
ಬೆಂಗಳೂರು (ಸೆ.10): ನಮ್ಮ ಜೆಡಿಎಸ್ ಪಕ್ಷ ಹುಟ್ಟಿದ್ದು ಎಲ್ಲಿ ಎಂದು ಎಲ್ಲರೂ ಕೇಳ್ತಾರೆ. ದೇಶದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಎಮರ್ಜೆನ್ಸಿ ವಿರುದ್ದ ಜನತಾ ಪರಿವಾರ ಹುಟ್ಟಿತು. ಆಗ 5 ಪಾರ್ಟಿ ಸೇರಿ ಜನತಾಪಾರ್ಟಿ ಹುಟ್ಟಿಕೊಂಡಿತು. ಜಯಪ್ರಕಾಶ್ ನಾರಾಯಣ್ (ಜೆಪಿ) ಅವರಿಂದ ಜನತಾ ಪಾರ್ಟಿ ಸ್ಥಾಪನೆಯಾಯಿತು. ಅದರ ತುಣಕು ಇಂದಿನ ಬಿಜೆಪಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪ್ರಧಾನಿ ಇದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ವೇಳೆ 5 ಪಕ್ಷಗಳನ್ನು ಒಗ್ಗೂಡಿಸಿ ಜೆಪಿ ಅವರು ಜನತಾಪಾರ್ಟಿ ಕಟ್ಟಿದರು. ಅದರ ಒಂದು ತುಣುಕು ಬಿಜೆಪಿ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ನವರು ನಮ್ಮನ್ನ ಮುಖ್ಯಮಂತ್ರಿ ಮಾಡ್ತೀವಿ ಅಂತ ಕೈ ಎತ್ತಿಸಿ ನಡು ನೀರಿನಲ್ಲಿ ಕೈ ಬಿಟ್ಟರು. ಇಂಡಿಯಾ ಒಕ್ಕೂಟಕ್ಕೆ ಕನಿಷ್ಠ ಪಕ್ಷವೂ ಹೆಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಲಿಲ್ಲ. ನಿಮಗೆ ಯಾವ ನೈತಿಕತೆ ಇದೆ ದೇವೇಗೌಡರ ಬಗ್ಗೆ ಮಾತಾಡೋಕೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಂದ ಹಿಡಿದು ಚುನಾವಣೆಯಲ್ಲಿ ಸೋತಿರೋರನ್ನ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗ್ತೀನಿ. ಯಾರನ್ನು ಕೈ ಬಿಡೋದಿಲ್ಲ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಬೇಡಿ ಎಂದು ಹೇಳಿದರು.
ರಾಜ್ಯದ ಎಲ್ಲ ನಾಯಕರ ನೈತಿಕತೆ ಬಗ್ಗೆ ವಿಶ್ಲೇಷಣೆ ಮಾಡಬಲ್ಲೆ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಕಾಂಗ್ರೆಸ್ ಪಾಪದ ಕೊಡ ತುಂಬಿದೆ: ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಈ ಸರ್ಕಾರದ ಭವಿಷ್ಯ ನನಗೆ ಗೊತ್ತಿದೆ. ಶಾಸಕರು ಅವರ ಕ್ಷೇತ್ರಕ್ಕೆ ಹೋಗಲು ಆಗ್ತಿಲ್ಲ. ಯಾವ ಸಮಯದಲ್ಲಿ ಏನ್ ಸ್ಪೋಟ ಆಗುತ್ತೋ ಗೊತ್ತಿಲ್ಲ. ಬಿಜೆಪಿ, ಜೆಡಿಎಸ್ ನಿಂದ ಶಾಸಕರು ಬರ್ತಾರೆ ಅಂತಾರೆ. ನೀವು ಏನು ಕಿಸಿದಿದ್ದೀರಾ ಅಂತ ನಿಮ್ಮ ಜೊತೆ ಬರ್ತಾರೆ. ಆಪರೇಷನ್ ಕೋ ಆಪರೇಷನ್ ಅಂತಾರೆ. ನಾಚಿಕೆ ಆಗೊಲ್ಲವಾ? ಶಾಸಕರ ಮನೆ ಬಾಗಿಲಿಗೆ ಹೋಗಿ ಆಪರೇಷನ್ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪರೇಷನ್ ಹಸ್ತದ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ಕಿರುಕುಳದ ನಡುವೆ ಸಾಲ ಮನ್ನಾ ಮಾಡಿದ್ರೂ ಸರ್ಕಾರ ತೆಗೆದ್ರು: ಇನ್ನು ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡೋಕೆ ನಮ್ಮ ಕಾರ್ಯಕರ್ತರು ಒಪ್ಪಿಲ್ಲ. ಆದರು ನಾವು ಸರ್ಕಾರ ಮಾಡಿದ್ದೆವು. ಅವರ ಕಿರುಕುಳ ತಿಂದು ರೈತರ ಸಾಲಮನ್ನಾ ಮಾಡಿದೆ. ಆದ್ರು ನನ್ನ ಸರ್ಕಾರ ತೆಗೆದರು. ಕಾಲ ಚಕ್ರ ಉರುಳುತ್ತದೆ. ಇನ್ನು 15 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ ಅಂತಾರೆ. ಹಿಂದೆಯೂ ಅನೇಕರು ಹೀಗೆ ಹೇಳಿದ್ದರು, ಆದ್ರೆ ಏನ್ ಆಯ್ತು. ಕಾರ್ಯಕರ್ತರಿಗೆ ಎಷ್ಟು ಕಷ್ಟ ಆಗಿದೆ ಗೊತ್ತಿದೆ ಎಂದರು.
2006ರಲ್ಲಿ ದೇವೇಗೌಡರ ಮಾತಿಗೆ ವಿರುದ್ಧವಾಗಿ ಮೈತ್ರಿ, ಈಗ ಒಪ್ಪಿಗೆ ಪಡೆದು ಮೈತ್ರಿ: ದೇಶದಲ್ಲಿ ಜಿ-20 ಶೃಂಗಸಭೆಗೆ ಕೊಡಬೇಕಾದ ಮಹತ್ವಕ್ಕಿಂತ ಮಾಧ್ಯಮಗಳು ನಮಗೆ ಬೆಂಬಲ ಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳ್ತೀನಿ. ಅಲ್ಪಸಂಖ್ಯಾತ ರಕ್ಷಣೆಗೆ ಕಾಂಗ್ರೆಸ್ ಏನು ಮಾಡೊಲ್ಲ. ಮುಂದೆ ಅಲ್ಪಸಂಖ್ಯಾತರ ರಕ್ಷಣೆ ಜೆಡಿಎಸ್ ಗೆ ಬರಬೇಕು. ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಮರಳಾಗಬೇಡಿ 2006ರಲ್ಲಿ ದೇವೇಗೌಡರ ವಿರೋಧವಾಗಿ ಮಾಡಿದ್ದ ದೋಸ್ತಿ ನಿರ್ಧಾರ, ಇವತ್ತು ಅವರ ಒಪ್ಪಿಗೆ ಪಡೆದು ಮಾಡ್ತಿದ್ದೇನೆ. 2006 ರಲ್ಲಿ ಬಿಜೆಪಿಗೆ ಅಧಿಕಾರ ಕೊಡದೇ ಇರೋಕೆ ಕಾಂಗ್ರೆಸ್ ಅವರೇ ಕಾರಣ. ಅವತ್ತು ಶಾಸಕರನ್ನ ಬಸ್ ನಲ್ಲಿ ಕರೆದುಕೊಂಡು ಹೋದವರು ಈಗ ಮುಸ್ಲಿಮರ ರಕ್ಷಣೆಗೆ ನಾನೇ ಇದ್ದೀನಿ ಅಂತ ಹೇಳ್ತಿದ್ದಾರೆ ಎಂದರು.
ರಾಜಕಾರಣ ಪ್ರವೇಶದ ಬಗ್ಗೆ ಮುಕ್ತವಾಗಿ ಮಾತನಾಡಿದ ಮೈಸೂರು ರಾಜ ಯದುವೀರ ಒಡೆಯರ್
ನಾಡಿನ ರಕ್ಷಣೆಗೆ ಹೊಸ ಅಧ್ಯಾಯ: ನಮ್ಮ ನಿಲುವು ಸರ್ವಜನಾಂಗದ ಶಾಂತಿಯ ತೋಟ ಅಂತ ನಾವು ಹೊಸ ಅಧ್ಯಾಯ ಪ್ರಾರಂಭ ಮಾಡ್ತಿದ್ದೇವೆ. 2006 ರಲ್ಲಿ ಆದ ಅಧ್ಯಾಯ ಮತ್ತೆ ಆಗಬೇಕು ಅಂತ ತೀರ್ಮಾನ ಮಾಡಲಾಗಿದೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ತೀರ್ಮಾನ ಮಾಡ್ತೀವಿ. ನಿಮ್ಮ ರಕ್ಷಣೆ, ನಾಡಿನ ರಕ್ಷಣೆ ಜೊತೆಗೆ ತೀರ್ಮಾನಕ್ಕೆ ಹೊಸ ಅಧ್ಯಾಯ ಶುರು ಮಾಡ್ತೀವಿ. ಏಳಿ ಎದ್ದೇಳಿ ವಿವೇಕರವಾಣಿ ಅಂತ ಹೋರಾಟ ಮಾಡೋಣ. ನನ್ನ ಬದುಕು ಆರೂವರೆ ಕೋಟಿ ಜನರಿಗೆ ಮೀಸಲು ಇಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ