ಬಳ್ಳಾರಿ ಚಲೋ ಬಿಜೆಪಿ ಯಾತ್ರೆಗೆ ತೆರೆ: ನಾಗೇಂದ್ರನ ಬಿಟ್ಟು ಕಾಂಗ್ರೆಸ್ ಬುಡಕ್ಕೆ ಕೈ ಹಾಕಿದ ಬಿ.ವೈ.ವಿಜಯೇಂದ್ರ

Sathish Kumar KH   | Kannada Prabha
Published : Sep 11, 2026, 06:46 AM IST
Ballari Chalo BJP BY Vijayendra

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಯು ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಂಡಿದೆ. ಇದು ಭ್ರಷ್ಟಾಚಾರದ ವಿರುದ್ಧದ ಯುದ್ಧದ ಆರಂಭವಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿ ವಿಜಯೇಂದ್ರ ಗುಡುಗಿದ್ದಾರೆ. ಅಲ್ಲದೆ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಮ್ಮ ಈ ಪಾದಯಾತ್ರೆಯ ಸಮಾರೋಪ ಹೋರಾಟದ ಅಂತ್ಯವಲ್ಲ, ಭ್ರಷ್ಟಾಚಾರದ ವಿರುದ್ಧದ ನಮ್ಮ ಯುದ್ಧದ ಆರಂಭ ಎಂದು ಅಬ್ಬರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪರ್ಯಟನೆ ಮಾಡುತ್ತೇವೆ. ಈ ದರಿದ್ರ, ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಗುಡುಗಿದ್ದಾರೆ.

ಉರಿಬಿಸಿಲಿನ ತಾಪಕ್ಕೆ ಹೆಸರಾಗಿರುವ ಗಣಿನಾಡು ಬಳ್ಳಾರಿ ಗುರುವಾರ ಸಂಜೆ ನಡೆದ ಬೃಹತ್ ರಾಜಕೀಯ ಸಮಾವೇಶಕ್ಕೆ ಸಾಕ್ಷಿಯಾಯಿತು. ವಾಲ್ಮೀಕಿ ನಿಗಮದ 187 ಕೋಟಿ ರು. ವಾಪಸ್‌ಗೆ ಆಗ್ರಹಿಸಿ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ರಾಯಚೂರು ಜಿಲ್ಲೆಯಲ್ಲಿ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ, 187 ಕಿ.ಮೀ. ಕ್ರಮಿಸಿ 3 ಜಿಲ್ಲೆಗಳನ್ನು ಹಾದು ಸೆ.9ರಂದು ಬಳ್ಳಾರಿ ತಲುಪಿತ್ತು. ಗುರುವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅದ್ಧೂರಿ ಸಮಾರೋಪದೊಂದಿಗೆ ತೆರೆ ಕಂಡಿತು.

ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಆರಂಭಿಸಿರುವ ಹೋರಾಟ ಮುಂದುವರಿಯಲಿದ್ದು, ರಣರಂಗದಲ್ಲಿ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ

ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶದ ಮೂಲಕ ಮೊದಲ ಹಂತದ ಹೋರಾಟ ಅಂತ್ಯಗೊಂಡಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿಯೂ ಜನರ ಪರ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಸಮರ ಆರಂಭವಾಗಿದ್ದು, ಇದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ವಿಜಯೇಂದ್ರ ಹೇಳಿದರು.

ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮುಖ್ಯಮಂತ್ರಿಗಳೇ ಹೇಳಿಕೊಳ್ಳುವಂತೆ ಅವರು, ಶೇ.90ರಷ್ಟು ಬಿಜಿನೆಸ್ ಮ್ಯಾನ್, ಶೇ.10ರಷ್ಟು ಮಾತ್ರ ರಾಜಕಾರಣಿಯಾಗಿದ್ದಾರೆ. ಒಬ್ಬ ಬಿಜಿನೆಸ್ ಮ್ಯಾನ್‌ನಿಂದ ರಾಜ್ಯದ ಕಲ್ಯಾಣ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಿಲ್ಲ. ಇಡೀ ರಾಜ್ಯದ ಪ್ರಗತಿ ಹಿನ್ನಡೆಯತ್ತ ಮುಖ ಮಾಡಿದೆ. ಹೀಗಾಗಿ, ರಾಜ್ಯದ ಪ್ರಗತಿಯ ದೃಷ್ಟಿಯಿಂದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹200 ಕೋಟಿ ಬಿಡುಗಡೆ ಮಾಡಬೇಕು. ಎಸ್ಸಿಟಿಎಸ್ಪಿ ಹಣ ಬಳಕೆ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾಲ ಮನ್ನಾ, 3 ಫೇಸ್ ನಿರಂತರ ವಿದ್ಯುತ್

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ನಾಡಿನ ಎಲ್ಲ ರೈತರ ₹5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು. ತ್ರಿಫೇಸ್ ವಿದ್ಯುತ್ ಇಲ್ಲದೆ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಬೋರ್ಡ್‌ಗಳಿಗೆ ₹2 ಸಾವಿರ ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ರೈತರ ಸಾಲ ಮನ್ನಾ ಮಾಡಿ ಎಂದರೆ ಮೋದಿ ಹತ್ತಿರ ಹೋಗೋಣ ಅಂತಾರೆ. ಆದರೆ, ಹಿಂದೆ ಯಡಿಯೂರಪ್ಪ ಇದ್ದಾಗ ರಾಜ್ಯದಿಂದಲೇ ಪರಿಹಾರ ಕೊಟ್ರು. ರೈತರ ಸಾಲ ಮನ್ನಾ ಮಾಡಿದ್ರು. ಈಗ ಮಹಾರಾಷ್ಟ್ರ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲವೇ? ಸಾಲ ಮನ್ನಾ ಮಾಡದಿದ್ದರೆ ರೈತರೇ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಜ್ವಲ್ ರೇವಣ್ಣ ಜೈಲಲ್ಲಿ ಬಳಸಿದ ಮೊಬೈಲ್ ರಹಸ್ಯ ಬಯಲು; ಆಂಧ್ರ, ಡಿ.ಜೆ.ಹಳ್ಳಿ ಗಲಭೆಕೋರ, 173 ವಿಡಿಯೋ..,
ಡಿಕೆಶಿ 100 ದಿನದ ಸರ್ಕಾರ ಸರಿದಾರಿಯಲ್ಲಿದೆ, ಬರ ನಿರ್ವಹಣೆಗೆ ಕೇಂದ್ರದ ಹಣ ಕಾಯಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ