ವಿಧಾನ ಪರಿಷತ್: ಸಭಾಪತಿ ಹುದ್ದೆಗೆ ಬಿಜೆಪಿ ಅಭ್ಯರ್ಥಿ ಹೊರಟ್ಟಿ ಫೈನಲ್‌

By Kannadaprabha News  |  First Published Dec 20, 2022, 11:51 AM IST
  • ಸಭಾಪತಿ ಹುದ್ದೆಗೆ ಬಿಜೆಪಿ ಅಭ್ಯರ್ಥಿ ಹೊರಟ್ಟಿಫೈನಲ್‌
  • ನಾಳೆ ಚುನಾವಣೆ, ಇಂದು ನಾಮಪತ್ರ ಸಲ್ಲಿಕೆ
  • ಸಚಿವ ಕೋಟ ನೇತೃತ್ವದಲ್ಲಿ ಸಭಾಪತಿ ಆಯ್ಕೆಗೆ ಸಭೆ

ಸುವರ್ಣಸೌಧ ಬೆಳಗಾವಿ (ಡಿ.20) : ವಿಧಾನ ಪರಿಷತ್‌ನ ನೂತನ ಸಭಾಪತಿ ಸ್ಥಾನಕ್ಕೆ ಬೆಳಗಾವಿಯಲ್ಲಿ ಬುಧವಾರ ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರು ಮಂಗಳವಾರ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.

ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಅವರನ್ನು ನಿರೀಕ್ಷೆಯಂತೆ ಪಕ್ಷದ ಅಭ್ಯರ್ಥಿಯಾಗಿ ಅಂತಿಮಗೊಳಿಸಿದ್ದು, ಅಧಿಕೃತ ಘೋಷಣೆಯಷ್ಟೆಬಾಕಿ ಇದೆ. ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಅವರು ಪರಿಷತ್‌ನ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Tap to resize

Latest Videos

ಡಾ.ವಿದ್ಯಾ ಕುಂದರಗಿ ಸೃಜನಶೀಲ ಬರಹಗಾರರು: ಬಸವರಾಜ ಹೊರಟ್ಟಿ

ಸೋಮವಾರ ಮೇಲ್ಮನೆಯಲ್ಲಿ ಸಂತಾಪ ಸೂಚನೆ ಬಳಿಕ ಮೊದಲ ದಿನದ ಕಲಾಪ ಮಂಗಳವಾರಕ್ಕೆ ಮುಂದೂಡಿಕೆ ಕಂಡಿತು. ಹೀಗಾಗಿ ಮಧ್ಯಾಹ್ನ ಪರಷತ್ತಿನ ಸಭಾಂಗಣದಲ್ಲಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರು ನೂತನ ಸಭಾಪತಿ ಆಯ್ಕೆ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಪ್ರಮುಖವಾಗಿ ಸಭಾಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿತು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಬುಧವಾರ ನಡೆಯುವ ಚುನಾವಣೆಯಲ್ಲಿ ಪಕ್ಷದ ಎಲ್ಲ ಸದಸ್ಯರೂ ಹೊರಟ್ಟಿಅವರ ಪರವಾಗಿ ಮತ ಸೂಚಿಸುವ ಅವರ ಆಯ್ಕೆಗೆ ಸಹಕರಿಸಬೇಕು ಎಂದು ಸಭಾನಾಯಕರು ಸದಸ್ಯರಿಗೆ ಸೂಚಿಸಿದರು. ಇದಕ್ಕೆ ಎಲ್ಲ ಸದಸ್ಯರು ಕೂಡ ಸಹಮತ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಹಾಲಿ ಹಂಗಾಮಿ ಸಭಾಪತಿ ರಘುನಾಥ ಮಲ್ಕಾಪುರೆ ಅವರು ಪ್ರಬಲ ಆಕಾಂಕ್ಷಿಯಾಗಿದ್ದರಾದರೂ ಹೊರಟ್ಟಿಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಸಮಯದಲ್ಲೇ ಅವರಿಗೆ ಸಭಾಪತಿ ಹುದ್ದೆಯ ಭರವಸೆ ನೀಡಲಾಗಿತ್ತು. ಬಿಜೆಪಿ ಸೇರುವಾಗ ಹೊರಟ್ಟಿಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೂ ಮಾತುಕತೆ ನಡೆಸಿದ್ದರು. ಅತ್ಯಂತ ಹಿರಿಯ ಸದಸ್ಯರಾದ ಹೊರಟ್ಟಿಅವರಿಗೆ ಈಗಾಗಲೇ ಸಭಾಪತಿ ಸ್ಥಾನ ನಿರ್ವಹಿಸಿದ ಅನುಭವವಿದೆ. ಹಾಗಾಗಿ ಸದನವನ್ನು ಸಮತೂಕದಲ್ಲಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಆಡಳಿತ ಪಕ್ಷವಲ್ಲದೆ ವಿರೋಧ ಪಕ್ಷದವರೂ ಹೊರಟ್ಟಿಅವರ ಬಗ್ಗೆ ಗೌರವ ಹೊಂದಿದ್ದಾರೆ. ಹಾಗಾಗಿ ಸಭಾಪತಿ ಸ್ಥಾನಕ್ಕೆ ಅವರನ್ನೇ ಪಕ್ಷ ಅಂತಿಮಗೊಳಿಸಿದೆ.

ಬಸವರಾಜ ಹೊರಟ್ಟಿ ಸಭಾಪತಿ ಅಂತಿಮ?

75 ಸದಸ್ಯ ಸ್ಥಾನಗಳಿರುವ ಪರಿಷತ್‌ನಲ್ಲಿ ಬಿಜೆಪಿ 39, ಪ್ರತಿಪಕ್ಷ ಕಾಂಗ್ರೆಸ್‌ 26 ಮತ್ತು ಜೆಡಿಎಸ್‌ 8 ಸ್ಥಾನಗಳನ್ನು ಹೊಂದಿದೆ. ಸಭಾಪತಿ ಹುದ್ದೆಗೆ ಆಯ್ಕೆಯಾಗಲು 38 ಮತಗಳು ಬೇಕು. ಹಾಗಾಗಿ ಬಿಜೆಪಿ ಸಲೀಸಾಗಿ ಗೆಲುವು ಸಾಧಿಸಲಿದೆ. ಹೊರಟ್ಟಿಅವರಿಗೆ ಆಡಳಿತ ಪಕ್ಷದ ಜತೆಗೆ ಪ್ರತಿಪಕ್ಷದ ಕೆಲವರೂ ಮತ ಸೂಚಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

click me!