ಚಿಕ್ಕಮಗಳೂರು (ಆ.25): ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಸಿಗಬೇಕಾದರೆ ಜೈಲಿಗೆ ಹೋಗಬೇಕು, ಭ್ರಷ್ಟಾಚಾರ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ವಿಷಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ಹಿಂದೆ ಗೂಂಡಾಗಳಿಗೆ ವಿಶೇಷ ಆದ್ಯತೆ ನೀಡಬೇಕೆಂದು ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಗೆ ಬೆಳೆದುಕೊಂಡು ಬಂದರೋ ಆ ರೀತಿಯ ಆಲೋಚನೆ ಮಾಡುತ್ತಿದ್ದಾರೆ. ಭ್ರಷ್ಟಚಾರ ಎಂಬುದು ಕಾಂಗ್ರೆಸ್‌ನ ರಾಜಕೀಯ ವ್ಯವಸ್ಥೆಯೊಳಗೇ ಇದೆ. ಅಲ್ಲಿ ಗೂಂಡಾಗಿರಿ, ಪ್ರಮೋಷನ್‌ನ ಒಂದು ಮಾದರಿ. ಹಾಗಾಗಿ ಅವರು ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರ ವಿರುದ್ಧ ಮಾನಹಾನಿ ದಾವೆ : ಸಿ.ಟಿ. ರವಿ
ಮೋದಿ ಹೆಸರಿಡಿ: ಇದೇ ವೇಳೆ, ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ನಿರ್ಮಾಣ ಮಾಡಿರುವ ಶೌಚಾಲಯಗಳಿಗೆ ಪ್ರಧಾನಿ ಮೋದಿ ಹೆಸರಿಡಬೇಕೆಂದು ಸಿ.ಟಿ.ರವಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ‘ದೇಶದಲ್ಲಿ 13 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿ, ತಾಯಿಯಂದಿರ ಮರ್ಯಾದೆ ಉಳಿಸಿರುವುದು ಅಗೌರವದ ಸಂಗತಿ ಅಲ್ಲ. ಗೌರವದ, ಸ್ವಾಭಿಮಾನದ ಸಂಗತಿ’ ಎಂದರು.