ಕಳು ಆಗು ಎಂದರೆ ಹೇಗೆ ಆಗುತ್ತವೆ ಎಂದು ಲೇವಡಿ ಮಾಡಿದರು.
ಜನಾಭಿಪ್ರಾಯ ಪಡೆದು ಹೊಸ ಪಕ್ಷ: ರಾಜ್ಯಾದ್ಯಂತ ಸುತ್ತಾಟ ನಡೆಸಿ ಅಭಿಪ್ರಾಯ ಪಡೆದ ನಂತರ ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಪಕ್ಷ ಕಟ್ಟುವ ಕುರಿತು ಈಗಲೇ ಏನು ಹೇಳಲು ಆಗದು, ಅಭಿಪ್ರಾಯ ಪಡೆದ ಬಳಿಕವೇ ತೀರ್ಮಾನ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾರಾದರೂ ಸಿಎಂ ಆಗಲಿ ನಮಗೇ ಗೊತ್ತಿಲ್ಲ. ಆದರೆ, ಉತ್ತಮ ಆಡಳಿತ ಕೊಡಲಿ ಎಂದರು.
ಪಂಚಮಸಾಲಿ ಎರಡು ಟ್ರಸ್ಟ್‌ಗಳಲ್ಲಿ ಭ್ರಷ್ಟರೇ ಇದ್ದಾರೆ. ಅವರೆಲ್ಲ ಲಫಂಗರೂ ಇದ್ದಾರೆ. ಟ್ರಸ್ಟ್ ರಾಜಕೀಯೇತರ ಇರಬೇಕು. ರಾಜಕೀಯದಿಂದ ಕೂಡಿದ್ದರೆ ಹೀಗೆಯೇ ಆಗುವುದು ಎಂದು ಕಿಡಿಕಾರಿದರು. ಕೂಡಲಸಂಗಮ ಮತ್ತು ಹರಿಹರದ ಎರಡು ಟ್ರಸ್ಟ್ ರದ್ದಾಗಬೇಕು ಎಂದರು.
ಐಪಿಎಲ್ ಟಿಕೆಟ್ ಕೇಳಿದ್ದರಿಂದ ಬೆಂಗಳೂರಿಂದ ಗುಜರಾತಿಗೆ ಫೈನಲ್ ಪಂದ್ಯ ಕಿತ್ತುಕೊಂಡು ಹೋಯಿತು. ತಮ್ಮ ಭಾಗದ ಸಮಸ್ಯೆ ಕೇಳದವರು ಐಪಿಎಲ್ ಟಿಕೆಟ್ ಕೇಳುತ್ತಾರೆ. ತಮ್ಮ ಕುಟುಂಬದವರಿಗೆ ಎಸಿ ಕುರ್ಚಿ ಕೇಳುತ್ತಾರೆ ಅಂದರೆ ಏನರ್ಥ? ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ